ವರದಿ: ಕಿರಣ್ ಕುಮಾರ್ ಎಸ್.ಇ
ಶಿವಮೊಗ್ಗ: ಸ್ನೇಹಿತ ನೀಡಿದ ಸಲಹೆಯಿಂದ ಶಿಕ್ಷಕರೊಬ್ಬರು ಕೇಂದ್ರ ಸರ್ಕಾರದ ಮೈ ಗವರ್ನ್ಮೆಂಟ್ ಆ್ಯಪ್ನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ, ಅತೀ ಹೆಚ್ಚು ಸರ್ಟಿಫಿಕೇಟ್ಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಶಿವಮೊಗ್ಗದ ಹೊರವಲಯದ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಕುಂಟೆ ದಾಖಲೆ ನಿರ್ಮಿಸಿದವರು. ಇವರು ವರ್ಲ್ಡ್ ರೆಕಾರ್ಡ್ ಸೇರಿ 6 ದಾಖಲೆ ಹಾಗೂ ಒಂದು ಗೌರವ ಡಾಕ್ಟರೇಟ್ ಪಡೆದು ಗಮನ ಸೆಳೆದಿದ್ದಾರೆ. ಈ ಮೂಲಕ ಸಾಧಿಸುವ ಛಲ ಇದ್ದರೆ ಏನಾದರೂ, ಯಾವಾಗಲಾದರೂ ಸಾಧಿಸಿ ತೋರಿಸಬಹುದು ಎಂಬುದನ್ನು ಶಿವಮೊಗ್ಗದ ಗಿರೀಶ್ ಕುಂಟೆ ತೋರಿಸಿಕೊಟ್ಟಿದ್ದಾರೆ.
ಇವರು ಮೂಲತಃ ಅಜ್ಜಂಪುರ ತಾಲೂಕಿನವರು. ಬಡ ಕುಟುಂಬದಲ್ಲಿ ಓರ್ವ ಟೈಲರ್ನ ಮಗನಾಗಿ ಅಜ್ಜಂಪುರದಲ್ಲಿಯೇ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಮುಗಿಸಿದರು. ನಂತರ ಹೊಸದುರ್ಗದಲ್ಲಿ ಪದವಿ ಪೂರೈಸಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಬಿಇಡಿ, ಡಿಸಿಎ ಪದವಿ ಗಳಿಸಿ, ಶಿಕ್ಷಕರಾಗಿದ್ದಾರೆ. ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬ ಹಂಬಲವಿದ್ದ ಗಿರೀಶ್ ಅವರಿಗೆ ಸ್ನೇಹಿತನ ಸಲಹೆಯೇ ದಾರಿದೀಪವಾಯಿತು. ಸ್ನೇಹಿತ ತಿಳಿಸಿದ ಕೇಂದ್ರ ಸರ್ಕಾರದ ಮೈ ಗವರ್ನ್ಮೆಂಟ್ ಆ್ಯಪ್ನಲ್ಲಿ ರಿಜಿಸ್ಟರ್ ಮಾಡಿಕೊಂಡು ಅದರಲ್ಲಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಿಯಾದರು. ಹೀಗೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಸರ್ಟಿಫಿಕೇಟ್ಗಳನ್ನು ಗಳಿಸುತ್ತಾ, ಅವುಗಳನ್ನೇ ಬಳಸಿಕೊಂಡು ಇದುವರೆಗೆ ಅನೇಕ ರೆಕಾರ್ಡ್ಗಳನ್ನು ಮಾಡಿದ್ದಾರೆ.
ಇವರು ಕೇಂದ್ರ ಸರ್ಕಾರದ ಮೈ ಗವರ್ನ್ಮೆಂಟ್ ಆ್ಯಪ್ನಲ್ಲಿ ಸುಮಾರು 1280 ಸರ್ಟಿಫಿಕೇಟ್ ಪಡೆದು ರೆಕಾರ್ಡ್ ನಿರ್ಮಿಸಿದ್ದಾರೆ. 9,68,980 ಲಾಯೆಲ್ಟಿ ಅಂಕಗಳನ್ನು ಪಡೆದು ಚೇಂಜ್ ಮೇಕರ್ ಬ್ಯಾಡ್ಜ್ ಪಡೆದುಕೊಂಡಿದ್ದಾರೆ.
