ETV Bharat / state

ಹಾವೇರಿ : ಡಿಜೆ ಬದಲಿಗೆ ಭಕ್ತರಿಗೆ ಹೋಳಿಗೆ ಊಟ ವಿತರಿಸಿದ ಗಣಪತಿ ಮಂಡಳಿ

ಪ್ರಸ್ತುತ ವರ್ಷ ಹಾವೇರಿ ಜಿಲ್ಲಾಡಳಿತ ಡಿ. ಜೆ. ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಾಗಿ, ಇಲ್ಲಿನ ಗಣಪತಿ ಮಂಡಳಿಯವರು ಡಿಜೆ ಬದಲಿಗೆ ಭಕ್ತರಿಗೆ ಹೋಳಿಗೆ ಊಟವನ್ನೇ ವಿತರಿಸಿದರು.

ganapati-mandali-distributed-holige-food-to-devotees-instead-of-dj
ಡಿಜೆ ಬದಲಿಗೆ ಭಕ್ತರಿಗೆ ಹೋಳಿಗೆ ಊಟ ವಿತರಿಸಿದ ಗಣಪತಿ ಮಂಡಳಿ (ETV Bharat)
author img

By ETV Bharat Karnataka Team

Published : September 7, 2025 at 8:46 PM IST

4 Min Read
Choose ETV Bharat

ಹಾವೇರಿ : ಉತ್ತರ ಕರ್ನಾಟಕದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದರೆ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರ ಮನಸ್ಸನ್ನು ಸಮಿತಿಗಳು ಸೆಳೆಯುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶ ಮಂಡಳಿಗಳು ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸುತ್ತಿವೆ. ಗಣೇಶ ಸಮಿತಿ ಸದಸ್ಯರು ಭಕ್ತರ ದಾನಿಗಳನ್ನು ಕರೆದು ಅನ್ನಪ್ರಸಾದ ನೀಡಲು ಆರಂಭಿಸಿ ದಶಕಗಳಾಗಿವೆ.

ಡಿಜೆ ಬದಲು ಹೋಳಿಗೆ ಊಟ: ಕೆಲ ವರ್ಷಗಳಿಂದ ಗಣೇಶನ ಆಗಮನ ಮತ್ತು ನಿಮಜ್ಜನಕ್ಕೆ ಡಿಜೆ ಸಹ ಕಾಲಿಟ್ಟಿತ್ತು. ಗಣೇಶನನ್ನು ತರುವಾಗ ಇಲ್ಲದ ಡಿಜೆ ಗಣೇಶ ಕಳಿಸುವಾಗ ಅನಿವಾರ್ಯ ಎನ್ನುವಂತಾಗಿತ್ತು. ಇದಕ್ಕೆ ಹಾವೇರಿ ಜಿಲ್ಲೆ ಹೊರತಾಗಿಲ್ಲ. ಆದರೆ, ಪ್ರಸ್ತುತ ವರ್ಷ ಜಿಲ್ಲಾಡಳಿತ ಡಿ. ಜೆ. ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಡಿಜೆ ಬಳಕೆ ಮಾಡಿದ ಸಮಿತಿ ಮತ್ತು ಸೌಂಡ್ ಸಿಸ್ಟಮ್‌ಗಳ ಮೇಲೆ ಎಫ್ಐಆರ್ ಸಹ ದಾಖಲಿಸಿದೆ.

ಸಮಿತಿಯ ಸದಸ್ಯ ಮಾರುತಿ ಅವರು ಮಾತನಾಡಿದ್ದಾರೆ (ETV Bharat)

ಒಂದು ಕಡೆ ಶಬ್ಧಮಾಲಿನ್ಯ, ಮತ್ತೊಂದು ಕಡೆ ಡಿ. ಜೆ. ಬಳಕೆಗೆ ಗಣೇಶ ಸಮಿತಿಗಳು ಆರ್ಥಿಕ ಹೊರೆಯನ್ನು ತೆರಬೇಕಾಗಿತ್ತು. ಆದರೆ, ಇದೇ ಹಣವನ್ನು ಸಾವಿರಾರು ಭಕ್ತರಿಗೆ ಊಟ ಬಡಿಸಿದರೆ ಹೇಗಿರುತ್ತೆ ಅಂತಾ ಹಾವೇರಿ ನಾಗೇಂದ್ರನಮಟ್ಟಿ ಕಾ ರಾಜಾ ಸಮಿತಿಯ ಸದಸ್ಯರಿಗೆ ಐಡಿಯಾ ಬಂದಿದೆ. ಅವರು ಕೇವಲ ಅನ್ನಸಂತರ್ಪಣೆ ಮಾತ್ರವಲ್ಲ, ಭಕ್ತರಿಗೆ ಹೋಳಿಗೆ ಊಟ ಹಾಕಿಸೋಣ ಎಂದು ನಿರ್ಧರಿಸಿದ್ದರು.

