ಬೆಂಗಳೂರು: ಅಂಗನವಾಡಿ ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ. ಹಾಗೆಯೇ ಕೊಪ್ಪಳದ ಸಿಡಿಪಿಒ ಅವರನ್ನು ಅಮಾನತು ಮಾಡುವ ಕುರಿತು ಯೋಚಿಸುತ್ತಿದ್ದು, ಡಿಡಿಗೆ ನೋಟಿಸ್ ನೀಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.
ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಜ್ ಬೇಗಂ ಅವರ ಮೊಟ್ಟೆ ತೆಗೆದುಕೊಳ್ಳುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದ್ದಾರೆ. ಇಡೀ ಪ್ರಕರಣದ ವರದಿ ನೀಡುವಂತೆ ಆದೇಶಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಊಟಕ್ಕೆ ಕುಳಿತಿದ್ದ ಮಕ್ಕಳ ತಟ್ಟೆಗೆ ಅಂಗನವಾಡಿ ಸಹಾಯಕಿ ಮೊದಲು ಮೊಟ್ಟೆಗಳನ್ನು ಹಾಕಿದ್ದಾರೆ. ಬಳಿಕ ಕೆಲಹೊತ್ತಲ್ಲೇ ಇನ್ನೇನು ಮಕ್ಕಳು ತಿನ್ನಬೇಕೆನ್ನುವಷ್ಟರಲ್ಲಿ ಮೊಟ್ಟೆಗಳನ್ನು ತಟ್ಟೆಯಿಂದಲೇ ತೆಗೆದುಕೊಂಡಿದ್ದಾರೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 'ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಕೆಳ ಹಂತದಿಂದ ಇಲಾಖೆಯಲ್ಲಿ ಸುಧಾರಣೆ ತರಬೇಕು ಅಂತ ಕಷ್ಟಪಡುತ್ತಿದ್ದೇನೆ. ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಅಂಗನವಾಡಿಯ ಮೂಲ ಉದ್ದೇಶ. ಬಡಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ.
'ಒಂದು ಮಗುವಿಗೆ ಊಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 8 ರೂ. ಭರಿಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ಯೂನಿಟ್ ದರ ಏರಿಕೆ ಮಾಡಿಲ್ಲ. ಬೇಳೆಗಳ ಬೆಲೆ ಬಹಳಷ್ಟು ಹೆಚ್ಚಳವಾಗಿದೆ. ಮೊಟ್ಟೆ, ಗುಣಮಟ್ಟದ ಕೆನೆ ಭರಿತ ಹಾಲು ಕೊಡುವುದು ಸಿಎಂ ಸಿದ್ದರಾಮಯ್ಯ ಸರ್ಕಾರದ ಯೋಜನೆಯಾಗಿದೆ. ಮಕ್ಕಳಿಗೆ ಊಟ ಬಡಿಸುವ ವೇಳೆ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು' ಎಂದು ಸಚಿವರು ತಿಳಿಸಿದರು.
ವಿಡಿಯೋ ಚಿತ್ರೀಕರಣ ಕಡ್ಡಾಯ: 'ಚಿತ್ರೀಕರಣದ ಬಳಿಕ ತಾಲೂಕುಮಟ್ಟದಿಂದ ಜಿಲ್ಲಾಮಟ್ಟಕ್ಕೆ ವಾಟ್ಸ್ ಆ್ಯಪ್ ಗ್ರೂಪ್ಗಳ ಮೂಲಕ ಅಪ್ಲೋಡ್ ಆಗಬೇಕು. ಇದೇ ರೀತಿಯ ಪ್ರಕರಣ ಕಳೆದ ಬಾರಿಯೂ ಕೇಳಿಬಂದಿತ್ತು. ಆನಂತರ ವಿಡಿಯೋ ಚಿತ್ರೀಕರಣ ಕಡ್ಡಾಯ ಮಾಡಿದ್ದೇವೆ. ಇದೀಗ ವಿಡಿಯೋ ಕಡ್ಡಾಯದಿಂದಲೇ ಈ ಪ್ರಕರಣ ಬೆಳಕಿಗೆ ಬಂದಿದೆ' ಎಂದರು.
'ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ಸ್ಥಿತಿ ಮಕ್ಕಳಿಗಾಗಿದೆ. ಕರ್ನಾಟಕ ರಾಜ್ಯದಲ್ಲಿ 69 ಸಾವಿರ ಅಂಗನವಾಡಿಗಳನ್ನು ನಡೆಸುತ್ತಿದ್ದೇವೆ. ಎಲ್ಲೋ ಒಂದು ಕಡೆ ಹೀಗಾದರೆ ಸಂಪೂರ್ಣ ಇಲಾಖೆಗೆ ಕಷ್ಟ ಆಗುತ್ತದೆ. ನಿನ್ನೆ ರಾತ್ರಿಯೇ ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ' ಎಂದು ಸಚಿವರು ಹೇಳಿದರು.
'ಆ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಈಗಾಗಲೇ ಕೆಲಸದಿಂದ ಅಮಾನತು ಮಾಡಲಾಗಿದೆ. ಇಂತಹ ತಪ್ಪನ್ನು ಮಾಡಿದರೆ ಕಡ್ಡಾಯವಾಗಿ ಕೆಲಸದಿಂದ ನಿವೃತ್ತಿಗೊಳಿಸುತ್ತೇನೆ. ಈ ಪ್ರಕರಣ ಬೇರೆಯವರಿಗೆ ಪಾಠ ಆಗಬೇಕು. ಸಿಡಿಪಿಒ ಅಮಾನತು ಮಾಡುವ ಕುರಿತು ಯೋಚಿಸುತ್ತಿದ್ದು, ಡಿಡಿಗೆ ನೋಟಿಸ್ ನೀಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ' ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.