
ರಾಜ್ಯದಲ್ಲಿ ಅ.15ರ ವರೆಗೆ ಮಳೆ: 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಅ.15ರವರೆಗೆ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Published : October 10, 2025 at 9:53 AM IST
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಇನ್ನೂ ಸಹ ಕಡಿಮೆಯಾಗಿಲ್ಲ. ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚುರುಕು ಪಡೆದಿದ್ದು, ಕಳೆದ ಎರಡು ದಿನಗಳಿಂದ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಗುರುವಾರ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಕರ್ನಾಟಕದಲ್ಲಿ ಅಕ್ಟೋಬರ್ 15ರವರೆಗೆ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಗದಗ, ಹಾವೇರಿ, ಧಾರವಾಡ, ಕೊಪ್ಪಳ, ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದಿರುವ ಹವಾಮಾನ ಇಲಾಖೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ.
ಹೆಚ್ಚು ಮಳೆ ದಾಖಲಾದ ಪ್ರದೇಶಗಳು (ಕಳೆದ 24 ಗಂಟೆಗಳ ವಿವರ):
- ಹರಪನಹಳ್ಳಿ 146 ಮಿ.ಮೀ.
- ಬೇಲೂರು 122 ಮಿ.ಮೀ.
- ದಾವಣಗೆರೆ 114.5 ಮಿ.ಮೀ.
- ಚಿಕ್ಕಮಗಳೂರು 108 ಮಿ.ಮೀ.
- ಮೂಡಿಗೆರೆ 78.5 ಮಿ.ಮೀ.
- ಕೂಡ್ಲಿಗಿ 82 ಮಿ.ಮೀ.
- ಕುಣಿಗಲ್ 78.5 ಮಿ.ಮೀ.
- ಚಿಕ್ಕನಾಯಕನಹಳ್ಳಿ 76.5 ಮಿ.ಮೀ.
- ಕೂಡ್ಲಿಗಿ 82 ಮಿ.ಮೀ ಮಳೆ ದಾಖಲಾಗಿದೆ.
ಬೆಂಗಳೂರಿನ ಹಲವೆಡೆ ರಸ್ತೆಗಳು ಜಲಾವೃತ: ಇನ್ನು ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಮಳೆಯ ಪರಿಣಾಮ ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಭಾಗದ ರೂಪೇನ ಅಗ್ರಹಾರ, ಬೊಮ್ಮನಹಳ್ಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದು, ಸಿದ್ದಾಪುರ - ವರ್ತೂರು ಮುಖ್ಯರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಯಲಹಂಕದ ಕಾಫಿ ಡೇ ಬಳಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಏರ್‌ಪೋರ್ಟ್ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಂದಿನ ಎರಡ್ಮೂರು ದಿನಗಳೂ ಸಹ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧಾರವಾಡ-ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಮಳೆ: ಬುಧವಾರ ಮಧ್ಯರಾತ್ರಿ ಧಾರವಾಡ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ.
ಮಳೆಯಿಂದ ಹರಿಹರ ತಾಲೂಕಿನ ಸಂಕ್ಲಿಪುರ-ಗುಳ್ಳದಹಳ್ಳಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡು, ಎರಡು ಗ್ರಾಮದ ಜನರಿಗೆ ತೊಂದರೆಯಾಗಿದೆ. ಅಲ್ಲದೇ ನೂರಾರು ಎಕರೆ ಅಡಿಕೆ ತೋಟದಲ್ಲಿ ನೀರು ನಿಂತು, ಮಳೆ ರೈತನ ತಲೆಬಿಸಿ ಹೆಚ್ಚಿಸಿದ್ದು, ಭತ್ತ ಕೊಯ್ಲಿಗೂ ಮುನ್ನವೇ ನೆಲಕಚ್ಚಿದೆ.
ಇನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಸುರಿದ ಮಳೆಗೆ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಪಟ್ಟಣದ ಸುರಕೋಡ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದ್ದು, ಸ್ಥಳಕ್ಕೆ ಶಾಸಕ ಎನ್ ಹೆಚ್ ಕೋನರಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಅಲ್ಲದೇ ಪಟ್ಟಣ ವಿವಿಧ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಅಪಾರ ಹಾನಿಯಾಗಿದ್ದು, ಪ್ರಭಾರ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ್ ಹಾಗೂ ಅವರ ತಂಡ ಗುರುವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಮಳೆ ಹಾನಿ ಪರಿಶೀಲಿಸಿದರು.
ಸುರಕೋಡ ಬಡಾವಣೆ ನಿವಾಸಿಗಳೊಂದಿಗೆ ಚರ್ಚಿಸಿದ ಅಧಿಕಾರಿಗಳು, ನಿಂತ ನೀರನ್ನು ಸಂಪೂರ್ಣವಾಗಿ ಹರಿದು ಹೋಗುಬಂತೆ ತಕ್ಷಣ ಪರಿಹಾರ ಕ್ರಮಕೈಗೊಳ್ಳಲು ಮತ್ತು ಜಲಾವೃತಪ್ರದೇಶದ ಮನೆಗಳಲ್ಲಿನ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸೂಚಿಸಿದರು.
