ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್; 1 ದಿನದ ವೇತನ ಸಹಿತ ಋತು ಚಕ್ರ ರಜೆ
ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡಲು ಸರ್ಕಾರ ತೀರ್ಮಾನಿಸಿದೆ.

Published : October 9, 2025 at 4:56 PM IST
ಬೆಂಗಳೂರು: ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತು ಚಕ್ರ ರಜೆ ನೀತಿ 2025ಗೆ ಸಚಿವ ಸಂಪುಟ ಸಭೆ ಇಂದು ಒಪ್ಪಿಗೆ ಸೂಚಿಸಿದೆ.
ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್ MNCಗಳು, IT ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ "ಋತು ಚಕ್ರ ರಜೆ ನೀತಿ 2025" (Menstrual Leave Policy, 2025)ನ್ನು ಜಾರಿಗೆ ತರಲು ಅನುಮೋದನೆ ನೀಡಲಾಗಿದೆ.
ಸರ್ಕಾರಿ, ಖಾಸಗಿ ಕಂಪನಿ ಸೇರಿದಂತೆ ಉದ್ಯೋಗ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಋತು ಚಕ್ರ ರಜೆ ನೀಡಲು ತೀರ್ಮಾನಿಸಿದೆ. ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿಗಳು, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ನಿಯಮವನ್ನು ಅನುಷ್ಠಾನಗೊಳಿಸಲಾಗುತ್ತದೆ.
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಋತು ಚಕ್ರ ರಜೆ ನೀಡುವ ಸಂಬಂಧ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್. ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿತ್ತು. ಮುಟ್ಟಿನ ಅವಧಿಯಲ್ಲಿ ಎದುರಾಗುವ ಶಾರೀರಿಕ ಬದಲಾವಣೆಗಳಿಂದ ಉದ್ಯೋಗಸ್ಥ ಮಹಿಳೆಯರು ಅನುಭವಿಸುವ ಸಂಕಷ್ಟ, ಸವಾಲುಗಳು, ಕೆಲಸ ಮಾಡುವ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಅನುಸರಿಸಬೇಕಾದ ನಿಯಮಗಳು, ವಿಶ್ರಾಂತಿಯ ಅಗತ್ಯತೆ ಕುರಿತು ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.
ಮುಟ್ಟಿನ ರಜೆ ನೀತಿ ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾದಲ್ಲಿ ಜಾರಿಯಲ್ಲಿದೆ. ಬಿಹಾರ ರಾಜ್ಯವು ಈಗಾಗಲೇ ತನ್ನ ಮಹಿಳಾ ನೌಕರರಿಗೆ ತಿಂಗಳಿಗೆ ಎರಡು ದಿನಗಳ ರಜೆ ನೀಡುತ್ತಿದೆ. ಓಡಿಶಾ ರಾಜ್ಯವು ಆಗಸ್ಟ್‌ನಲ್ಲಿ ಈ ಕುರಿತ ಹೊಸ ನೀತಿ ಪ್ರಕಟಿಸಿ, ಮಹಿಳಾ ಸರ್ಕಾರಿ ನೌಕರರಿಗೆ ತಿಂಗಳಲ್ಲಿ ಒಂದು ದಿನ ಪಾವತಿ ರಜೆ ನೀಡಲು ಅನುಮತಿ ನೀಡಿದೆ.
ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳು:
- 2025-26ನೇ ಸಾಲಿನ ರಸಗೊಬ್ಬರ ಕಾಪು ದಾಸ್ತಾನು ಮಾಡಲು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿರವರು ಪಡೆಯುವ ತಲಾ 200 ಕೋಟಿ ರೂ.ಗಳ ಬಂಡವಾಳ ಸಾಲಕ್ಕೆ ಸರ್ಕಾರ ಖಾತ್ರಿ ನೀಡಲು ಒಪ್ಪಿಗೆ.
