ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅಪಹರಿಸಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಎಚ್ಚೆತ್ತುಕೊಂಡಿರುವ ಸರ್ಕಾರ ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ ಇಡಲು ನಿರ್ಧರಿಸಿದೆ. ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಕಾಸಸೌಧದಲ್ಲಿ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು, ಕೈಗಾರಿಕೆಗಳ ಉನ್ನತ ಅಧಿಕಾರಿಗಳು, ಮಾನವ ಸಂಪನ್ಮೂಲ ಹಾಗೂ ಉದ್ಯೋಗದಾತರೊಡನೆ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರ ಕುರಿತು ಮಾಹಿತಿ ಪಡೆಯಲು ಎಲ್ಲರಿಗೂ ತಿಳಿಸಲಾಗಿದೆ. ನೋಂದಾಯಿತ ಮತ್ತು ನೋಂದಾಯಿತವಲ್ಲದ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಶೇಷ ಕಾಯ್ದೆಯ ಮೂಲಕ ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಆರಂಭಿಕ ಸೂಚನೆಗಳನ್ನು ನೀಡಲಾಗಿದೆ ಎಂದರು.
ತಕ್ಷಣವೇ ನಿಮ್ಮಲ್ಲಿರುವ ಕಾರ್ಮಿಕರ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು. ಅವರ ವಿವರಗಳನ್ನು ದಾಖಲು ಮಾಡಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಒಂದೇ ಇಲಾಖೆ ವ್ಯಾಪ್ತಿಯಲ್ಲಿ ಇದನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕಾಯ್ದೆ ತರಲು ತೀರ್ಮಾನಿಸಲಾಗಿದೆ. ಸೂಕ್ತ ಕಾನೂನಿನ ಮೂಲಕ ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ ವಹಿಸಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಮಿಕ ಆಯುಕ್ತ ಗೋಪಾಲ ಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಭಾರತಿ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್, ಅಪರ ಕಾರ್ಮಿಕ ಆಯುಕ್ತರಾದ ಡಾ. ಮಂಜುನಾಥ್, ಕಾರ್ಖಾನೆಗಳು ಮತ್ತು ಬಾಯ್ಲರ್ ಸಂಸ್ಥೆಗಳ ನಿರ್ದೇಶಕ ಶ್ರೀನಿವಾಸ್ ಪಾಲ್ಗೊಂಡಿದ್ದರು.
ಘಟನೆ ಹಿನ್ನೆಲೆ: ಹುಬ್ಬಳ್ಳಿಯಲ್ಲಿ ಭಾನುವಾರ ಬೆಳಗ್ಗೆ ಬಿಹಾರ ಮೂಲದ ರಿತೇಶ್ ಎಂಬಾತ ಆಟ ಆಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಬಳಿಕ ಅತ್ಯಾಚಾರ ಎಸಗಿ ಕೊಲೆಗೈದಿದ್ದ. ಈ ಪೈಶಾಚಿತ ಕೃತ್ಯ ವಿರೋಧಿಸಿ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇನ್ನು ಕೃತ್ಯ ನಡೆದ ದಿನವೇ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದ. ಈ ವೇಳೆ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಆರೋಪಿ ಸಾವನ್ನಪ್ಪಿದ್ದಾನೆ. ಈ ಘಟನೆ ಬಳಿಕ ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾ ಇಡುವಂತೆ ಒತ್ತಾಯ ಕೇಳಿಬಂದಿದೆ. ಈ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್ ಅವರು ಸಭೆ ಕರೆದಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ ಎನ್‌ಕೌಂಟರ್ ಪ್ರಕರಣ: ಆರೋಪಿ ಮೃತದೇಹ ಸಮಾಧಿ ಮಾಡಲಾಗುವುದು - ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ
ಇದನ್ನೂ ಓದಿ: ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ : ಎನ್‌ಕೌಂಟರ್ ಲೇಡಿ ಸಿಂಗಂ ಹಾಡಿ - ಹೊಗಳುತ್ತಿರುವ ಸಾರ್ವಜನಿಕರು