ಮಂಗಳೂರು: ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹೈಕೋರ್ಟ್ನಲ್ಲಿ ವಕೀಲರ ಮೂಲಕ ಕ್ವಾಷ್ ಮಾಡಿ ಬಗೆಹರಿಸುತ್ತೇನೆ ಎಂದು ನಂಬಿಸಿ ಗಾಯಕರೊಬ್ಬರಿಂದ 3.20 ಲಕ್ಷ ರೂ ಪಡೆದು ವಂಚಿಸಿದ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬ ಮಹಿಳೆಯ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?: ಬೆಳ್ತಂಗಡಿಯ ಮಡಂತ್ಯಾರ್ ನಿವಾಸಿ, ಗಾಯಕ ರಾಜೇಶ್.ಕೆ. (43) ಎಂಬವರಿಗೆ 2024ರಲ್ಲಿ ಫೇಸ್‌ಬುಕ್ ಮೂಲಕ ಆರೋಪಿತೆ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ಪರಿಚಯವಾಗಿತ್ತು. ಆಕೆಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಆರೋಪಿತೆಯು ರಾಜೇಶ್ ಜೊತೆಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ತಾನು ನೊಂದವರಿಗೆ ಹಾಗೂ ವಂಚನೆಗೊಳಪಟ್ಟ ಅನೇಕರಿಗೆ ಸಹಾಯ ಮಾಡಿರುವುದಾಗಿ ತಿಳಿಸಿದ್ದಳು.
ಈ ವೇಳೆ ತಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಅವರಿಗೆ ತಿಳಿಸಿ ಸಹಾಯ ಕೇಳಿದ್ದಾರೆ. ಪ್ರಕರಣ ಬಗೆಹರಿಸಿಕೊಡುವುದಾಗಿ ನಂಬಿಸಿದ ಆರೋಪಿತೆ, ಆ ಬಳಿಕ ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚಿದೆ ಎಂದು ಹೇಳಿ, 2025ರ ಫೆಬ್ರವರಿ-ಮೇ ತಿಂಗಳಿನಲ್ಲಿ ಹಂತಹಂತವಾಗಿ ಒಟ್ಟು 3,20,000 ರೂ ಪಡೆದುಕೊಂಡಿದ್ದಾರೆ.
ಪ್ರಕರಣ ಬಗೆಹರಿಯದ ಹಿನ್ನೆಲೆಯಲ್ಲಿ ಆಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ, ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದರಿಂದ ರಾಜೇಶ್ ಸಂಶಯಗೊಂಡು ಆಕೆಯ ಬಗ್ಗೆ ವಿಚಾರಿಸಿದಾಗ ತಾನು ಮೋಸ ಹೋಗಿರುವುದನ್ನು ತಿಳಿದುಕೊಂಡಿದ್ದಾರೆ. ರಾಜೇಶ್ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 37/2025 ಕಲಂ: 318(4), 351(2) BNS-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ. ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಐಶ್ವರ್ಯ ಗೌಡ ವಿರುದ್ಧ ವಂಚನೆ ಪ್ರಕರಣ: ಸಿಐಡಿ ತನಿಖೆಗೆ ಆದೇಶಿಸಿದ ಪೊಲೀಸ್ ಇಲಾಖೆ