ಬೆಂಗಳೂರು: ವಿದ್ಯುತ್ ಸ್ಪರ್ಶದಿಂದ 12 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಆನೇಕಲ್ ತಾಲೂಕಿನ ನಾರಾಯಣಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಸಂಪಂಗಿ ಮತ್ತು ಮಂಜುಳಾ ದಂಪತಿ ಪುತ್ರಿ ತನಿಷ್ಕಾ ಮೃತಪಟ್ಟ ಬಾಲಕಿ. ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಇವಳು ರಜೆ ಇದ್ದ ಕಾರಣ ಮನೆ ಬಳಿಯೇ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಾಲಕಿ ಆಡುತ್ತಿದ್ದ ಚೆಂಡು ಅಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಬಳಿ ಹೋಗಿದೆ. ಅದನ್ನು ತೆಗೆಯುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶವಾಗಿದೆ. ಶಾಕ್‌ನಿಂದ ಗಾಯಗೊಂಡಿದ್ದ ತನಿಷ್ಕಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆಯುತ್ತಿದ್ದಂತೆ, ಮುತ್ತನಲ್ಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಳವಡಿಸಿದ್ದ ವಿದ್ಯುತ್ ಕಂಬವನ್ನು ತೆಗೆದು ಹಾಕಿದ್ದಾರೆ.
ಘಟನೆ ಬಗ್ಗೆ ಮುತ್ತನಲ್ಲೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪಿಸಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಮೊಬೈಲ್ ವಿಚಾರಕ್ಕೆ ಜಗಳ, ಅಣ್ಣನ ಮಗನನ್ನೇ ಕೊಂದು ಚಿಕ್ಕಪ್ಪ ಪರಾರಿ