ಬಡಾವಣೆ ಮೂಲ ನಕ್ಷೆಯನ್ನು ಪರಿಶೀಲಿಸಿ, ರಾಜಕಾಲುವೆ ಹಾಗೂ ಚರಂಡಿ ಒತ್ತುವರಿಯನ್ನು ತೆರವುಗೊಳಿಸಬೇಕು, ಬಡಾವಣೆಗೆ ಬರುವ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥಿತ ಯೋಜನೆ ರೂಪಿಸಿ, ಕಾಮಗಾರಿ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ಹಾಗೂ ಪ್ರಸ್ತಾವನೆ ರೂಪಿಸಲು ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಹರಿಜನಕೇರಿ ಪ್ರದೇಶಕ್ಕೆ ಭೇಟಿ ನೀಡಿ, ಮಳೆ ನೀರು ಹರಿಯುವ ಹಾಗೂ ಒಳಚರಂಡಿ, ರಸ್ತೆ ನಿರ್ಮಾಣದ ಬಗ್ಗೆ ಪರಿಶೀಲಿಸಿ, ಪುರಸಭೆಯಿಂದ ಕಾಮಗಾರಿ ಕೈಗೊಳ್ಳಲು ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ವೇಳೆ ಸಾರ್ವಜನಿಕರು ಮಾತನಾಡಿ, ರಸ್ತೆಯ ಪಕ್ಕದಲ್ಲಿ ಒಳಚರಂಡಿ ಕಿರಿದಾಗಿದ್ದು, ಹೂಳು ತುಂಬಿ ನೀರು ಹೊರಬರುತ್ತದೆ. ಪಟ್ಟಣದ ಸುತ್ತಲಿನ ಹಳ್ಳಿಗಳ ಜಮೀನುಗಳ ನೀರು ಪಟ್ಟಣಕ್ಕೆ ಬರುತ್ತದೆ. ಇದರಿಂದಾಗಿ ಹೆಚ್ಚು ಹಾನಿ ಆಗುತ್ತಿದೆ. ರಾಜಕಾಲುವೆಗೆ ಮಳೆ ನೀರು ಹರಿದು ಹೋಗಲು ಶಾಶ್ವತ ಪರಿಹಾರ ನೀಡಬೇಕು. ಅಲ್ಲದೇ ರಾಜಕಾಲುವೆಯ ವಿಸ್ತೀರ್ಣವನ್ನು ಅಗಲೀಕರಣ ಮಾಡಬೇಕೆಂದು ಪ್ರಭಾರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
7 ಮನೆ ಭಾಗಶಃ ಹಾನಿ: ಬುಧವಾರ ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ಧಾರವಾಡದ ಸುಮಾರು 7 ಮನೆಗಳಿಗೆ ಭಾಗಶಃ ಹಾನಿಯಾದ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ವರದಿ ಸಲ್ಲಿದ್ದಾರೆ. ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ವರದಿ ಸಲ್ಲಿಸಿದ ತಕ್ಷಣ ಹಾನಿಗೆ ಅನುಗುಣವಾಗಿ ಸರ್ಕಾರದ ನಿಯಮಾನುಸಾರ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಮಳೆಯಿಂದ ಜನಜಾನುವಾರುಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ್ ಸೂಚಿಸಿದರು.
ಸಿಡಿಲು ಬಡಿದು 8 ಕುರಿಗಳ ಸಾವು: ಗುಡುಗು, ಸಿಡಿಲು ಮಳೆಗೆ ಪಟ್ಟಣದ ಹೊರ ವಲಯದಲ್ಲಿದ್ದ ಮಲ್ಲಪ್ಪ ಬೆಳ್ಳಿಕೊಪ್ಪ ಅವರ 8 ಕುರಿಗಳು ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ. ಪಶು ವೈದ್ಯಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಅಂತಿಮ ವರದಿ ಸಲ್ಲಿಸಿದ ತಕ್ಷಣ ಮೃತ ಕುರಿಗಳ ಮಾಲೀಕರ ಖಾತೆಗೆ ಪರಿಹಾರ ಹಣ ಜಮೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಮಳೆಗೆ ಕೊಚ್ಚಿ ಸೇತುವೆ: ಅಣ್ಣಿಗೇರಿ ತಾಲೂಕಿನ ಸೈದಾಪುರ ಮತ್ತು ಹೊಸಳ್ಳಿ ಸಂಪರ್ಕಿಸುವ ಹೊರೆಹಳ್ಳದ ಕಿರು ಸೇತುವೆ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇದು ಜಿ.ಪಂ ರಸ್ತೆ ಆಗಿದ್ದು, ಸೇತುವೆ ನಿರ್ಮಾಣಕ್ಕೆ ತಕ್ಷಣ ಕ್ರಿಯಾಯೋಜನೆ ರೂಪಿಸಿ, ಸಲ್ಲಿಸುವಂತೆ ಇಂಜನಿಯರ್ಗೆ ಸೂಚನೆ ನೀಡಿದರು. ಮತ್ತು ಇದೇ ವೇಳೆ ಹಳ್ಳಿಕೇರಿ - ಇಬ್ರಾಹಿಂಪುರ ರಸ್ತೆ ಸಂಪರ್ಕ ಹಾನಿಯಾದ ಬಗ್ಗೆ ಅವರು ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಮಳೆ ಅವಾಂತರ, ಅಡಿಕೆ ತೋಟಗಳಿಗೆ ನುಗ್ಗಿದ ನೀರು, ನೆಲಕಚ್ಚಿದ ಭತ್ತ - HEAVY RAINFALL

