ಬೆಂಗಳೂರು: "ಆರ್ಸಿಬಿ ಗೆದ್ದ ನಂತರ ಬಿಜೆಪಿ ಹಾಗೂ ದಳದ ನಾಯಕರು ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಎಕ್ಸ್ (ಟ್ವೀಟ್) ಮಾಡಿದ್ದರು. ಆದರೆ, ಇಂದು ವರಸೆ ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, "ಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿದ್ದರು. ಕ್ರೀಡಾ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ. ನಿಮಗೆ ಮೆರವಣಿಗೆ ನಡೆಸಲು ಆಗುವುದಿಲ್ಲವೇ ಎಂದು ಕೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಇದೇ ಪ್ರವೃತ್ತಿ ಹೊಂದಿದ್ದಾರೆ. ಜನ ಅವರಿಗೆ ಬಹುಮತ ನೀಡಿಲ್ಲ. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಆಗಿರುವ ಘೋರ ದುರಂತಗಳ ಪಟ್ಟಿ ನೀಡುತ್ತೇವೆ. ಬಿಜೆಪಿ ನಾಯುಕರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜೀನಾಮೆ ನೀಡಲಿ" ಎಂದು ಹೇಳಿದರು.
ಮುಂಬೈ ದಾಳಿಯಾದಾಗ ಮನಮೋಹನ್ ಸಿಂಗ್ ಅವರು ರಾಜಿನಾಮೆ ನೀಡಿದ್ದರೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, "ಈ ಘಟನೆ ನಂತರ ವಿಲಾಸ್ ರಾವ್ ದೇಶಮಖ್ ಅವರು ರಾಜಿನಾಮೆ ನೀಡಿದ್ದರು. ಇದನ್ನು ಕುಮಾರಸ್ವಾಮಿ ಅವರು ಮರೆತು ಹೋಗಿದ್ದಾರೆ. ಇವರಿಗೆ ಡಿ.ಕೆ. ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದೇ ಊಟ, ನಿದ್ದೆ ಏನೂ ಆಗುವುದಿಲ್ಲ. ಅವರು ಮೊದಲು ಆರೋಗ್ಯದ ಬಗ್ಗೆ ಗಮನವಿಡಲಿ, ಈ ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಮನವಿ ಮಾಡುತ್ತೇನೆ" ಎಂದರು.
ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲಿ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಿರುವ ಬಗ್ಗೆ ಮಾತನಾಡಿ, "ನಮ್ಮ ಪೊಲೀಸರು ಸಮರ್ಥರಿದ್ದಾರೆ. ಬಿಜೆಪಿಯವರು ಉನ್ನತ ತನಿಖೆಗೆ ಒತ್ತಾಯಿಸಿದ ಅನೇಕ ಪ್ರಕರಣಗಳನ್ನು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಿಬಿಐಗೆ ನೀಡಿದೆ. ಇದರ ಫಲಿತಾಂಶ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ. ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಪ್ರತಿಕ್ರಿಯಿಸಿದರು.
ಹೈಕಮಾಂಡ್ ಕರೆ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ದೆಹಲಿ ಭೇಟಿ ನೀಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, "ಸತ್ಯಕ್ಕೆ ದೂರವಾದ ಮಾತನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಬೆಂಗಳೂರಿನ ಕಸ ವಿಲೇವಾರಿಗೆ ವಿಚಾರವಾಗಿ ಟೆಂಡರ್ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರು ದೆಹಲಿಯಲ್ಲಿ ಇರುವ ಕಸ ವಿಲೇವಾರಿ ಬಗ್ಗೆ ಇರುವ ಹೊಸ ತಂತ್ರಜ್ಞಾನ ವೀಕ್ಷಿಸಲು ಬಿಬಿಎಂಪಿಯ 15 ಜನ ಅಧಿಕಾರಿಗಳ ತಂಡದ ಜೊತೆ ತೆರಳಿದ್ದಾರೆ. ಹೊಸ ರಸ್ತೆ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಲು ದೆಹಲಿಯ ನಗರಾಭಿವೃದ್ದಿ ಇಲಾಖೆಯ ಜೊತೆ ಸಭೆ ನಡೆಸಲು ತೆರಳಿದ್ದಾರೆ" ಎಂದು ಹೇಳಿದರು.
"ಹೈಕಮಾಂಡ್ ಭೇಟಿ ಮಾಡಬೇಕು ಎಂದು ಹೇಳಿಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋದಂತಹ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸುವುದು ಸರ್ವೇ ಸಾಮಾನ್ಯ. ತಿಂಗಳಿಗೆ ಎರಡು ಬಾರಿಯಾದರೂ ದೆಹಲಿಗೆ ಭೇಟಿ ನೀಡುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಅವರಿಗೂ ಬೇರೆ, ಬೇರೆ ಕೆಲಸಗಳು ಇರುತ್ತವೆ. ನನಗೆ ಇರುವ ಮಾಹಿತಿ ಪ್ರಕಾರ ಮಾಧ್ಯಮಗಳಲ್ಲಿ ಬರುತ್ತಿರುವ ಮಾತು ಸುಳ್ಳು" ಎಂದು ತಿಳಿಸಿದರು.
ಇದನ್ನೂ ಓದಿ: ಖಾತೆ ಬದಲಾಯಿಸುವಂತೆ ಸಿಎಂಗೆ ಕೇಳಿಲ್ಲ, ಇದು ಸುಳ್ಳು ಸುದ್ದಿ: ಸಚಿವ ಪರಮೇಶ್ವರ್