ಆನೇಕಲ್, ಬೆಂಗಳೂರು: ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ನೀಲಿ ಬಣ್ಣದ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣ ಭೇದಿಸಿದ ಸೂರ್ಯನಗರ ಪೊಲೀಸರು, ಐದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೂಟ್ಕೇಸ್ನಲ್ಲಿ ಇಡೀ ದೇಹ: ಮೇ 21ರಂದು ಬೆಳಗ್ಗೆ ಬೆಂಗಳೂರು - ಹೊಸೂರು ರಾಷ್ಟ್ರೀಯ ಮುಖ್ಯ ಹೆದ್ದಾರಿಯ ಚಂದಾಪುರದ ರೈಲ್ವೆ ಸೇತುವೆ ಬಳಿ ನೀಲಿ ಬಣ್ಣದ ಸೂಟ್‌ಕೇಸ್ ಪತ್ತೆಯಾಗಿತ್ತು. ಆದರೆ, ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು, ಪರಿಶೀಲಿಸಿದಾಗ ಅದು ಸೂರ್ಯನಗರ ಪೊಲೀಸ್ ವ್ಯಾಪ್ತಿಯೆಂದು ಗೊತ್ತಾಗಿತ್ತು. ಕೊನೆಗೆ ಸೂರ್ಯನಗರ ಠಾಣಾ ಪೊಲೀಸರೇ ಆ ಸೂಟ್‌ಕೇಸ್ ಬಿಚ್ಚಿದಾಗ ಓರ್ವ ಹುಡುಗಿಯ ಶವ ಇರುವುದು ಗೊತ್ತಾಗಿತ್ತು. ಯುವತಿಯನ್ನು ಕೈ ಕಾಲುಗಳನ್ನು ಮಡಚಿ ಇಡೀ ದೇಹವನ್ನು ಸೂಟ್ಕೇಸ್ನಲ್ಲಿ ತುಂಬಲಾಗಿತ್ತು. ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು.
ಅನಂತರ ಅಪರಿಚಿತ ಶವ ಪತ್ತೆಗೆ ಖಾಸಗಿ ಆಸ್ಪತ್ರೆಯಲ್ಲಿ ಶೀತಲ ಶವಾಗಾರದಲ್ಲಿ ಇಟ್ಟ ಪೊಲೀಸರು, ಪ್ರಕಟಣೆ ಹೊರಡಿಸಿ ಆರೋಪಿಗಳ ಬಂಧನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಯುವತಿಯ ಚಹರೆ ಗಮನಿಸಿದರೆ ಉತ್ತರ ಭಾರತ ಮೂಲದ ಹುಡುಗಿಯಂತೆ ಮೇಲ್ನೋಟಕ್ಕೆ ಕಂಡು ಬರುವುದಾಗಿ ಪೊಲೀಸರು ಅಂದಾಜಿಸಿದ್ದರು. ಅವರ ಅಂದಾಜಿನಂತೆಯೇ ಬಿಹಾರದ ನವಾದ ಜಿಲ್ಲೆಯ ಬೆಲಾರು ಗ್ರಾಮದವಳು ಎಂದು ಪತ್ತೆಯಾಗಿದ್ದು, ಕಳೆದ ಮೇ 15ರಂದು ತವರೂರಿನಿಂದ ನಾಪತ್ತೆಯಾಗಿದ್ದಳು ಎಂಬ ಮಾಹಿತಿ ಕಲೆ ಹಾಕಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿದ್ದ ತಂದೆ: ಆಕೆಯ ತಂದೆ ಹತ್ತಿರದ ಹಿಸ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮೇ 23ರಂದು ತನ್ನ ಪುತ್ರಿಯನ್ನು ಅಪಹರಣ ಮಾಡಲಾಗಿದೆ ಎಂದು ಮೃತ ಹುಡುಗಿಯ ತಂದೆ ಬಿಹಾರದ ಹಿಸ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು ಎಂದು ಪ್ರಕರಣದ ಸತ್ಯಾಸತ್ಯೆ ಬಗ್ಗೆ ಸೂರ್ಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ: ಕಳೆದ ಮೇ 15ರಂದು ಹುಡುಗಿಯನ್ನು ಪುಸಲಾಯಿಸಿ ಅಪಹರಿಸಿದ್ದ ಆರೋಪಿ, 17ರಂದು ಆನೇಕಲ್ ಬಳಿಯ ಕಾಚನಾಯಕನಹಳ್ಳಿಯ ಸ್ನೇಹಿತರೊಬ್ಬರ ಮನೆಗೆ ಕರೆತಂದಿದ್ದ. ತಾನು ಹೆಂಡತಿಯೊಂದಿಗೆ ಬಂದಿರುವೆ, ಎರಡು ಮೂರು ದಿನ ಇದ್ದು ಹೋಗುವೆ ಎಂದು ಬೇಡಿದ್ದರಿಂದ ಸ್ನೇಹಿತನು, ಆರೋಪಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದ. ಇದೇ ಹುಡುಗಿಯ ಕೊಲೆಗೆ ಕಾರಣವಾಗಿದೆ.
