ಬೆಂಗಳೂರು: ಬಾಗಲಗುಂಟೆ ಎಂಇಐ ಆಟದ ಮೈದಾನದಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ 14 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಹಬ್ಬ ಆಚರಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹರಾಜಿನಲ್ಲಿ ಗಣೇಶನ ಪ್ರಸಾದ ಖರೀದಿಗೆ ಭಕ್ತರು ಮುಗಿಬಿದ್ದರು. ಈ ಬಾರಿ ಗಣೇಶನ ಪ್ರಸಾದ 25 ಕೆ.ಜಿ ಲಡ್ಡು 4.50 ಲಕ್ಷ ರೂ.ಗೆ ಮಾರಾಟವಾಗಿದೆ.
ಬಿಜೆಪಿ ಮುಖಂಡ ಚಿಕ್ಕಸಂದ್ರ ಮೋಹನ್ ಕುಮಾರ್ ಅವರು ಪ್ರಸಾದದ ಲಡ್ಡು ಖರೀದಿಸಿದರು. ಹರಾಜಿನ ಬಳಿಕ ಲಡ್ಡುವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್.ಮುನಿರಾಜು ಹಸ್ತಾಂತರಿಸಿದರು.
ಶುಕ್ರವಾರದಿಂದ ನಡೆಯುತ್ತಿರುವ ಗಣೇಶೋತ್ಸವದಲ್ಲಿ ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು ನೇತೃತ್ವದಲ್ಲಿ ಮಹಿಳೆಯರಿಗಾಗಿ ರಂಗೋಲಿ, ಗಾಯನ, ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ವಿಜೇತರಿಗೆ ಭಾನುವಾರ ಬಹುಮಾನ ವಿತರಿಸಲಾಯಿತು. ಗಿಚ್ಚಿ ಗಿಲಿಗಿಲಿ ಖ್ಯಾತಿಯ ರಾಘವೇಂದ್ರ (ರಾಗಿಣಿ) ಅವರಿಂದ ಕಾಮಿಡಿ ಶೋ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು. ಖ್ಯಾತ ಗಾಯಕ ರಘು ದೀಕ್ಷಿತ್ ತಂಡದಿಂದ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಸಂತ ಶಿಶುನಾಳ ಶರೀಫರ ಮತ್ತು ಚಿತ್ರಗೀತೆಗಳಿಗೆ ಸೇರಿದ್ದ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಸೌಹಾರ್ದತೆಗೆ ಸಾಕ್ಷಿಯಾದ ಮಂಗಳೂರಿನ ಸಂಘನಿಕೇತನದ ಗಣೇಶೋತ್ಸವ: ಕ್ರಿಶ್ಚಿಯನ್ ಬಾಂಧವರಿಂದ ಪೂಜೆ - harmony in Ganeshotsav
ಭಾನುವಾರ ನಡೆದ ಮೆರವಣಿಗೆಯಲ್ಲಿ 75ಕ್ಕೂ ಹೆಚ್ಚು ಗಣೇಶ ಮೂರ್ತಿಗಳಿದ್ದವು. ಪಂಜಾಬ್, ಗುಜರಾತ್, ಮುಂಬೈ, ಕೇರಳ ಕರ್ನಾಟಕದಿಂದ ಬಂದ ಕಲಾತಂಡಗಳು ಅದ್ಧೂರಿ ಮೆರವಣಿಗೆಗೆ ಮೆರುಗು ನೀಡಿದವು. ಕಲಾತಂಡಗಳ ಸದ್ದಿಗೆ ಯುವಕರು, ಮಹಿಳೆಯರು, ಭಕ್ತರು ಹೆಜ್ಜೆ ಹಾಕಿದರು. ಎಂಇಐ ಆಟದ ಮೈದಾನದಿಂದ ಪ್ರಾರಂಭವಾಗಿ ಬಾಗಲಗುಂಟೆ ಮಾರಮ್ಮನ ದೇವಸ್ಥಾನ, ಹೆಸರಘಟ್ಟ ಮುಖ್ಯ ರಸ್ತೆ, ಮಲ್ಲಸಂದ್ರದ ಪೈಪ್ ಲೈನ್, ಸೆಲೆಕ್ಷನ್ ಅಲ್ಲಿಂದ ದಾಸರಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿತು. ಚೊಕ್ಕಸಂದ್ರದ ಕೆರೆ ಹತ್ತಿರದ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಯಿತು.
ಶಾಸಕ ಎಸ್.ಮುನಿರಾಜು ಮಾತನಾಡಿ, "ಕಳೆದ ವರ್ಷ ಗಣೇಶನ ಪ್ರಸಾದ ಲಡ್ಡುವನ್ನು ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷ್ಮಣ್ ಗೌಡ ಅವರು 4.25 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದಿದ್ದರು. ಈಗ ನಮ್ಮ ಮುಖಂಡ ಮೋಹನ್ ಕುಮಾರ್ 25 ಕೆ.ಜಿ ಪ್ರಸಾದ ಲಡ್ಡುವನ್ನು 4.50 ಲಕ್ಷ ರೂ.ಗೆ ಖರೀದಿಸಿದ್ದಾರೆ. ಹರಾಜಿನಿಂದ ಬಂದ ಹಣವನ್ನು ಮುಂದಿನ ವರ್ಷಕ್ಕೆ ಮೀಸಲಿಡಲಾಗುತ್ತದೆ" ಎಂದು ತಿಳಿಸಿದರು.