ಉದ್ಯಮಿಗೆ ಬೆದರಿಕೆ ಆರೋಪ: ಮಹಾನಗರ ಪಾಲಿಕೆ ಮಾಜಿ ಸದಸ್ಯನ ವಿರುದ್ಧ ಎಫ್‌ಐಆರ್
ತಮಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ಇದರನ್ವಯ ಇಬ್ಬರ ವಿರುದ್ಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published : April 30, 2025 at 8:44 PM IST
ಮೈಸೂರು : ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಸೇರಿದಂತೆ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
"ವಿಜಯನಗರ 2ನೇ ಹಂತದ ನಿವಾಸಿ ಕೃಷ್ಣ ಕಾಮಿರೆಡ್ಡಿ ನೀಡಿದ ದೂರಿನ ಮೇರೆಗೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಿ. ಮಹದೇಶ್ ಮತ್ತು ಅವರ ಸಹಚರ ನಾಗು ವಿರುದ್ದ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಕೆಫೆ ಪ್ರಾಂಚೈಸಿ ತೆಗೆದುಕೊಂಡು ಗೋಕುಲಂನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದಾಗ ನಾಗು ಎಂಬಾತ ಬಂದು ನಾನು ಮಹದೇಶ್ ಕಡೆಯವರು, ಇಲ್ಲಿ ವ್ಯಾಪಾರ ಮಾಡಬೇಕೆಂದರೆ 5 ಲಕ್ಷ ರೂ. ಹಣ ನೀಡಬೇಕು, ಇಲ್ಲವಾದರೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಹಣ ನೀಡಲು ಕಾಲಾವಕಾಶ ಬೇಕೆಂದು ಕೇಳಿ ನಾನು ಮತ್ತೆ ಕಟ್ಟಡ ಕಾರ್ಯ ಶುರು ಮಾಡಿದ್ದೆ. ಆಗ ಕರೆ ಮಾಡಿದ ಮಹದೇಶ್, ಹಣ ನೀಡದೇ ಮತ್ತೆ ಕೆಲಸ ಮಾಡುತ್ತಿಯಾ? ಹಣ ನೀಡುವವರೆಗೂ ಕೆಲಸ ಮಾಡಬಾರದೆಂದು ಬೆದರಿಕೆ ಹಾಕಿದ್ದಾರೆ. ಮಹದೇಶ್ ಮತ್ತು ನಾಗು ಅವರಿಂದ ನಿತ್ಯ ಬೆದರಿಕೆ ಕರೆಗಳು ಬರುತ್ತಿದ್ದು, ನಾನು ವ್ಯಾಪಾರ ನಡೆಸಲು ಸೂಕ್ತ ರಕ್ಷಣೆ ನೀಡುವುದರೊಂದಿಗೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೃಷ್ಣ ಕಾಮಿರೆಡ್ಡಿ ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 40 ಮರ ಕಡಿದ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು - TREE FELLING CASE