Holi meal for devotees
ಭಕ್ತರಿಗೆ ಹೋಳಿಗೆ ಊಟ (ETV Bharat)

ಐದು ಸಾವಿರ ಜನರಿಗೆ ಹೋಳಿಗೆ ಊಟ: ರವಿವಾರ ಮಧ್ಯಾಹ್ನ ಹಾವೇರಿಯ ನಾಗೇಂದ್ರನಮಟ್ಟಿ ಕಾ ರಾಜಾ ಗಣಪತಿ ಸಮಿತಿ ಭಕ್ತರಿಗೆ ಹೋಳಿಗೆ, ಚಿತ್ರಾನ್ನ, ಬದನೆಕಾಯಿ ಪಲ್ಯೆ, ಅನ್ನ ಸಾಂಬಾರು ವಿತರಣೆ ಮಾಡಿತು. ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿಗಳು, ಅಕ್ಕಪಕ್ಕದ ಗ್ರಾಮಗಳ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸೇವಿಸಿದರು. ಸೋಮವಾರ 13 ದಿನಕ್ಕೆ ಗಣೇಶನ ನಿಮಜ್ಜನ ಮಾಡಲಾಗುತ್ತದೆ. ಹೀಗಾಗಿ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಕಲಾತಂಡಗಳನ್ನು ಸಮಿತಿ ಆಮಂತ್ರಿಸಿದೆ.

ಶಿರಡಿ ಸಾಯಿಬಾಬಾ ರೂಪದ ಗಣೇಶ : ನಾಗೇಂದ್ರನಮಟ್ಟಿ ಕಾ ರಾಜಾ ಗಣೇಶ ಮೂರ್ತಿಯನ್ನ ಶಿರಡಿ ಸಾಯಿಬಾಬಾ ರೂಪದಲ್ಲಿ ನಿರ್ಮಿಸಲಾಗಿದೆ. ಗಣೇಶ ಮೂರ್ತಿಗೆ ವಿಶೇಷವಾದ ಬಣ್ಣ ಲೇಪಿಸಲಾಗಿದ್ದು, ಆಕರ್ಷಕವಾಗಿದೆ. ಸುಮಾರು 6 ಕೈಗಳನ್ನು ಹೊಂದಿರುವ ಗಣಪ ವಿವಿಧ ಆಯುಧಗಳನ್ನು ಹಿಡಿದು ಭಕ್ತರನ್ನ ಆಕರ್ಷಿಸುತ್ತಿದ್ದಾನೆ.

Ganpati immersion
ಗಣಪತಿ ನಿಮಜ್ಜನ (ETV Bharat)

ಅನ್ನಪ್ರಸಾದ ನಿಮಿತ್ತ ಗಣೇಶನಿಗೆ ಮುಂಜಾನೆಯಿಂದಲೇ ವಿವಿಧ ಪೂಜೆಗಳನ್ನು ನಡೆಸಲಾಯಿತು. ವಿಶೇಷ ಪೂಜೆ ನೈವೇದ್ಯ ಸಲ್ಲಿಸಿದ ನಂತರ ಭಕ್ತರಿಗೆ ಅನ್ನಪ್ರಸಾದ ಊಟ ಬಡಿಸಲಾಯಿತು. ಗಣೇಶನಿಗೆ ನಮಸ್ಕರಿಸಿ, ಪ್ರಾರ್ಥನೆ ಸಲ್ಲಿಸಿದ ಭಕ್ತರು ನಂತರ ಹೋಳಿಗೆ ಊಟ ಸವಿದರು.

ಸಮಿತಿ ಸದಸ್ಯ ಮಾರುತಿ ಅವರು ಮಾತನಾಡಿ, 'ಹಿರಿಯರು ಗಣಪತಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು, ಅದನ್ನು ನಾವು ಆಚರಿಸಿಕೊಂಡು ಬರುತ್ತಿದ್ದೇವೆ. ನಾಲ್ಕರಿಂದ ಐದು ಸಾವರಿ ಹೋಳಿಗೆ ಮಾಡಿಸಿದ್ದೇವೆ. ಗಣಪತಿ ಆರ್ಶೀವಾದದಿಂದ ಹಬ್ಬ ಚಲೋ ಆಗಿದೆ ಎಂದು ಹೇಳಿದ್ದಾರೆ.

