ಬೆಳಗಾವಿ: ಮೀರಜ್ ಕಡೆ ಹೊರಟಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ, ಉರುಳಿ ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ಬೆಳಗಾವಿ ನಗರದ ಮಿಲಿಟರಿ ಮಹಾದೇವ ಮಂದಿರ ಬಳಿ ಸಂಭವಿಸಿತು.
ಹಳಿ ತಪ್ಪಲು ಕಾರಣವೇನು?: ಜಿಂದಾಲ್ ಕಾರ್ಖಾನೆಯಲ್ಲಿ ಕಬ್ಬಿಣದ ಅದಿರು ತುಂಬಿಕೊಂಡು ಮೀರಜ್ ಕಡೆಗೆ ಗೂಡ್ಸ್ ರೈಲು ಹೊರಟಿತ್ತು. ಒಂದು ಹಳಿಯಿಂದ ಮತ್ತೊಂದು ಹಳಿಗೆ ರೈಲನ್ನು ಬದಲಾಯಿಸುವಾಗ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ರೈಲು ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆಯಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಸುಮಾರು 4 ಗಂಟೆ ದುರಸ್ತಿ ಕಾರ್ಯ ನಡೆಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ರೈಲುಗಳ ಸಂಚಾರಕ್ಕೆ ಅಡ್ಡಿ: ಬೆಳಗಾವಿ-ಮೀರಜ್ ಮಾರ್ಗದ ಎಲ್ಲ ರೈಲುಗಳ ಸಂಚಾರ ಬಂದ್ ಆಗಿದ್ದು, ದುರಸ್ತಿ ಕಾರ್ಯ ಮುಗಿದ ಬಳಿಕ ಪುನಃ ಸಂಚಾರ ಆರಂಭವಾಗಲಿದೆ. ಈಗಾಗಲೇ ಮೀರಜ್‌ನಿಂದ ಬರುತ್ತಿದ್ದ ಚಾಲುಕ್ಯ ಶರಾವತಿ ಎಕ್ಸ್‌ಪ್ರೆಸ್, ಎಲ್‌ಟಿಟಿ ದಾದರ್, ಅಜ್ಮೇರ್ ಎಕ್ಸ್‌ಪ್ರೆಸ್ ಮಾರ್ಗಮಧ್ಯದಲ್ಲಿಯೇ ನಿಂತುಕೊಂಡಿವೆ. ಬೆಳಗಾವಿಯಿಂದ ಹೊರಟಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್, ಬೆಂಗಳೂರು ಜೋದ್ಪುರ್ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಭಗತ್ ಕೋಟಿ, ಕ್ಯಾಸಲ್ ರಾಕ್-ಮೀರಜ್ ಪ್ಯಾಸೆಂಜರ್, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ಅಡ್ಡಿ ಉಂಟಾಗಿದೆ.
ಪ್ರಯಾಣಿಕರ ಪರದಾಟ: ಸಂಚಾರ ವ್ಯತ್ಯಯ ಉಂಟಾಗಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಒಂದೆಡೆ ದುರಸ್ಥಿ ಕಾರ್ಯ ಆರಂಭವಾಗಿದ್ದು, ರೈಲು ಹಳಿ ತಪ್ಪಲು ನಿಖರ ಕಾರಣ ತಿಳಿಯಲು ರೈಲ್ವೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮುಖಾಮುಖಿ ಡಿಕ್ಕಿ ಹೊಡೆದ ಗೂಡ್ಸ್ ರೈಲುಗಳು, ಎಂಜಿನ್ಗಳು ನಜ್ಜುಗುಜ್ಜು, ಇಬ್ಬರು ಸಾವು