- ಜಲಾನಯನ ಅಭಿವೃದ್ಧಿ ಘಟಕ-ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ 2.0 (PMKSY-WDC 2.0) ಯೋಜನೆಯಡಿ ಹೆಚ್ಚುವರಿ 15 ಯೋಜನೆಗಳನ್ನು ರಾಜ್ಯದ 15 ತಾಲ್ಲೂಕುಗಳಲ್ಲಿ 39,413 ಹೆಕ್ಟೇರ್ ಪ್ರದೇಶದಲ್ಲಿ ಯೋಜನಾ ಮೊತ್ತ 90.07 ಕೋಟಿ ರೂ.ಗಳಲ್ಲಿ (ಕೇಂದ್ರ ಮತ್ತು ರಾಜ್ಯ ಸರ್ಕಾರ 60:40) ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
- ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳನ್ನು ಸಡಿಲಿಸಿ ದಿನಾಂಕ: 29.09.2025ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲು ಒಪ್ಪಿಗೆ.
- ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿನ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ 38.33 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹೊಸ ತಂತ್ರಾಂಶಗಳನ್ನು ಅಳವಡಿಸಲು ಆಡಳಿತಾತ್ಮಕ ಅನುಮೋದನೆ.
- ಕೇಂದ್ರ ಪುರಸ್ಕೃತ ICJS-2.0 (Inter-Operable Criminal Justice System 2.0) ಯೋಜನೆಯಡಿ ಕೇಂದ್ರ ಗೃಹ ಮಂತ್ರಾಲಯವು ಮಂಜೂರು ಮಾಡಿರುವ 89.22 ಕೋಟಿ ರೂ.ಗಳ ಮೊತ್ತದಲ್ಲಿ ಉಪಕರಣಗಳನ್ನು ಪೊಲೀಸ್ ಗಣಕ ವಿಭಾಗದ ವತಿಯಿಂದ ಖರೀದಿಸಲು ಹಾಗೂ ತರಬೇತಿ ಹಾಗೂ ಇತರೆ ಕಾರ್ಯಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ.
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು 405.55 ಕೋಟಿ ರೂ.ಗಳ ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
- ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ ನೀಡಲು ಒಪ್ಪಿಗೆ.
- ಸೇತುವೆಗಳ ಪುನರ್ ನಿರ್ಮಾಣ ಹಾಗೂ ಪುನಶ್ವೇತನ ಕಾಮಗಾರಿಗಳನ್ನು 2,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ ಹಾಗೂ ಮೊದಲನೇ ಹಂತದಲ್ಲಿ PRAMC ಅಧ್ಯಯನದಲ್ಲಿ ಗುರುತಿಸಿರುವ 39 ಬೃಹತ್ ಸೇತುವೆಗಳ ಪುನರ್ ನಿರ್ಮಾಣ/ನಿರ್ಮಾಣ ಕಾಮಗಾರಿಗಳನ್ನು 1,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕರಿವೋಬನಹಳ್ಳಿಯಿಂದ ವತಿಯಿಂದ ನಾಗಸಂದ್ರ ಹೊಸ ಬಳಸಿದ ನೀರು ಸಂಸ್ಕರಣಾ ಘಟಕದವರೆಗೆ ಇರುವ ರೈಸಿಂಗ್ ಮೇನ್ ಸೇರಿ ನಾಗಸಂದ್ರದಲ್ಲಿ 20 MLD ಬಳಸಿದ ನೀರು ಸಂಸ್ಕರಣಾ ಘಟಕ (UWTP) ಮತ್ತು 5 MLD ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರಗಳ 05 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಯನ್ನು 26.02 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಗಟ್ಟುವ ಸಲುವಾಗಿ 52-54 ಮೀಟರ್ ಎತ್ತರಕ್ಕೆ ತಲುಪುವ Aerial Ladder Platform Vehicleನ್ನು 16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ.
- ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ವಾಯತ್ತ ಸ್ಥಾನಮಾನದೊಂದಿಗೆ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಬಿಸಲು ಮತ್ತು ಲಭ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆ, ವಸತಿ ನಿಲಯಗಳು ಮತ್ತಿತರ ಕಾಮಗಾರಿಗಳನ್ನು 550 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ರಾಜಕನಾಲ್ ಮತ್ತು ಹಂತ-11ರಲ್ಲಿ 40 MLD ಬಳಸಿದ ನೀರು ಸಂಸ್ಕರಣಾ ಘಟಕ (UWTP), ಟರ್ಮಿನಲ್ ತ್ಯಾಜ್ಯ ನೀರಿನ ಯಂತ್ರಗಾರ (TSPS) ಮತ್ತು ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಗಾರದೆ (ISPS) ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಗ್ರ (O&M)ಯನ್ನು 29.70 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳುವ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ 1668.80 ಚ.ಮೀಟರ್, ಕಲಬುರಗಿ ಜಿಲ್ಲೆಯ ಅಫಜಲ್‌ಪುರ ಪುರಸಭೆ ವ್ಯಾಪ್ತಿಯಲ್ಲಿ 1120.60 ಚ.ಮೀ., ಧಾರವಾಡ ಜಿಲ್ಲೆಯ ನಲವಗುಂದ ಪುರಸಭೆ ವ್ಯಾಪ್ತಿಯಲ್ಲಿ 1287.77 ಚ.ಮೀ. ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ 4200 ಚದರ್ ಅಡಿ ನಾಗರಿಕ ಸೌಲಭ್ಯ ನಿವೇಶನಗಳು ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಕಾಂಗ್ರೆಸ್ ಭವನ ಟ್ರಸ್ಟ್ಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು.
- ಮಂಗಳೂರಿನ ದೇರೆಬೈಲ್‌ನ ಬ್ಲೂಬೆರಿ ಹಿಲ್ಸ್ ರಸ್ತೆಯಲ್ಲಿರುವ 3.285 ಎಕರೆ ಭೂಮಿಯನ್ನು ವಾಣಿಜ್ಯ ಕಛೇರಿ ಟೆಕ್ ಪಾರ್ಕ್ ಉದ್ದೇಶಕ್ಕಾಗಿ PPP ಮಾದರಿಯಲ್ಲಿ DBFOT ಆಧಾರದ ಮೇಲೆ ನಗದೀಕರಿಸಲು ಮತ್ತು ಅಭಿವೃದ್ಧಿ ಪಡಿಸಲು ಅನುಮೋದನೆ. 135 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಸ.ನಂ. 666ರಲ್ಲಿನ 9-00 ಎಕರೆ ಗಾಯರಾಣ ಜಮೀನು ಶ್ರೀ ಶಿವಾನಂದ ಗ್ರಾಮೀಣ ವಿದ್ಯಾಪೀಠ (ಶಿಕ್ಷಣ ಸಂಸ್ಥೆ) ಘೋಡಗೇರಿ ಅವರಿಗೆ ಮಂಜೂರು.
- ಸಿಪಿಸಿ ಪಾಲಿಟೆಕ್ನಿಕ್, ಮೈಸೂರು ಸಂಸ್ಥೆಯ ಕಟ್ಟಡದ ನವೀಕರಣ & ಹೊಸ ಸಂಸ್ಥೆಯ ಕಟ್ಟಡದ ನವೀಕರಣ & ಆಡಿಟೋರಿಯಮ್ ಅನ್ನು ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ತಲಾ 70 ಕೋಟಿ ರೂ.ಗಳು ಹಾಗೂ 50 ಕೋಟಿ ರೂ.ಗಳ ಮೊತ್ತದಲ್ಲಿ ಒದಗಿಸಿರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ.
- ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಟು ಟಯರ್ ಕಾಟ್‌ಗಳನ್ನು 20 ಕೋಟಿ ರೂ.ಗಳ ವೆಚ್ಚದಲ್ಲಿ ಇ-ಟೆಂಡರ್ ಮೂಲಕ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
- ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಾಯರ್ ಮ್ಯಾಟ್ರಸ್ ಮತ್ತು ಪೈಬರ್ ಪಿಲ್ಲೋಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಇ-ಟೆಂಡರ್ ಮೂಲಕ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
- ಕೇಂದ್ರ ಪುರಸ್ಕೃತ SASCI (Special Assistance to State Capital Investment -of Iconic Tourist Development Destination) ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ತಾತಗುಣಿಯಲ್ಲಿರುವ ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್ ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರ ಅಭಿವೃದ್ಧಿ ಪಡಿಸುವ 99.17 ಕೋಟಿ ರೂ.ಗಳ ಅಂದಾಜು ಮೊತ್ತದ ಯೋಜನೆಗೆ ಸಂಬಂಧಿಸಿದಂತೆ ಮೊದಲನೇ ಹಂತದ ಕಾಮಗಾರಿಗಳನ್ನು 55.33 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ಮುಂದೆ 5 ಕೆ.ಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ: ಸಂಪುಟ ಸಭೆ ತೀರ್ಮಾನ

