ಕಾರವಾರ: ಭಯದ ವಾತಾವರಣ ಇರುವ ಕಾರಣ ಗನ್ ಮ್ಯಾನ್ ನೀಡುವಂತೆ ಗೃಹ ಸಚಿವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಾಸಕರಿರುವಾಗ ಭಯದ ವಾತಾವರಣ ಇರುವ ಬಗ್ಗೆ ತಿಳಿಸಿದಾಗ ಭದ್ರತೆಗೆ ಗನ್ ಮೆನ್ ನೀಡಲಾಗಿತ್ತು. ಚುನಾವಣೆ ಬಳಿಕ ಮತ್ತೆ ವಾಪಸ್ ಪಡೆಯಲಾಗಿದೆ. ಇಂದಿಗೂ ಭಯದ ವಾತಾವರಣ ಇರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ, ಗೃಹಮಂತ್ರಿಗೆ ಮನವಿ ನೀಡಿದ್ದೆವು. ಆದರೆ, ಈವರೆಗೂ ನೀಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಮಗೆ ಒಂದು ತಿಂಗಳು ಮಾತ್ರ ಗನ್ ಮ್ಯಾನ್ ನೀಡಲು ಅವಕಾಶ ಇರುವ ಬಗ್ಗೆ ತಿಳಿಸಿದ್ದರು. ಅದರಂತೆ ಒಂದು ತಿಂಗಳು ನೀಡಲೂ ಕೋರಲಾಗಿತ್ತು. ಇತ್ತೀಚೆಗೆ ಕಾರವಾರದಲ್ಲಿ ಕೊಲೆಯಾದಾಗಲೂ ಭಯದ ವಾತಾವರಣ ಇರುವ ಬಗ್ಗೆ ತಿಳಿಸಿ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಿದ್ದರೂ ಗನ್‌ಮ್ಯಾನ್ ನೀಡಿಲ್ಲ. ಇದರಲ್ಲಿ ಏನೋ ಪಿತೂರಿ ಇದೆ. ರಾಜಕೀಯವಾಗಿ ಹಾಗೂ ವ್ಯವಹಾರಿಕವಾಗಿ ಇರುವ ವಿರೋಧಿಗಳಿಂದ ನಮಗೆ ಬೆದರಿಕೆ ಇದೆ ಎಂದು ದೂರಿದರು.
ಬೆಂಗಳೂರು ಕಾಲ್ತುಳಿತದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ರೂಪಾಲಿ ನಾಯ್ಕ, ಆರ್ಸಿಬಿ ಜಯ ಗಳಿಸಿದ ಬಳಿಕ ಕಾಂಗ್ರೆಸ್ ಸರ್ಕಾರ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕ್ಕೊಳ್ಳದೇ ಇರುವುದು ದುರ್ಘಟನೆಗೆ ಕಾರಣ ಎಂದು ಇದೇ ವೇಳೆ ಅವರು ಆರೋಪಿಸಿದರು.