ಹಾಸನ: ತಾಳಿ ಕಟ್ಟುವ ವೇಳೆ ವಧು ಮದುವೆ ನಿರಾಕರಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊನೆಗೂ ತಾನು ಪ್ರೀತಿಸಿದ ಪ್ರಿಯಕರನನ್ನೇ ವರಿಸುವ ಮೂಲಕ ಯುವತಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ಮನೆಯಿಂದಲೇ ಮದುವೆ ಮುರಿದ ಯುವತಿ, ಶುಕ್ರವಾರ ಸಂಜೆ ತನ್ನ ಪ್ರಿಯಕರನ ಜೊತೆ ದೇವಸ್ಥಾನದಲ್ಲಿ ಮದುವೆಯಾದರು. ಹಾಸನ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದಲ್ಲಿ ಸರಳವಾಗಿ ತನ್ನ ಸ್ನೇಹಿತರೊಂದಿಗೆ ಆಗಮಿಸಿದ ಯುವತಿ ವಿವಾಹವಾದರು. ಯುವತಿ ಮದುವೆ ನಿರಾಕರಿಸಿದ ಕಲ್ಯಾಣ ಮಂಟಪದ ಆವರಣದಲ್ಲೇ ಈ ದೇವಾಲಯವಿದೆ.
ಯುವತಿಯ ಮನೆಯಲ್ಲಿ ಪೋಷಕರ ಕಣ್ಣೀರು ನಿಲ್ಲದಿದ್ದರೂ ಕೆಲ ಸ್ನೇಹಿತರು, ಸಂಧಾನಕಾರರ ಮಧ್ಯಸ್ಥಿಕೆಯಲ್ಲಿ ಗೋಧೂಳಿ ಲಗ್ನದಲ್ಲಿ ವಿವಾಹ ನೆರೆವೇರಿದೆ.
ಯುವಕ ಹಾಸನದ ಬಸವನಹಳ್ಳಿ ಗ್ರಾಮದ ನಿವಾಸಿಯಾದರೆ, ಯುವತಿ ಭುವನಹಳ್ಳಿ ಗ್ರಾಮದವರು.