ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರದಲ್ಲಿ ಅವರು ಯಾರೂ ಗೆಲುವು ಕಂಡಿಲ್ಲ, ಕಾಣುವುದೂ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗುಡುಗಿದರು.
ಜನರೊಂದಿಗೆ ಜನತಾದಳ ಎಂಬ ಹೆಸರಿನಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗಾಗಿ ಹಮ್ಮಿಕೊಳ್ಳಲಾಗಿರುವ ರಾಜ್ಯ ಪ್ರವಾಸ ಹಾಗೂ ʼಮಿಸ್ ಕಾಲ್ʼ ಸದಸ್ಯತ್ವದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮ ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಭಾನುವಾರ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಕೆಲವರು ಬಹಳ ಯಾತನೆ ಕೊಡುತ್ತಿದ್ದಾರೆ. ಅವರ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಅವರಿಂದ ಆಗಿಲ್ಲ, ಆಗುವುದೂ ಇಲ್ಲ. ಕೇವಲ ಆರೋಪ ಮಾಡಿಕೊಂಡೇ ಅವರೆಲ್ಲ ಸೋಲುತ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರನ್ನು ಕೆಲವರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಅವರ ವ್ಯಕ್ತಿತ್ವ, ಜನಪ್ರಿಯತೆಯನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ರೈತರ ಸಾಲ ಮನ್ನಾ ಮಾಡಿದಂತೆ ದೇಶದಲ್ಲಿ ಯಾರೂ ಸಾಲ ಮನ್ನಾ ಮಾಡಿದ್ದನ್ನು ನಾನು ನೋಡಿಲ್ಲ ಎಂದರು.
ಸೋಲಿಗೆ ಎದೆಗುಂದುವ ಪ್ರಶ್ನೆ ಇಲ್ಲ: ದೇವೇಗೌಡರ ನಂತರ ಜೆಡಿಎಸ್ ಉಳಿಯಲ್ಲ ಎಂದು ಕೆಲವರ ಕುಹಕ ಮಾತುಗಳಿಗೆ ಖಡಕ್ ತಿರುಗೇಟು ಕೊಟ್ಟ ಮಾಜಿ ಪ್ರಧಾನಿ, "ಸೋಲು ಗೆಲುವಿಗೆ ಬುನಾದಿ ಆಗುತ್ತದೆ ಎಂಬುದನ್ನು ಮರೆಯಬಾರದು. ಸೋಲಾಯಿತು ಎಂದು ಎದೆಗುಂದಬಾರದು. ನನಗೆ ಇಷ್ಟು ವರ್ಷದ ಮೇಲೆ ಕಾಲಿನ ತೊಂದರೆ ಬಂದಿದೆಯೇ ಹೊರತು, ಬುದ್ಧಿಗೆ ತೊಂದರೆ ಇಲ್ಲ. ಅದಕ್ಕೆ ನಡೆಯಲು ಕಷ್ಟವಾಗುತ್ತಿದೆ. ನನಗೆ ಮರೆವು ಇನ್ನೂ ಬಂದಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಯಾರೇ ನನ್ನ ಬಳಿಗೆ ಬಂದರೂ ತಿರಸ್ಕಾರ ಮನೋಭಾವದಿಂದ ನೋಡಿಲ್ಲ. ನೋಡುವುದೂ ಇಲ್ಲ. ಯಾವಾಗ ಯಾರು ಬೇಕಾದರೂ ಬರಬಹುದು, ಎಲ್ಲಿಗೆ ಬೇಕಾದರೂ ನನ್ನನ್ನು ಕರೆಯಿರಿ, ಬರುತ್ತೇನೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ 32 ಕಡೆ ಬಹಿರಂಗ ಸಭೆ ಮಾಡಿದ್ದೇನೆ. ಆದರೆ ಜನರು ಯಾಕೆ ನಮ್ಮನ್ನು ಕೈ ಬಿಟ್ಟರು, ಹೇಗೆ ಸೋತೆವು? ಎಂದು ನಾನು ಹೇಳಲು ಹೋಗುವುದಿಲ್ಲ. ಈ ಒಂದು ಸೋಲು ನಮ್ಮನ್ನು ಎದೆಗುಂದಿಸಲು ಸಾಧ್ಯವಿಲ್ಲ. ಎದೆಗುಂದುವ ಪ್ರಶ್ನೆಯೂ ಇಲ್ಲ. ಮತ್ತೆ ಪುಟಿದೆದ್ದು ಬರುತ್ತೇವೆ. ಆ ಶಕ್ತಿ ನಮ್ಮ ಪಕ್ಷಕ್ಕಿದೆ ಎಂದು ಮಾಜಿ ಪ್ರಧಾನಿ ವಿಶ್ವಾಸದಿಂದ ನುಡಿದರು.
ಪಕ್ಷ ಮುಗಿಸಲು ಸಾಧ್ಯವಿಲ್ಲ: ಮೊರಾರ್ಜಿ ದೇಸಾಯಿ ಅವರು ನನಗೆ ಪಕ್ಷ ಕೊಟ್ಟರು. ಜನತಾದಳ ಎಷ್ಟೇ ಭಾಗ ಆದರೂ ಈ ಪಕ್ಷ ಇನ್ನೂ ಉಳಿದಿದೆ. ನಾನು ಹೋದ ಮೇಲೆಯೂ ಪಕ್ಷ ಉಳಿಯುತ್ತದೆ. ಇದನ್ನು ಬರೆದಿಟ್ಟುಕೊಳ್ಳಿ, ಈ ಪಕ್ಷವನ್ನು ಮುಗಿಸುತ್ತೇನೆ ಎನ್ನುವ ಮಹಾನುಭಾವ ಎಂದಿಗೂ ಹುಟ್ಟಲು ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು.
ಜೆಡಿಎಸ್ ಒಂದು ಕುಟುಂಬದ ಪಕ್ಷವಲ್ಲ: ಜೆಡಿಎಸ್ ಕುಟುಂಬದ ಪಕ್ಷ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಒಂದು ಕುಟುಂಬದ ಪಕ್ಷವಲ್ಲ. ಇದು ಕಾರ್ಯಕರ್ತರ ಪಕ್ಷ. ಎಷ್ಟೋ ಮಹಾನುಭಾವರು ಈ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಹೋಗಿದ್ದಾರೆ, ಇನ್ನೂ ಅನುಭವಿಸುತ್ತಿದ್ದಾರೆ, ಎಲ್ಲಾ ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ಪಕ್ಷ ಮಾತ್ರ ಹಾಗೆಯೇ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಇನ್ನೂ ಸದೃಢವಾಗಿ ಬದುಕಿದೆ. ಇದು ಹೇಗೆ ಎಂಬ ಪ್ರಶ್ನೆಯನ್ನು ಟೀಕೆ ಮಾಡುವವರು ಕೇಳಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ನಮಗೆ ಕೂರಲಿಕ್ಕೆ ಜಾಗ ಇಲ್ಲ ಎಂದು ಹೊರಕ್ಕೆ ದೂಡಿದರು. ಇವತ್ತು ಈ ಜಾಗದಲ್ಲಿ ಭವ್ಯ ಕಚೇರಿ ನಿಮಗೆಲ್ಲರಿಗೂ ಕಾಣುತ್ತಿದೆ. ಈ ಜಾಗವನ್ನು ಪಕ್ಷಕ್ಕೆ ಕೊಟ್ಟವರು ಒಬ್ಬ ಕುರುಬರ ಹೆಣ್ಣು ಮಗಳು. ಆಕೆ ಮೇಯರ್ ಆಗಿದ್ದರು. ಅಣ್ಣಾ.. ನಿಮ್ಮ ನೋವನ್ನು ನೋಡಲು ಆಗುತ್ತಿಲ್ಲ ಎಂದು ಈ ಜಾಗವನ್ನು ನಮಗೆ ಕೊಟ್ಟರು. ಆಕೆ ಪುಣ್ಯಾತ್ಮಳು. ಆಮೇಲೆ ಎಲ್ಲರೂ ಸೇರಿ ಈ ಕಟ್ಟಡ ಕಟ್ಟಿದ್ದೇವೆ. ಇಡೀ ದೇಶದಲ್ಲಿಯೇ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಹೆಸರಲ್ಲಿ ಕಚೇರಿ ತೆರೆದಿದ್ದೇವೆ. ನಮ್ಮನ್ನು ಟೀಕೆ ಮಾಡುವ ನೈತಿಕತೆ ಇವರಿಗೆ ಇದೆಯಾ? ಕುಟುಂಬಕ್ಕೆ ಸಂಬಂಧಿಸಿದ ಪಕ್ಷ ಅಂತಾರೆ, ನೋ.. ನೋ...ನೋ.. ನಮ್ಮ ಪಕ್ಷ ಯಾವ ಕುಟುಂಬಕ್ಕೂ ಸೇರಿದ್ದಲ್ಲ. ಯಾವುದೋ ಮನೆತನಕ್ಕೂ ಸೇರಿದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿಗೆ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಬಿಜೆಪಿ, ಕಾಂಗ್ರೆಸ್ ಬಿಟ್ಟರೆ ಉಳಿದ ಎಲ್ಲಾ ಪಕ್ಷಗಳು ಪ್ರಾದೇಶಿಕ ಪಕ್ಷಗಳು. ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಆಡಳಿತ ನಡೆಸುತ್ತಿವೆ. ಮೋದಿ ಅವರು ದೊಡ್ಡ ನಾಯಕರು, ಪ್ರಧಾನಿಯಾಗಿ, ವಿಶ್ವನಾಯಕರಾಗಿ ಅವರು ಬೆಳೆದಿದ್ದಾರೆ. ಅವರಿಗೆ ಎದುರು ನಿಲ್ಲುವ ಮತ್ತೊಬ್ಬ ನಾಯಕ ಇಡೀ ದೇಶದಲ್ಲಿ ಯಾರೂ ಇಲ್ಲ. ಯಾವ ಪಕ್ಷದಲ್ಲಿಯೂ ಇಲ್ಲ. ಈ ಕಾರಣಕ್ಕಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ನಾವು ಪ್ರಧಾನಿಗಳ ಜತೆ ಕೈ ಜೋಡಿಸಿದ್ದೇವೆ. ಅವರ ವಿಶ್ವಾಸ ಗಳಿಸಿದ್ದೇವೆ. ಕುಮಾರಸ್ವಾಮಿ ಅವರನ್ನು ನಾನು ಸಚಿವರನ್ನಾಗಿ ಮಾಡಿ ಎಂದು ಕೇಳಿದವನಲ್ಲ. ಆದರೆ, ಮೋದಿ ಅವರೇ ಅವರನ್ನು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ಮಾಡಿ ಉತ್ತಮ ಖಾತೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ವೈಜಾಗ್ ಉಕ್ಕು ಕಾರ್ಖಾನೆಯನ್ನು ಕುಮಾರಸ್ವಾಮಿ ಅವರು ಮೋದಿ ಅವರ ಮಾರ್ಗದರ್ಶನದಲ್ಲಿ ಪುನಶ್ಚೇತನ ಮಾಡಿದ್ದಾರೆ. ಈಗ ಅದು ಲಾಭದಲ್ಲಿ ನಡೆಯುತ್ತಿದೆ. ಅದಕ್ಕೆ ಆ ರಾಜ್ಯದ ಸಿಎಂ ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಸಹಕಾರ ನೀಡಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಹೀಗೆ ಏಕೆ ಆಗುತ್ತಿಲ್ಲ? ಸಹಕಾರ ನೀಡಿದರೆ ಹೆಚ್ಎಂಟಿ, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ, ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಅದಿರು ಮತ್ತು ಉಕ್ಕು ಕಾರ್ಖಾನೆಯನ್ನು ಉಳಿಸಬಹುದು. ಕುಮಾರಸ್ವಾಮಿ ಅವರಿಗೆ ಕೆಲಸ ಮಾಡುವ ಉತ್ಸಾಹ, ಶ್ರದ್ಧೆ ಇದೆ. ಕಾಂಗ್ರೆಸ್ ಸರ್ಕಾರವು ಕುಮಾರಸ್ವಾಮಿ ಅವರಿಗೆ ಸಹಕಾರ ನೀಡಬೇಕು. ಸಹಕಾರ ಕೊಟ್ಟರೆ ನಾನು ಹೇಳಿದ ಎಲ್ಲಾ ಕಾರ್ಖಾನೆಗಳು ಮತ್ತೆ ಜೀವ ಪಡೆಯುತ್ತವೆ. ನಮಗೆ ಸವಾಲುಗಳು ಇವೆ. ರಾಜ್ಯದ ಅನೇಕ ನೀರಾವರಿ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಕ್ಕಾಗಿ ನಾವು ಶ್ರಮಿಸಬೇಕಿದೆ ಎಂದು ದೇವೇಗೌಡರು ಒತ್ತಿ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಮಾಡುವುದು ಅಗತ್ಯದ ಕೆಲಸ. ಅವರ ಪ್ರವಾಸದ ವೇಳಾಪಟ್ಟಿಯನ್ನು ಗಮನಿಸಿದ್ದೇನೆ. ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡು ಹೊರಟಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ಕೊಟ್ಟು ಕೆಲಸ ಮಾಡಬೇಕು. ಬೆಂಗಳೂರು ನಗರದಲ್ಲಿ ಮುಂದೆ ಬಿಬಿಎಂಪಿ ಚುನಾವಣೆಯಲ್ಲಿ ನಾವು ಐವತ್ತು ಸ್ಥಾನ ಗೆಲ್ಲಬೇಕು. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನ್ಮದಿನ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭ ಹಾರೈಕೆ