ETV Bharat / state

ಮಹಿಳಾ​ ಪಿಜಿಗೆ ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ, ಹಣ ಸುಲಿಗೆ: ಗಿಗ್​​​​ ಕಾರ್ಮಿಕನ ಬಂಧನ

ಮಹಿಳಾ ಪಿಜಿಗೆ ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಗಿಗ್ ಕಾರ್ಮಿಕನನ್ನು ಬಂಧನ ಮಾಡಲಾಗಿದೆ.

BENGALURU  WOMAN HARASSED BY GIG WORKER  ಗಿಗ್​​​​ ಕಾರ್ಮಿಕನ ಬಂಧನ  ಲೇಡಿಸ್ ಪಿಜಿ ಹಣ ಸುಲಿಗೆ
ಬಂಧಿತ ಆರೋಪಿ (ETV Bharat)
author img

By ETV Bharat Karnataka Team

Published : September 5, 2025 at 7:43 AM IST

2 Min Read
Choose ETV Bharat

ಬೆಂಗಳೂರು: ಲೇಡೀಸ್​ ಪೇಯಿಂಗ್​ ಗೆಸ್ಟ್​ಗೆ (ಪಿ.ಜಿ) ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿ, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಗಿಗ್ ಕಾರ್ಮಿಕನನ್ನು ನಗರದ ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನರೇಶ್ (30) ಬಂಧಿತ ಆರೋಪಿ. ಈತ ಆಂಧ್ರಪ್ರದೇಶದ ಮದನಪಲ್ಲಿ ಮೂಲದವನಾಗಿದ್ದು, ಕಳೆದ ಎರಡು ವರ್ಷಗಳಿಂದ ನಗರದ ಆವಲಹಳ್ಳಿಯಲ್ಲಿ ವಾಸವಾಗಿದ್ದ. ಆಗಸ್ಟ್ 29ರ ನಸುಕಿವ ಜಾವ 4.30ರ ಸುಮಾರಿಗೆ ಸುದ್ದುಗುಂಟೆಪಾಳ್ಯ ಬಳಿಯ ಗಂಗೋತ್ರಿ ಸರ್ಕಲ್ ಬಳಿಯಿರುವ ಪಿಜಿಯೊಂದಕ್ಕೆ ನುಗ್ಗಿದ ಆರೋಪಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಸಾರಾ ಫಾತೀಮಾ ಮಾಹಿತಿ (ETV Bharat)

ಜೀವನಕ್ಕಾಗಿ ಆರೋಪಿಯು ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಬೈಕ್​ನಲ್ಲಿ ಹೋಗುವಾಗ ಪಿಜಿಯ ಬಾಗಿಲು ತೆಗೆದಿರುವುದನ್ನು ಕಂಡು ಒಳಗೆ ನುಗ್ಗಿದ್ದ. ಈ ವೇಳೆ, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯ ಬಳಿಯಿದ್ದ 2,500 ಸಾವಿರ ರೂಪಾಯಿ ಕಸಿದು ಕಾಲ್ಕಿತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿಯ ಶಿಕಾರಿಪಾಳ್ಯ ಬಳಿ ಬಂಧಿಸಲಾಗಿದೆ. ಆರೋಪಿ ನರೇಶ್ ವಿರುದ್ಧ ಆಂಧ್ರಪ್ರದೇಶದ ಮದನಪಲ್ಲಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಎರಡು ಮೊಬೈಲ್ ಕಳ್ಳತನ ಪ್ರಕರಣ ದಾಖಲಾಗಿವೆ. ತನಿಖೆ ವೇಳೆ, ನಗರದಲ್ಲಿ ಐದಾರು ಪಿಜಿಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಸಾರಾ ಫಾತೀಮಾ ಮಾಹಿತಿ: "ಸುದ್ದುಗುಂಟೆಪಾಳ್ಯ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್​ 29ರ ​​ಮುಂಜಾನೆ 3.30ರಿಂದ 4.30ರ ಹೊತ್ತಿಗೆ ಲೇಡಿಸ್​ ಪಿಜಿಯ ಗೇಟ್​ ಹಾಗೂ ಒಂದು ರೂಮ್​ನ ಬಾಗಿಲು ಓಪನ್​​ ಆಗಿತ್ತು. ಈ ವೇಳೆ ಓರ್ವ ಒಳಗಡೆ ಹೋಗಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ, ಆಕೆಯ ಬಳಿ ಇದ್ದ ದುಡ್ಡು ಕಿತ್ತುಕೊಂಡು ಬಂದಿದ್ದ. ಮಾರನೇ ದಿನ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಬಳಿಕ ತಂಡ ರಚಿಸಿ ತನಿಖೆ ಮಾಡಿದಾಗ ಪಿಜಿ ಸಿಸಿಟಿವಿ ಕ್ಯಾಮರಾದಲ್ಲಿ ಓರ್ವ ಒಳಗೆ ಹೋಗಿ, ಹೊರಗೆ ಬರುವುದು ರೆಕಾರ್ಡ್​ ಆಗಿದೆ. ಅದರ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈತ ಮೊದಲು ಆಂಧ್ರ ಪ್ರದೇಶದಲ್ಲಿ ಮೊಬೈಲ್​ ಕಳ್ಳತನ ಮಾಡುತ್ತಿದ್ದ, ಆ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿಗೆ ಬಂದ ನಂತರ ಸ್ವಿಗ್ಗಿ, ಜೊಮ್ಯಾಟೊ, ರ‍್ಯಾಪಿಡೋದಲ್ಲಿ ಕೆಲಸ ಮಾಡುತ್ತಿದ್ದ. ಈ ಮೊದಲು ಈತ ಪಿಜಿಗಳಲ್ಲಿ ಈ ತರಹದ ದರೋಡೆಗಳನ್ನು ಮಾಡಿದ್ದ. ಆದರೆ ಎಲ್ಲೂ ಪ್ರಕರಣಗಳು ದಾಖಲಾಗಿಲ್ಲ" ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಪಿಸ್ತೂಲ್ ತೋರಿಸಿ ಚಿನ್ನ ಕದಿಯಲು ಯತ್ನಿಸಿದ ಇಬ್ಬರ ಬಂಧನ