ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಸಹನ ಶಕ್ತಿ ಪರೀಕ್ಷೆ ಮೂಲಕ ನೇಮಕಾತಿ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಾಯಿತು.
ನಗರದ ನಜ಼ರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರೂ ಹಾಗೂ ಸೆಸ್ಕ್ ಅಧ್ಯಕ್ಷರೂ ಆದ ರಮೇಶ್ ಬಂಡಿಸಿದ್ದೇಗೌಡ ಅವರು, ಕಿರಿಯ ಪವರ್‌ಮ್ಯಾನ್ ನೇಮಕಾತಿ ಸಹನ ಶಕ್ತಿ ಪರೀಕ್ಷೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ನೇಮಕಾತಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಸಿಬ್ಬಂದಿ ಯಾವುದೇ ಆಮಿಷಗಳಿಗೆ ಒಳಗಾಗದೇ ಉತ್ತಮವಾಗಿ ಕೆಲಸ ಮಾಡಬೇಕು, ಆ ಮೂಲಕ ನಿಗಮಕ್ಕೆ ಒಳ್ಳೆಯ ಹೆಸರು ಬರುವಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರಲ್ಲದೇ, ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಗೆ ಶುಭ ಕೋರಿದರು.

ಮೇ 16ರವರೆಗೆ ಸಹನ ಶಕ್ತಿ ಪರೀಕ್ಷೆ: ನಿಗಮದಲ್ಲಿ ಖಾಲಿ ಇರುವ 309 ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ 1:5 ಅನುಪಾತದಲ್ಲಿ ಸಹನ ಶಕ್ತಿ ಪರೀಕ್ಷೆ ಮೇ 12ರಿಂದ 16ರವರೆಗೆ ನಡೆಯಲಿದೆ. ಪ್ರಥಮ ಹಂತದ ಸಹನ ಶಕ್ತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಕಂಬ ಹತ್ತುವುದು, ಓಟ ಓಡುವುದು ಒಳಗೊಂಡಂತೆ ಐದು ಬಗೆಯ ಪರೀಕ್ಷೆ ನಡೆಸಲಾಗುವುದು. ಸಹನ ಶಕ್ತಿ ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು, ಐದು ಪರೀಕ್ಷೆಗಳಲ್ಲಿ ಮೂರರಲ್ಲಿ ಅರ್ಹತೆಗಳಿಸಿಬೇಕಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯ ಅಂಕಗಳ ಮೆರಿಟ್ ಆಧಾರದಲ್ಲಿ 1:1 ಅನುಪಾತದ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ಡಿ.ಜೆ. ದಿವಾಕರ್, ಅಧೀಕ್ಷಕ ಇಂಜಿನಿಯರ್ ಸುನೀಲ್, ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಡಾ. ಬಿ.ಆರ್. ರೂಪ, ಜಾಗೃತ ದಳದ ಎಸ್ಪಿ ಸವಿತಾ ಹೂಗಾರ್ ಸೇರಿದಂತೆ ಇನ್ನಿತರರು ಇದ್ದರು.
ದಾಖಲಾತಿ ತರುವುದು ಕಡ್ಡಾಯ: ಸಹನ ಶಕ್ತಿ ಪರೀಕ್ಷೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ತಿಳಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಮೀಸಲಾತಿಗೆ ಅನುಗುಣವಾಗಿ ಎಲ್ಲ ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕಿದೆ.

ಇದನ್ನು ಓದಿ: ಮಂಗಳೂರಿನಲ್ಲಿದೆ ವಿದೇಶಿ ತಳಿಯ ಹಣ್ಣುಗಳ ತೋಟ: ಇಲ್ಲಿಂದಲೇ ನರ್ಸರಿಗೆ ಗುಣಮಟ್ಟದ ಸಸ್ಯಗಳು ರವಾನೆ
ಸರ್ಕಾರಿ ಶಾಲೆಗಳಲ್ಲಿ ನರ್ಸರಿಯಿಂದಲೇ AI ಶಿಕ್ಷಣಕ್ಕೆ ಒತ್ತು: ದಿಟ್ಟ ನಿರ್ಧಾರ ತೆಗೆದುಕೊಂಡ ಸರ್ಕಾರ