ಇಬ್ಬರು ದಂಪತಿಗಳೆಂದು ತಿಳಿದ ಸ್ನೇಹಿತ, ಮೇ 20ರಂದು ದಿನದ ಕೂಲಿಗೆ ಆಚೆಗೆ ಹೋದಾಗ ಬೆಳಗ್ಗೆ 8 ರಿಂದ 9 ಗಂಟೆ ಒಳಗಡೆ ಹುಡುಗಿಯೊಂದಿಗೆ ಅನೈಸರ್ಗಿಕ ಲೈಂಗಿಕ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಕೊಲೆ ಬಳಿಕ ಆರೋಪಿಯು ತನ್ನ ಇತರ ಏಳು ಮಂದಿ ಸ್ನೇಹಿತರನ್ನು ಕರೆತಂದು ಆತ್ಮಹತ್ಯೆ ಅಂತ ಬಿಂಬಿಸಿ ಒಂದು ವಾಹನದಲ್ಲಿ ಸೂಟ್ಕೇಸ್ನಲ್ಲಿ ದೇಹವನ್ನು ಮಡಚಿಟ್ಟು ರೈಲ್ವೆ ಹಳಿಯಿಂದ ಎಸೆದಂತೆ ಭಾಸವಾಗುವ ರೀತಿ ರಾಷ್ಟ್ರೀಯ ಹೆದ್ದಾರಿ ಬಳಿ ಇಟ್ಟು ತಕ್ಷಣ ಬಿಹಾರ ಸೇರಿಕೊಂಡಿದ್ದರು. ಆರೋಪಿಗಳ ಜಾಡು ಹಿಡಿದ ಸೂರ್ಯನಗರ ಪೊಲೀಸರು, ಬಿಹಾರಕ್ಕೆ ತೆರಳಿ ಅಲ್ಲಿನ ಆರೋಪಿಗಳ ಹೆಡೆಮುರಿಕಟ್ಟಿ ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಸಿಕೆ ಬಾಬ ಮಾಹಿತಿ: ಬಂಧಿತ ಪ್ರಮುಖ ಆರೋಪಿಯು ಈ ಹಿಂದೆ ಆನೇಕಲ್ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ. ಹೀಗಾಗಿ ಬಿಹಾರದ ಹುಡುಗಿ ಊರಿಗೆ ನೆಂಟರಿಷ್ಟರ ಮನೆಗೆ ಹೋಗಿ 10ನೇ ತರಗತಿ ಓದುತ್ತಿದ್ದ ಆಕೆಯ ಬಲೆ ಬೀಸಿದ್ದು, ತನಗೆ ಎರಡು ಮಕ್ಕಳಿದ್ದರೂ ಹುಡುಗಿಯನ್ನು ಕರೆತಂದಿದ್ದ. ಆರೋಪಿಗೆ ಸಹಾಯ ಮಾಡಿದ್ದವರನ್ನು ಸಹ ಬಂಧಿಸಲಾಗಿದೆ. ಇನ್ನುಳಿದ ಇಬ್ಬರು ಆರೊಪಿಗಳಿಗಾಗಿ ಶೋಧ ನಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆನೇಕಲ್: ಸೂಟ್ಕೇಸ್ನಲ್ಲಿ ಯುವತಿ ಶವ ಪತ್ತೆ, ಬೆಚ್ಚಿಬಿದ್ದ ಜನರು - GIRL DEAD BODY IN SUITCASE