ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ಕೊಡದೇ ಯಾವುದೇ ಕೆಲಸ ಆಗಲ್ಲ ಎಂಬ ಪ್ರತಿಪಕ್ಷ ಬಿಜೆಪಿ ಆರೋಪದ ಬೆನ್ನಲ್ಲೇ ಹಾವೇರಿ ಗುತ್ತಿಗೆದಾರರ ಸಂಘ ಸಹ ಆಕ್ರೋಶ ಹೊರಹಾಕಿದೆ.
"ಹಾವೇರಿ ಗುತ್ತಿಗೆದಾರರಿಗೆ ಬರಬೇಕಿದ್ದ ಕಾಮಗಾರಿಗಳ ನೂರಾರು ಕೋಟಿ ಹಣ ಪಾವತಿಸದೇ ಸರ್ಕಾರ ಸತಾಯಿಸುತ್ತಿದೆ. ಅಲ್ಲದೆ ಕೆಲವೊಂದು ಇಲಾಖೆಗಳಲ್ಲಿ 10 ರಿಂದ 13 ಪರ್ಸೆಂಟ್ ಕಮಿಷನ್ ಕೊಟ್ಟರೂ ಬಾಕಿ ಹಣ ಬಿಡುಗಡೆ ಮಾಡಿಸದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ" ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಆರೋಪಿಸಿದ್ದಾರೆ.
"ಕೋಟ್ಯಂತರ ರೂಪಾಯಿ ಸಾಲಸೋಲ ಮಾಡಿ ಕಾಮಗಾರಿಗಳಿಗೆ ದುಡ್ಡು ಹಾಕಿ ಬಡ್ಡಿ ಕಟ್ಟಲು ಸಹ ಹಣವಿಲ್ಲ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿ ಬಿಲ್ ಬಾಕಿ ಇದೆ. ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಇನ್ಯಾವುದೇ ಇಲಾಖೆಗಳು ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ. ಸರ್ಕಾರ ಬಾಕಿ ಇರುವ ಅನುದಾನ ಬಿಡುಗಡೆ ಮಾಡಲಿ" ಎಂದು ಮನವಿ ಮಾಡಿದರು.
"ಈ ಮಧ್ಯೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಮಿಷನ್ ಕೊಡದೇ ಕೆಲಸ ಆಗಲ್ಲ. ಒಂದು ವರ್ಷ ಮೊದಲೇ ಅಡ್ವಾನ್ಸ್ ಕಮಿಷನ್ ಪಡೆದು ಅಧಿಕಾರಿಗಳು ಕೆಲಸ ಮಾಡಿಕೊಟ್ಟಿಲ್ಲ. ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಮಿಷನ್ ಹಾವಳಿ ಇದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಮಿಷನ್ ಹಾವಳಿ ಹೆಚ್ಚಾಗಿದೆ. ಅಡ್ವಾನ್ಸ್ ಕಮಿಷನ್ ಕೊಟ್ಟರೂ ಬಾಕಿ ಬಿಲ್ ಕ್ಲಿಯರ್ ಮಾಡಿಲ್ಲ. ಸಿವಿಲ್ ಗುತ್ತಿಗೆದಾರರಿಗೆ ಅನ್ಯಾಯ ಆಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಲೋಕೋಪಯೋಗಿ ಇಲಾಖೆಯಲ್ಲಿ ಮಾರ್ಚ್ ಕೊನೆ ಕೊನೆಗೆ ಅನುದಾನ ಬಿಡುಗಡೆ ಆಯ್ತು. ಆದರೆ ಉಳಿದ ಇಲಾಖೆಗಳಲ್ಲಿ ಬಹಳ ತೊಂದರೆ ಆಗಿದೆ. ಆರ್ಡಿಪಿಆರ್ನಲ್ಲಿ ನಾಲ್ಕು ವರ್ಷದ ಬಿಲ್ ಪೆಂಡಿಂಗ್ ಇದೆ. ಬರೀ ಬಡ್ಡಿ ಕಟ್ಟೋದ್ರಲ್ಲೇ ಗುತ್ತಿಗೆದಾರರು ಸಾಯುವ ಪರಿಸ್ಥಿತಿ ಬಂದಿದೆ. ಪರ್ಸೆಂಟೇಜ್ ಕೊಡೋಕೂ ನಾವು ರೆಡಿ ಇದ್ದೇವೆ. ಇಲ್ಲದಿದ್ದರೆ ಗುತ್ತಿಗೆದಾರರು ಬದುಕೋಕೆ ಆಗಲ್ಲ. ನೀರಾವರಿ ಇಲಾಖೆಯಲ್ಲಿ 10 ರಿಂದ 12 ಪರ್ಸೆಂಟ್ ಕೇಳ್ತಿದಾರೆ. ಆರ್ಡಿಪಿಆರ್ನಲ್ಲಿ 8 ರಿಂದ 10 ಪರ್ಸೆಂಟ್ ಫಿಕ್ಸ್ ಇದೆ. ಹಾವೇರಿಯಲ್ಲಿ ಕಮಿಷನ್ ಅಡ್ವಾನ್ಸ್ ಪೇಮೆಂಟ್ ಮಾಡಿದ್ದೇವೆ. ಆದರೂ ಕೆಲಸ ಆಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸರ್ಕಾರದ ವಿವಿಧ ಇಲಾಖೆಗಳಿಂದ ನೂರಾರು ಕೋಟಿ ರೂಪಾಯಿ ಬರಬೇಕಿದೆ. ಬಡ್ಡಿಯಂತೆ ಹಣ ಸಾಲ ಪಡೆದು ಕಾಮಗಾರಿ ಮುಗಿಸಿದ್ದೇವೆ. ಆದರೂ ಬಿಲ್ ಬಿಡುಗಡೆ ಆಗಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದ ನಂತರ ಮಾರ್ಚ್ ಅಂತ್ಯದ ವೇಳೆಗೆ ಕೆಲಕೋಟಿಯಷ್ಟು ಹಣ ಬಿಡುಗಡೆಯಾಗಿದೆ. ನಂತರ ಯಾವುದೇ ಹಣ ಬಿಡುಗಡೆಯಾಗಿಲ್ಲ. ಸರ್ಕಾರ ಕೂಡಲೇ ಬಾಕಿ ಇರುವ ಹಣ ಬಿಡುಗಡೆ ಮಾಡುವ ಮೂಲಕ ಗುತ್ತಿಗೆದಾರರ ನೆರವಿಗೆ ಬರಬೇಕು" ಎಂದು ಸಂಘ ಮನವಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ: SIT ತನಿಖಾ ತಂಡ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನ