ಬೆಂಗಳೂರು: ವಿದ್ಯುತ್ ಮತ್ತು ಹೈಡ್ರೋಜನ್‌ಚಾಲಿತ ವಾಹನ ತಯಾರಿಕೆ ವಲಯಕ್ಕೆ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಿ, 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಮುಂದಿನ ಐದು ವರ್ಷಗಳ ಅವಧಿಯ ಪರಿಸರಸ್ನೇಹಿ ಸಾರಿಗೆ ನೀತಿಯನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಇಂದು ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.
ನೀತಿಯ ಬಗ್ಗೆ ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ''ಇದಕ್ಕಾಗಿ ಗೌರಿಬಿದನೂರು, ಧಾರವಾಡ ಮತ್ತು ಹಾರೋಹಳ್ಳಿಯಲ್ಲಿ ಪರಿಸರಸ್ನೇಹಿ ಇಂಧನ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುವುದು'' ಎಂದು ಹೇಳಿದರು.

''ದೇಶದ ಇ.ವಿ ವಲಯದಲ್ಲಿ ರಾಜ್ಯವು 3ನೇ ಸ್ಥಾನದಲ್ಲಿದ್ದು, ನಮ್ಮಲ್ಲಿ 2.50 ಲಕ್ಷ ಇಲೆಕ್ಟ್ರಾನಿಕ್ ವಾಹನಗಳಿವೆ. ಬ್ಯಾಟರಿ ಪ್ಯಾಕ್, ಕೋಶಗಳ ತಯಾರಿಕೆ, ಬಿಡಿಭಾಗಗಳ ಉತ್ಪಾದನೆ, ಒಇಎಂ, ಚಾರ್ಜಿಂಗ್, ಪರೀಕ್ಷಾರ್ಥ ಮೂಲಸೌಕರ್ಯ ಹಾಗೂ ಆರ್&ಡಿ ಇವುಗಳಿಗೆ ಈಗಾಗಲೇ 25 ಸಾವಿರ ಕೋಟಿ ರೂ. ಬಂದಿದೆ. ಹೊಸ ನೀತಿಯಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹೈಡ್ರೋಜನ್ ಕೇಂದ್ರಗಳ ಜಾಲದ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಜೊತೆಗೆ ಈಗ ಓಡಾಡುತ್ತಿರುವ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ರೆಟ್ರೋ-ಫಿಟ್ಟಿಂಗ್ ಪ್ರೋತ್ಸಾಹಿಸಲಾಗುವುದು'' ಎಂದು ತಿಳಿಸಿದರು.
''ಬೆಂಗಳೂರಿನಲ್ಲಿ ಬಿಎಂಟಿಸಿ ವ್ಯಾಪ್ತಿಯ ಹೊರಗೆ ಕಡಿಮೆ ದೂರದಲ್ಲಿರುವ ಸೇವೆಗಳಿಗೆ ಇ.ವಿ. ಬಸ್ ಸೇವೆಗಳನ್ನು ಹೆಚ್ಚಿಸಲಾಗುವುದು. ಜೊತೆಗೆ, ಇ-ಕಾಮರ್ಸ್ ಮತ್ತು ವಿತರಣಾ ಕಂಪನಿಗಳು ತಮ್ಮ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು 2030ರ ವೇಳೆಗೆ ಇ.ವಿ/ಹೈಡ್ರೋಜನ್ ಚಾಲಿತವಾಗಿ ಬದಲಿಸಿಕೊಳ್ಳಲು ಒತ್ತು ಕೊಡಲಾಗಿದೆ. ಅಲ್ಲದೆ, ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಘನತ್ಯಾಜ್ಯ ನಿರ್ವಹಣೆಗೆ ಇರುವ ವಾಹನಗಳನ್ನು ಕೂಡ ರೂಪಾಂತರಿಸಿಕೊಳ್ಳುವಂತೆ ಮಾಡಲಾಗುವುದು. ಖಾಸಗಿ ಕಂಪನಿಗಳು ಮತ್ತು ಶಾಲಾ ವಾಹನಗಳಿಗೂ ಇದನ್ನು ಅನ್ವಯಿಸಲಾಗುವುದು'' ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಇದನ್ನೂ ಓದಿ: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದೆ: ಡಿ.ಕೆ.ಶಿವಕುಮಾರ್