ಬೆಂಗಳೂರು: ದ್ವಿಚಕ್ರವಾಹನದಲ್ಲಿ ಕುಳಿತಿರುವಾಗ ಯುವಕ - ಯುವತಿಯರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ನಾಲ್ವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯುವತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹೀನ್, ಮನ್ಸೂರ್, ಅಫ್ರಿದಿ ಪಾಷಾ ಹಾಗೂ ವಾಸೀಂ ಖಾನ್ ಎಂಬುವರನ್ನ ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಚಂದ್ರಾಲೇಔಟ್ ನಿವಾಸಿಗಳಾಗಿದ್ದು, ವೆಲ್ಡಿಂಗ್ ಹಾಗೂ ಸ್ಕ್ರಾಪ್ ಕೆಲಸ ಮಾಡುತ್ತಿದ್ದಾರೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಾಲೇಔಟ್ ಪಾರ್ಕ್ವೊಂದರ ಬಳಿ ಮುಸ್ಲಿಂ ಯುವತಿ ಹಾಗೂ ಹಿಂದೂ ಧರ್ಮದ ಯುವಕ ಸ್ಕೂಟರ್ ಮೇಲೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಬಂದ ಆರೋಪಿಗಳು ಪ್ರಶ್ನಿಸಿದ್ದಾರೆ. ನಾವಿಬ್ಬರು ಸ್ನೇಹಿತರೆಂದು ಸಮಜಾಯಿಷಿ ನೀಡಿದರೂ ಮಾತು ಕೇಳದ ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ನೈತಿಕ ಪೊಲೀಸ್ ಗಿರಿ ಮೆರೆದಿರುವುದಾಗಿ ಯುವತಿ ದೂರು ನೀಡಿದ್ದು, ದೂರು ಆಧರಿಸಿ ಆರೋಪಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, "ಮೊನ್ನೆ ಪಾರ್ಕ್ ಎದುರುಗಡೆ ಒಂದು ಹುಡುಗ, ಹುಡುಗಿ ಸ್ಕೂಟರ್ ಮೇಲೆ ಕುಳಿತಿರುವುದನ್ನ ನೋಡಿ ಆರೋಪಿತರು ಇಲ್ಲಿಗೆ ಏಕೆ ಬಂದಿರುವೆ ಮನೇಲಿ ಹೇಳಿ ಬಂದಿದ್ದೀಯಾ ಎಂದು ಯುವತಿಯನ್ನು ಪ್ರಶ್ನಿಸಿದ್ದರು. ಈ ಸಂಬಂಧ ಯುವತಿಯಿಂದ ದೂರು ಪಡೆಯಲಾಗಿದೆ. ನಾಲ್ವರು ಆರೋಪಿಗಳನ್ನ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿತರೆಲ್ಲರೂ ಚಂದ್ರಾಲೇಔಟ್ ಠಾಣಾ ವ್ಯಾಪ್ತಿ ನಿವಾಸಿಗಳಾಗಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಬಾಲಕಿಯ ರೇಗಿಸಿದರೆಂದು ಬಾಲಕರ ಮೇಲೆ ಹಲ್ಲೆ(ಬೆಂಗಳೂರು): ಇಬ್ಬರು ಬಾಲಕರ ಮೇಲೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದ ಆರೋಪಿಗಳ ವಿರುದ್ಧ ನಗರದ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲ್ಲೆಗೊಳಗಾದ ಓರ್ವ ಬಾಲಕನ ತಂದೆ ನೀಡಿದ ದೂರಿನ ಅನ್ವಯ ಸೂಫಿಯಾನ್ ಹಾಗೂ ಜುಬೈರ್ ಎಂಬಿಬ್ಬರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಘಟನೆಯ ವಿವರ: ಮಾ.17ರ ರಾತ್ರಿ 8:30ರ ಸುಮಾರಿಗೆ ಐವರು ಆರೋಪಿಗಳು ಇಬ್ಬರು ಬಾಲಕರನ್ನು ಗಂಗೊಂಡನಹಳ್ಳಿ ಸಮೀಪ ಕರೆದೊಯ್ದು ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಇಬ್ಬರು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಆರೋಪಿಗಳಿಗೆ ಪರಿಚಯವಿದ್ದ ಬಾಲಕಿಯನ್ನು ರೇಗಿಸಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಬಾಲಕರ ಮೇಲೆ ಹಲ್ಲೆ ಮಾಡಿದ್ದರು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆರೋಪಿಗಳ ಬಂಧನದ ಬಳಿಕ ಕೃತ್ಯಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದರು.
ಇದನ್ನೂ ಓದಿ: ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿಯನ್ನೇ ಸಾಯಿಸಿದ ಮಗ : ಆರೋಪಿ ಬಂಧನ
ಇದನ್ನೂ ಓದಿ: ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ಪತ್ನಿಯ ಅಗಲಿಕೆ ನೋವು; ಮಕ್ಕಳಿಬ್ಬರನ್ನ ಕೊಂದು ತಂದೆ ಆತ್ಮಹತ್ಯೆ