Ganpati immersion
ಚಂಡೆ-ಮದ್ದಳೆ, ಜಾನಪದ ಕಲಾತಂಡಗಳೊಂದಿಗೆ ಗಣೇಶನ ನಿಮಜ್ಜನ (ETV Bharat)

ಸಮಿತಿ ಸದಸ್ಯ ವೀರೇಶ ಹ್ಯಾಡ್ಲ್ ಅವರು ಮಾತನಾಡಿ, 'ಶ್ರೀ ಗಜಾನನ ಗಣಪತಿ ಮಂಡಳಿಯಿಂದ ಹೋಳಿಗೆ ಊಟ ಆಯೋಜಿಸಿದ್ದೇವೆ. ಇಲ್ಲಿ ಗಣಪತಿ ಕೂರಿಸಿ ಮೂರನೇ ವರ್ಷದ ಸಂಭ್ರಮಕ್ಕಾಗಿ ಹೋಳಿಗೆ ಊಟವನ್ನು ಆಯೋಜಿಸಿದ್ದೇವೆ' ಎಂದು ತಿಳಿಸಿದ್ದಾರೆ.

ಸಮಿತಿಯ ಸದಸ್ಯ ಮುರುಗೇಶ ಗೋಕಾವಿ ಅವರು ಮಾತನಾಡಿದ್ದಾರೆ (ETV Bharat)

ಚಂಡೆ-ಮದ್ದಳೆ, ಜಾನಪದ ಕಲಾತಂಡಗಳೊಂದಿಗೆ ಗಣೇಶನ ನಿಮಜ್ಜನ: ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿರುವ ಗಣೇಶ ನಿಮಜ್ಜನ ಅಂದರೆ ಸಾಕು ಅಲ್ಲಿ ಸದ್ದುಗದ್ದಲ ಇರಲೇಬೇಕು. ಡಿಜೆ ಸೌಂಡ್ ಜಗಮಗಿಸುವ ವಿದ್ಯುತ್ ದೀಪ, ಗುಲಾಲ್ ರಂಗು ಎದ್ದು ಕಾಣುತ್ತದೆ. ಪಟಾಕಿಗಳ ಅಬ್ಬರವಂತೂ ಹೇಳತೀರದು. ಆದರೆ, ಹಾವೇರಿ ನಗರದ ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿ ಇದಕ್ಕೆ ವಿಭಿನ್ನವಾಗಿ ಗಣೇಶನ ನಿಮಜ್ಜನ ಮಾಡುತ್ತದೆ. ಗಣೇಶ ನಿಮಜ್ಜನಕ್ಕೂ ಮುನ್ನ ವಿನಾಯಕನ ಬೃಹತ್ ಮೂರ್ತಿಯನ್ನ ಅರ್ಕೆಷ್ಟ್ರಾ, ಚಂಡಮದ್ದಳೆ ಜಾನಪದ ಕಲಾತಂಡಗಳೊಂದಿಗೆ ನಗರದಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಹಾವೇರಿ ಹುಕ್ಕೇರಿಮಠದಿಂದ ಆರಂಭವಾಗುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ. ಸಂಜೆ 4 ಗಂಟೆಯಿಂದ ಆರಂಭವಾಗುವ ಮೆರವಣಿಗೆ ರಾತ್ರಿ 10ರ ವರೆಗೆ ಸಾಗುತ್ತದೆ. ರಾತ್ರಿಯಾದರೆ ಎಲ್ಲರೂ ಮಲಗಿರುತ್ತಾರೆ, ಹಗಲು ಮೆರವಣಿಗೆ ಮಾಡಿದ್ರೆ ಎಲ್ಲರೂ ನೋಡುತ್ತಾರೆ. ಹೀಗಾಗಿ ಹಗಲು ಗಣೇಶನ ನಿಮಜ್ಜನ ಮಾಡುತ್ತೇವೆ. ಡಿಜೆ ಪಟಾಕಿ ಮನುಷ್ಯರಲ್ಲದೆ ಪ್ರಾಣಿಪಕ್ಷಿಗಳಿಗೆ ಸಹ ಮಾರಕ. ಹೀಗಾಗಿ ನಾವು ಅವುಗಳನ್ನ ಬಳಸುವುದಿಲ್ಲ ಎನ್ನುತ್ತಾರೆ ಸಮಿತಿಯ ಸದಸ್ಯರು.

