ಕಾರವಾರ: ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಎಂಬವರ ಪುತ್ರಿಗೆ ಕೊಟ್ಟ ಮಾತಿನಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೈಗಾದ ಅಣುವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಬಿಎಚ್ಇಎಲ್ ಕಂಪೆನಿಯಲ್ಲಿ ಉದ್ಯೋಗ ಒದಗಿಸಿದ್ದಾರೆ.
ಹೆಚ್‌ಡಿಕೆ ಶಿರೂರು ಗುಡ್ಡಕುಸಿತ ವೀಕ್ಷಣೆಗೆ ಆಗಮಿಸಿದ್ದಾಗ ಜಗನ್ನಾಥ ನಾಯ್ಕ ಮಕ್ಕಳಿಗೆ ಸಾಂತ್ವನ ಹೇಳಿದ್ದರು. ಸ್ಥಳೀಯರು ಜಗನ್ನಾಥ ಕುಟುಂಬ ಸಂಕಷ್ಟದಲ್ಲಿರುವ ಬಗ್ಗೆ ತಿಳಿಸಿದಾಗ ಸಚಿವರು, ಉದ್ಯೋಗದ ಭರವಸೆ ನೀಡಿದ್ದರು. ಅದರಂತೆ, ಕೈಗಾದ ಅಣುವಿದ್ಯುತ್ ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಬಿಹೆಚ್ಇಎಲ್ ಕಂಪೆನಿಯಲ್ಲಿ ಉದ್ಯೋಗ ನೀಡುವ ಕುರಿತು ದೂರವಾಣಿ ಕರೆ ಮೂಲಕ ಖಚಿತಪಡಿಸಿರುವ ಬಗ್ಗೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾಹಿತಿ ನೀಡಿದರು.
ಹೆಚ್ಡಿಕೆಗೆ ಧನ್ಯವಾದ ತಿಳಿಸಿದ ಯುವತಿ: ಉದ್ಯೋಗ ದೊರಕಿರುವ ಸಂತಸದಲ್ಲಿರುವ ಜಗನ್ನಾಥ ನಾಯ್ಕರ ಪುತ್ರಿಯೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಈ ವೇಳೆ ಯುವತಿ ಧನ್ಯವಾದ ತಿಳಿಸಿದರು.
ಬಳಿಕ ಪ್ರತಿಕ್ರಿಯಿಸಿದ ಯುವತಿ, "ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ನಮ್ಮ ತಂದೆ ಕಣ್ಮರೆಯಾಗಿದ್ದರು. ಅದಾದ 5ನೇ ದಿನ ಕುಮಾರಸ್ವಾಮಿಯವರು ನಮ್ಮ ಊರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ನಮ್ಮ ಪರಿಸ್ಥಿತಿಯನ್ನು ಹೇಳಿಕೊಂಡಾಗ ನಿಮಗೆ ಉದ್ಯೋಗ ನೀಡುತ್ತೇನೆ. ಜೆಡಿಎಸ್ ಮುಖಂಡ ಸೂರಜ್ ಬಳಿ ನಾನು ಈ ಬಗ್ಗೆ ತಿಳಿಸುತ್ತೇನೆ. ನೀವು ಅವರೊಂದಿಗೆ ಸಂಪರ್ಕದಲ್ಲಿರಿ ಎಂದಿದ್ದರು. ಅದೇ ರೀತಿ ನನಗೆ ಬಿಎಚ್ಇಎಲ್ ಕಂಪೆನಿಯಲ್ಲಿ ಕೆಲಸ ಕೊಡಿಸಿ ನುಡಿದಂತೆ ನಡೆದುಕೊಂಡಿದ್ದಾರೆ. ಈ ಸಹಾಯಕ್ಕೆ ಕುಮಾರಸ್ವಾಮಿ ಅವರಿಗೂ, ಸೂರಜ್ ಸರ್ಗೂ, ಎಲ್ಲರಿಗೂ ಧನ್ಯವಾದ" ಎಂದರು.
ಮತ್ತೋರ್ವ ಪುತ್ರಿಗೆ ರಾಜ್ಯ ಸರ್ಕಾರದಿಂದ ಉದ್ಯೋಗ: ಜಗನ್ನಾಥ ನಾಯ್ಕರ ಇನ್ನೋರ್ವ ಪುತ್ರಿಗೆ ಕಳೆದ ವಾರ ಪ್ರವಾಸೋದ್ಯಮ ಇಲಾಖೆಯಲ್ಲಿ ರಾಜ್ಯ ಸರ್ಕಾರ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿತ್ತು.