ದ.ಕ ಜಿಲ್ಲೆಯಲ್ಲಿ ಹೆಣ್ಮಕ್ಕಳ ಜನನ ಪ್ರಮಾಣ ಇಳಿಮುಖ: ಲಿಂಗಾನುಪಾತದಲ್ಲಿ ಇಳಿಕೆ ನೀಡುತ್ತಿದೆ ಎಚ್ಚರಿಕೆ
ಮಕ್ಕಳನ್ನು ಹೆರುವ ದಂಪತಿಗಳ ಸಂಖ್ಯೆ ಕಡಿಮೆಯಾಗಿರುವುದು ಲಿಂಗಾನುಪಾತ ಇಳಿಕೆಗೆ ಒಂದು ಕಾರಣ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ.

Published : October 10, 2025 at 9:23 AM IST
ವಿಶೇಷ ವರದಿ: ವಿನೋದ್ ಪುದು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ರಂಗದಲ್ಲೂ ಪುರುಷರಷ್ಟೆ ಮಹಿಳೆಯರು ಪ್ರಾಬಲ್ಯ ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಮಕ್ಕಳ ಪ್ರಾಬಲ್ಯ ಜಾಸ್ತಿ. ಆದರೆ ಇತ್ತೀಚಿನ ವರದಿಗಳನ್ನು ಗಮನಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಮಕ್ಕಳ ಜನನ ಪ್ರಮಾಣ ಸಂಖ್ಯೆ ಕಡಿಮೆಯಾಗುತ್ತಿದ್ದು, ಲಿಂಗಾನುಪಾತದ ಇಳಿಕೆ ಆತಂಕ ಸೃಷ್ಟಿಸಿದೆ.
ದ.ಕ. ಜಿಲ್ಲೆಯಲ್ಲಿ ಕಳೆದ 10 ವರ್ಷಗಳ ದಾಖಲೆ ಗಮನಿಸಿದರೆ ಪ್ರತಿ ವರ್ಷ ಹೆಣ್ಮಕ್ಕಳ ಜನನ ಪ್ರಮಾಣ ಗಂಡುಮಕ್ಕಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು, ಲಿಂಗಾನುಪಾತದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ವಿಶೇಷವಾಗಿ ಫಲವತ್ತತೆಯ ದರದಲ್ಲೂ ಇಳಿಮುಖವಾದ ಟ್ರೆಂಡ್ ಕಾಣಿಸಿಕೊಂಡಿದ್ದು, ಇದು ಆತಂಕದ ವಿಚಾರವಾಗಿದೆ.
2017-18 ರಿಂದ 2025-26 ಆಗಸ್ಟ್ ವರೆಗಿನ ಲಿಂಗಾನುಪಾತ
| ವರ್ಷ | ಗಂಡು | ಹೆಣ್ಣು | ಲಿಂಗಾನುಪಾತ |
| 2017-18 | 15085 | 14332 | 950 |
| 2018-19 | 14627 | 13964 | 954 |
| 2019-20 | 14055 | 13256 | 943 |
| 2020-21 | 13169 | 12677 | 963 |
| 2021-22 | 13797 | 13075 | 948 |
| 2022-23 | 13936 | 13415 | 963 |
| 2023-24 | 13171 | 12685 | 963 |
| 2024-25 | 12431 | 11660 | 938 |
2025-26 (ಆಗಸ್ಟ್ವರೆಗೆ) | 5329 | 5032 | 944 |
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಮಕ್ಕಳ ಜನನ ಸಂಖ್ಯೆ ಕಡಿಮೆಯಾಗಲು ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮೊದಲ ಮಗು ಗಂಡಾದರೆ ಒಂದೇ ಮಗು ಸಾಕು ಎಂಬ ನಿರ್ಧಾರಕ್ಕೆ ಬರುತ್ತಿರುವುದು, ಮೊದಲ ಮಗು ಹೆಣ್ಣಾದರೆ ಮಾತ್ರವೇ 2ನೇ ಮಗುವಿನ ಬಗ್ಗೆ ಯೋಚಿಸುತ್ತಿರುವುದು ಕಾರಣ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಲಿಂಗಾನುಪಾತ ವ್ಯತ್ಯಾಸವಾಗುತ್ತಿದೆ.
ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ದತಿ, ಕೆಲಸದಲ್ಲಿ ವಿಪರೀತ ಒತ್ತಡ ಜೊತೆಗೆ ದಂಪತಿಗಳಲ್ಲಿ ಇರುವ ಸಮಯದ ಅಭಾವ ಸೇರಿದಂತೆ ಹತ್ತಾರು ವಿಚಾರಗಳಿಂದ ಇಂದಿನ ದಂಪತಿಗಳಲ್ಲಿ ಮಕ್ಕಳನ್ನು ಪಡೆಯುವ ಶಕ್ತಿ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಫಲವತ್ತತೆಯ ದರದಲ್ಲೂ ಇಳಿಕೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಫಲವತ್ತತೆ ಹಾಗೂ ಲಿಂಗಾನುಪಾತ ಇಳಿಕೆ ಹಾದಿಯಲ್ಲಿದೆ. ಫಲವಂತಿಕೆ ಪ್ರಮಾಣ 20 ವರ್ಷಗಳ ಹಿಂದೆ ಶೇ.2ರಷ್ಟು ಇದ್ದರೆ ಈಗ ಶೇ.1.5ಕ್ಕೆ ಇಳಿಕೆ ಕಂಡಿದೆ. ಮಹಿಳಾ ಸಾಕ್ಷರತೆ, ಮಹಿಳಾ ಸಬಲೀಕರಣ ವಿಚಾರಗಳ ಜತೆಯಲ್ಲಿ ಸಾಮಾಜಿಕ- ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು ಫಲವತ್ತತೆ ದರ ಕುಸಿತದಲ್ಲಿ ಗಮನಾರ್ಹ ಪಾತ್ರ ವಹಿಸಿವೆ. ಜತೆಗೆ ದಂಪತಿಗಳಲ್ಲಿ ಮಾನಸಿಕ ಹಾಗೂ ಕೆಲಸದ ಒತ್ತಡ ಕೂಡ ಮುಖ್ಯವಾದ ಕಾರಣಗಳಾಗುತ್ತಿವೆ.
ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಫಲವತ್ತತೆಯ ದರ ಇದೀಗ 1.5 ಇಳಿಕೆಯಾಗಿದೆ. ಮಕ್ಕಳನ್ನು ಹೆರುವ ದಂಪತಿಗಳ ಸಂಖ್ಯೆ ಕಡಿಮೆಯಾಗಿರುವುದು ಇದಕ್ಕೆ ಒಂದು ಕಾರಣ. ನಮ್ಮಲ್ಲಿ ಕುಟುಂಬ ಯೋಜನೆ ಅಳವಡಿಕೆ ಉತ್ತಮ ರೀತಿಯಲ್ಲಿ ಆಗಿದೆ. ದಂಪತಿಗಳು ಒಂದು ಮಗು ಅಥವಾ ಎರಡು ಮಕ್ಕಳಿಗೆ ಸೀಮಿತವಾಗಿರುವುದು ಏರುಪೇರು ಆಗಲು ಕಾರಣ ಆಗಿದೆ. ಕಳೆದ 5 ವರ್ಷಗಳಿಂದ ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ವಯಸ್ಕರಲ್ಲಿ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ ಇದೆ. ಆದರೆ ಮಕ್ಕಳಲ್ಲಿ ಕಡಿಮೆಯಾಗಿದೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲಗರ್ಭಿಣಿ ಪ್ರಕರಣ: ಕಳೆದ ಒಂದು ವರ್ಷದಲ್ಲಿ 55 ಬೆಳಕಿಗೆ!