ಶೈಕ್ಷಣಿಕ ಸಾಧನೆಗಳು:

- ಇಂಡಿಯಾ ಬುಕ್ ಆಫ್ ರೆಕಾರ್ಡ್ ಹೋಲ್ಡರ್
- ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಹೋಲ್ಡರ್
- ಎಲೈಟ್ ಬುಕ್ ಆಫ್ ರೇಕಾರ್ಡ್ ಹೋಲ್ಡರ್
- ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್
- ಹೈ ವೈಟ್ಸ್ ವರ್ಲ್ಡ್ ರೆಕಾರ್ಡ್ ಹೋಲ್ಡರ್
- ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ನ್ಯಾಷನಲ್ ಪ್ರೈಡ್ ರೆಕಾರ್ಡ್
- ಸ್ವಾಮಿ ವಿವೇಕಾನಂದ ಪ್ರೈಡ್ ಅಚೀರ್ವಸ್ ಅವಾರ್ಡ್
ಇವರ ಎಲ್ಲ ಶೈಕ್ಷಣಿಕ ಸಾಧನೆಗೆ ನವದೆಹಲಿಯ 'ವರ್ಲ್ಡ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಕಮಿಷನ್' ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದಲ್ಲದೆ ಇವರು ಶಿಕಾರಿಪುರದ "ಸಾಧನ ಅಕಾಡೆಮಿಯ ಸ್ಪರ್ಧಾ ಕರ್ನಾಟಕ ಅಕಾಡೆಮಿ, ಶಿವಮೊಗ್ಗ ಸಾಧನ ಸ್ಕೂಲ್ ಶಿಕಾರಿಪುರ ಯೌಟ್ಯೂಬ್ ಚಾನೆಲ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಗಿರೀಶ್ ಕುಂಟೆ ತಮ್ಮ ಸಾಧನೆಯ ಕುರಿತು ಹೇಳಿದ್ದು ಹೀಗೆ: "ಬಡತನದಲ್ಲಿ ಬೆಳೆದ ನನಗೆ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಬಯಕೆ ಇತ್ತು. ಆಗ ನನ್ನ ಸ್ನೇಹಿತ ಮೈ ಗವರ್ನ್ಮೆಂಟ್ ಕ್ವಿಜ್ ಆ್ಯಪ್ ಇದೆ ಎನ್ನುವ ಸಲಹೆ ನೀಡಿದ್ರು. ಅದರಲ್ಲಿ ನೋಂದಣಿ ಮಾಡಿಕೊಂಡೆ. ಇಲ್ಲಿ ಕ್ವಿಜ್ ಜೊತೆಗೆ ಡ್ರಾಯಿಂಗ್, ಸ್ಲೋಗನ್, ರೈಟಿಂಗ್, ಸೆಲ್ಫಿ ಫಾರ್ ಸೂಸೈಟಿ ಸ್ಪರ್ಧೆಗಳಿರುತ್ತವೆ. ಇಲ್ಲಿ ಭಾಗಿಯಾಗಿ ಅತೀ ಹೆಚ್ಚು ಸರ್ಟಿಫಿಕೇಟ್ಗಳನ್ನು ನಾನು ಪಡೆದಿದ್ದೇನೆ. ಕ್ವಿಜ್ನಲ್ಲಿ ಭಾಗಿಯಾಗುವಾಗ ನನಗೆ ಅವಾರ್ಡ್ ಬರುತ್ತದೆ ಎಂದು ತಿಳಿದಿರಲಿಲ್ಲ. ನಾನು ಭಾಗಿಯಾಗುತ್ತಾ ಹೋದಂತೆ ಅವಾರ್ಡ್ ಬರಲು ಪ್ರಾರಂಭಿಸಿದವು. ಕ್ವಿಜ್ನಲ್ಲಿ ಭಾಗಿಯಾದ ನನಗೆ ಪಾಯಿಂಟ್ಸ್ ಬರ್ತಾ ಇತ್ತು. ಇದರಿಂದ ಸರ್ಟಿಫಿಕೇಟ್ ಸಹ ಬರುತ್ತಿತ್ತು, ಖುಷಿಯಾಗುತ್ತಿತ್ತು. ಸುಮಾರು 1280 ಸರ್ಟಿಫಿಕೇಟ್ಗಳು ನನ್ನವಾದವು, ಅತೀ ಹೆಚ್ಚು ಸರ್ಟಿಫಿಕೇಟ್ ಪಡೆದ ನಂತರ ನಾನು ವರ್ಲ್ಡ್ ರೆಕಾರ್ಡ್ಗೆ ಅರ್ಜಿ ಹಾಕಿದೆ. ನನಗೆ ಒಂದು ರೆಕಾರ್ಡ್ ಬರುತ್ತದೆ ಅಂದುಕೊಂಡಿದ್ದೆ. ಆದರೆ ನಾನು ಹಾಕಿದ ಅರ್ಜಿಗಳೆಲ್ಲವೂ ರೆಕಾರ್ಡ್ಗಳಾಗಿ ಬಂದಿವೆ. ನನ್ನ ಉದ್ದೇಶ ಟೆಕ್ನಾಲಜಿಯನ್ನು ಬಳಸಿಕೊಂಡು ಏನಾದರೂ ಸಾಧನೆ ಮಾಡುವುದು" ಎಂದರು.
ಗಿರೀಶ್ ಕುಂಟೆ ಬಗ್ಗೆ ಸ್ನೇಹಿತ ಸಂತೋಷ್ ಸಾಕ್ರೆ ಮಾತನಾಡಿ, "ಗಿರೀಶ್ ಕುಂಟೆ ಅಸಾಮಾನ್ಯ ವ್ಯಕ್ತಿ. ಹಲವಾರು ಅಡೆತಡೆ ಮುಗಿಸಿ, ವಿದ್ಯಾಭ್ಯಾಸ ಮುಗಿಸಿ, ಹಾಲಿ ಗಣಿತ ಶಿಕ್ಷಕನಾಗಿದ್ದಾರೆ. ಇವರ ಸಾಧನೆ ಬೇರೆಯವರಿಗೆ ದಾರಿಯಾಗಲಿ. ಬೇರೆಯವರ ಪ್ರಗತಿಗೆ ದಾರಿ ದೀಪವಾಗಲಿ" ಎಂದರು.
ಇದನ್ನೂ ಓದಿ: ಎರಡು ಜೀವ, ಒಂದು ಪಯಣ: ಒಮ್ಮೆಲೆ 4 - 2 ಸರ್ಕಾರಿ ನೌಕರಿ ಪಡೆದು ಮಿಂಚಿದ ಜೋಡಿ; ಇಲ್ಲಿದೆ ದಂಪತಿ ಯಶಸ್ಸಿನ ಪಯಣ