ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಅವರನ್ನು ಬಂಧಿಸಿ ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿದೆ.
ಬಹುಕೋಟಿ ಹಗರಣ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಮಧ್ಯೆ ಇ.ಡಿ. ಸಹ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಿಗಮದ ಹಿಂದಿನ ನಿರ್ದೇಶಕರಾಗಿದ್ದ ಬಿ.ಕೆ. ನಾಗರಾಜಪ್ಪ ಹಾಗೂ ಲೀಲಾವತಿ ಸೇರಿದಂತೆ ಹಲವರ ಮನೆಗಳ ಮೇಲೆ ಇ.ಡಿ. ದಾಳಿ ಮಾಡಿತ್ತು. ಪರಿಶೋಧನೆ ವೇಳೆ ಅಕ್ರಮವಾಗಿ ಹಣ ವರ್ಗಾವಣೆ ಸಂಬಂಧ ದಾಖಲಾತಿಗಳು ದೊರೆತಿದ್ದರಿಂದ ನಾಗರಾಜಪ್ಪ ಅವರನ್ನು ಬಂಧಿಸಿತ್ತು. ಮತ್ತೊಂದೆಡೆ ಲೀಲಾವತಿ ಮನೆಯಲ್ಲಿಯೂ ದಾಖಲಾತಿ ಸಿಕ್ಕಿದ್ದರಿಂದ ಏ.12ರಂದು ಇ.ಡಿ.ವಶಕ್ಕೆ ಪಡೆದುಕೊಂಡಿತ್ತು. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ಇಡಿ ತಿಳಿಸಿದೆ.
ED, Bengaluru has arrested Ms. R. Leelavathy, former Managing Director of Karnataka Bhovi Development Corporation (KBDC), under the provisions of the PMLA, 2002 on 12.04.2025 for being found involved in the offense of money laundering. She was produced before the Hon’ble Special…
— ED (@dir_ed) April 16, 2025
ಭೋವಿ ನಿಗಮದ ನಿರ್ದೇಶಕರಾಗಿದ್ದಾಗ ನಾಗರಾಜಪ್ಪ ಹಾಗೂ ಲೀಲಾವತಿ ಅವರು 2018ರಿಂದ 22ರ ವರೆಗೆ ನಿಗಮದ ಖಾತೆಯಿಂದ 97 ಕೋಟಿ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದರು. ಫಲಾನುಭವಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ನಾಗರಾಜಪ್ಪ ಅವರು ಪಾಲುದಾರಿಕೆ ಇರುವ ಕಂಪೆನಿಗಳ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರೆ, ಲೀಲಾವತಿ ಅವರು ಸೋದರಿ ಮಂಜುಳ ಅವರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಬಳಿಕ ತಮ್ಮ ಖಾತೆಗೆ ಹಣವನ್ನ ವರ್ಗಾಯಿಸಿಕೊಂಡಿದ್ದರು ಎಂದು ಇ.ಡಿ.ಮೂಲಗಳು ತಿಳಿಸಿವೆ.
ಹಗರಣ ಸಂಬಂಧ ಹೆಚ್ಚಿನ ತನಿಖೆ ನಡೆಸುವ ಸಂಬಂಧ 7 ದಿನಗಳ ಕಾಲ ಇ.ಡಿ.ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಚುರುಕುಗೊಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಗರಣ : ಇಡಿಯಿಂದ ಮಾಜಿ ವ್ಯವಸ್ಥಾಪಕ ನಿರ್ದೇಶಕನ ಬಂಧನ