ಸಿದ್ದದೇವಪುರದ ಸಿದ್ದಿವಿನಾಯಕನ ನಿಮಜ್ಜನದ ಮೆರವಣಿಗೆ ನೋಡಲು ಹಾವೇರಿ ನಿವಾಸಿಗಳು ಕಾತುರದಿಂದ ನಿಂತಿರುತ್ತಾರೆ. ಗಣೇಶನ ಮೂರ್ತಿ ಮನೆ ಮುಂದೆ ಬರುತ್ತಿದ್ದಂತೆ ಹಣ್ಣುಕಾಯಿ ನೈವೈದ್ಯ ಅರ್ಪಿಸಿ, ಪೂಜೆ ಸಲ್ಲಿಸುತ್ತಾರೆ. ಸನಾತನ ಧರ್ಮದಂತೆ ಕೇಸರಿ ಜುಬ್ಬಾ ಹಾಕಿಕೊಳ್ಳುವ ಮೂಲಕ ಸಮತಿಯ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ಮೆರವಣಿಗೆ ನಡೆಸಿದ ಸಮಿತಿಯ ಸದಸ್ಯರಿಗೆ ಕೆಲ ಸಂಘಟನೆಗಳು ಭೋಜನದ ವ್ಯವಸ್ಥೆ ಮಾಡಿದ್ದವು. ನಗರದ ತುಂಬಾ ಮೆರವಣಿಗೆ ಮಾಡಿದ ನಂತರ ಹಾವೇರಿ ಸಮೀಪದ ಕರ್ಜಗಿಯ ವರದಾ ನದಿಯಲ್ಲಿ ಗಣೇಶನನ್ನ ಶಾಸ್ತ್ರೋಕ್ತವಾಗಿ ನಿಮಜ್ಜನ ಮಾಡಲಾಗುತ್ತದೆ. ಸಿದ್ಧಿವಿನಾಯಕ ಉತ್ಸವ ಸಮಿತಿ ಕಳೆದ 37 ವರ್ಷಗಳಿಂದ ಸಾರ್ವಜನಿಕ ಗಣಪತಿ ಸ್ಥಾಪನೆ ಮಾಡುತ್ತಾ ಬಂದಿದೆ. ಮೂವತ್ತೇಳು ವರ್ಷಗಳಿಂದ ಮಣ್ಣಿನ ಗಣಪತಿ ಸ್ಥಾಪನೆ ಮಾಡಿದ್ದು ಸಂಘದ ಹೆಗ್ಗಳಿಕೆ. ಅಲ್ಲದೆ ಪರಿಸರ ಪ್ರೇಮಿ ಬಣ್ಣಗಳನ್ನ ಸಮಿತಿ ಬಳಸುತ್ತಾ ಬಂದಿದೆ. ಗಣೇಶ ಸ್ಥಾಪನೆಯಾದಾಗಿನಿಂದ ಒಂದಲ್ಲ, ಒಂದು ವಿಶೇಷತೆ ಮೂಲಕ ಗಣೇಶ ಸಮಿತಿ ಗಜಾನನೋತ್ಸವ ಆಚರಿಸುತ್ತಾ ಬಂದಿದೆ.

ಸಮಿತಿ ಸದಸ್ಯ ಮುರುಗೇಶ ಗೋಕಾವಿ ಅವರು ಮಾತನಾಡಿ, 'ಪ್ರತಿವರ್ಷವೂ ನಾವು ಸಕಲ ವಾದ್ಯ, ವೈಭವದೊಂದಿಗೆ ಗಣೇಶೋತ್ಸವವನ್ನು ಮಾಡಿಕೊಂಡು ಬರುತ್ತಿದ್ದೇವೆ. ಡಿಜೆಯನ್ನು ನಾವು ಇಲ್ಲಿ ಬಳಸಿಲ್ಲ. ಪ್ರತಿವರ್ಷವೂ ಡೊಳ್ಳು, ಅರ್ಕೆಸ್ಟ್ರಾ, ಚಂಡೆ ಮೇಳ ಇಂತಹ ಜಾನಪದ ನೃತ್ಯದೊಂದಿಗೆ ಗಣಪತಿ ನಿಮಜ್ಜನವನ್ನು ಮಾಡುತ್ತೇವೆ' ಎಂದು ಹೇಳಿದರು.

ಸಮಿತಿಯ ಸದಸ್ಯ ಸಿದ್ದಲಿಂಗಪ್ಪ ಗೋವಿ ಅವರು ಮಾತನಾಡಿದ್ದು, 'ಈ ಬಾರಿ ಈಶ್ವರ ಹಾಗೂ ಪಾರ್ವತಿಯ ತೊಡೆಯ ಮೇಲೆ ಗಣಪತಿ ಕುಳಿತ್ತಿದ್ದಾರೆ. ನಾವು ಇಲ್ಲಿ ಜಾನಪದ ಶೈಲಿಯಲ್ಲಿಯೇ ಗಣಪತಿಯನ್ನು ತರುವುದಾಗಿ ಹಾಗೂ ನಿಮಜ್ಜನ ಮಾಡುವುದಾಗಲಿ ಮಾಡುತ್ತೇವೆ' ಎಂದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಡಿಜೆ ಸೌಂಡ್ ಅಬ್ಬರಕ್ಕೆ ಬ್ರೇಕ್, ಮೆರಗು ಹೆಚ್ಚಿಸಿದ ಕಲಾ ತಂಡಗಳು: ಡ್ರೋನ್ ಕ್ಯಾಮರಾದಲ್ಲಿ ದೃಶ್ಯ ಸೆರೆ