ಬೆಂಗಳೂರು: "ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಮಕ್ಕಳ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ" ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಅದೇ ಹಣದಲ್ಲಿ ಇವತ್ತು ಸಂಸದರು ಮತ್ತು ವಿಧಾನಸಭಾ ಸದಸ್ಯರಾಗಿರಬಹುದು. ಆದರೆ, ಈ ನಾಡಿನ ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ" ಎಂದು ತಿಳಿಸಿದರು.
"ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮ್ತತು ಕಂಪ್ಲಿ ಶಾಸಕ ಗಣೇಶ್ ಇವರೆಲ್ಲರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ನಡೆದಿದೆ. ಈ ನಾಯಕರು ಬಹಳಷ್ಟು ಸಾಚಾ ಎಂಬಂತೆ ಮತನಾಡುತ್ತಿದ್ದರು. ಇವರೆಲ್ಲ ಮಾಡುವುದೆಲ್ಲ ಅನಾಚಾರ; ಮನೆಮುಂದೆ ಬೃಂದಾವನ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು" ಎಂದು ದೂರಿದರು.
"ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಬಗ್ಗೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದ್ದೆವು. ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡಿದ್ದೆವು. ನಮ್ಮ ಒತ್ತಾಯದ ಮೇರೆಗೆ ಆ ಸ್ಥಾನಕ್ಕೆ ಸಚಿವರು ರಾಜೀನಾಮೆ ನೀಡಿ ಜೈಲು ಪಾಲಾದರು" ಎಂದು ಹೇಳಿದರು.
"ತನಿಖೆ ನಡೆಯುವ ಸಂದರ್ಭದಲ್ಲಿ ನಿಗಮದ ಒಬ್ಬ ಅಧಿಕಾರಿ ಚಂದ್ರಶೇಖರ್ ಅವರು ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡರು. ಆ ಡೆತ್ನೋಟ್ನಲ್ಲಿ ಬಹಳ ಸ್ಪಷ್ಟವಾಗಿ ಮಂತ್ರಿಯ ಕೈವಾಡವಿದೆ ಮತ್ತು ಶಾಮೀಲಾಗಿದ್ದಾರೆ ಎಂದಿದ್ದರು. ಯಾವ ಯಾವ ಅಧಿಕಾರಿಗಳು ಶಾಮೀಲಾಗಿದ್ದರು ಎಂದು ತಿಳಿಸಿದ್ದರು. ಬಿಜೆಪಿ, ಇವತ್ತಿನ ತನಕ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದೆ" ಎಂದರು.
ಕಳಚಿ ಬೀಳಲಿದೆ ನಾಯಕರ ಮುಖವಾಡ: "ಇವತ್ತಿನ ಇಡಿ ದಾಳಿಯಿಂದ ಹಲವಾರು ನಾಯಕರ ಮುಖವಾಡ ಕಳಚಿ ಬೀಳಬೇಕಾಗಿದೆ. ಈ ಹಗರಣದ ಹಿಂದೆ ಯಾವ ಮಹಾನಾಯಕ ಇದ್ದಾರೆ ಎಂದು ತಿಳಿಯಬೇಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಮಕ್ಕಳ ವಿದ್ಯಾರ್ಥಿಗಳ ಪ್ರೋತ್ಸಾಹಧನ, ಸ್ಕಾಲರ್ಶಿಪ್ ಹಣ, ಗಂಗಾ ಕಲ್ಯಾಣ ಯೋಜನೆಯ ಹಣ, ಬಡವರಿಗೆ ನೀಡಬೇಕಾದ ಯೋಜನೆಯ ಹಣವನ್ನು ಇವರು ನುಂಗಿ ನೀರು ಕುಡಿದಿದ್ದಾರೆ" ಎಂದು ಆರೋಪಿಸಿದರು.
"ನಿಗಮದ 187 ಕೋಟಿ ಹಣವನ್ನು ಬಾರ್ ಶಾಪ್‍ಗಳಿಗೆ, ಸೆಕ್ಯೂರಿಟಿ ಏಜೆನ್ಸಿಗಳಿಗೆ, ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದರು. ವರ್ಗಾವಣೆ ಮಾಡಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದರೂ ಹಣ ಎಲ್ಲಿ ಹೋಗಿದೆ ಎಂದು ಸರ್ಕಾರಕ್ಕೂ ಉತ್ತರ ಕೊಡುವುದಕ್ಕೆ ಆಗುತ್ತಿಲ್ಲ. ಈ ಸರ್ಕಾರವು ಪರಿಶಿಷ್ಟ ಜಾತಿ-ಪಂಗಡಗಳ ಜನರ ಪರವಾಗಿ ನಾವು ಇದ್ದೇವೆ ಎಂದು ಹೇಳಿಕೆ ನೀಡುತ್ತದೆ. ಆದರೆ, ಆ ಮಕ್ಕಳನ್ನು ಉಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿಲ್ಲ" ಎಂದು ದೂರಿದರು.
"ಸರ್ಕಾರಗಳು ಬರಬಹುದು, ಹೋಗಬಹುದು. ಆದರೆ, ಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಯಾವ ರೀತಿ ಇರಬೇಕು ಎಂದು ಅವರಿಗೆ ಜ್ಞಾನವಿರಬೇಕು. ಸರ್ಕಾರದ ಹಣವನ್ನು ಇವರು ನುಂಗಿ ಹಾಕುತ್ತಾರೆ ಎಂದರೆ ಇವರು ರಾಜಕಾರಣಿ ಎಂದು ಕರೆಸಿಕೊಳ್ಳಲು ಯೋಗ್ಯರೇ?" ಎಂದು ಪ್ರಶ್ನಿಸಿದರು.
"ಮುಖ್ಯಮಂತ್ರಿಗಳು ಮತ್ತೊಮ್ಮೆ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ನೀಡಿ; ನಮ್ಮ ಆಕ್ಷೇಪವಿಲ್ಲ. ಆದರೆ, ನೂರಾರು ಕೋಟಿ ಭ್ರಷ್ಟಾಚಾರ ಮಾಡಿರುವ ಹಣದ ವಸೂಲಿಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.
ಈ ವೇಳೆ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಬಿಜೆಪಿ ಮುಖಂಡ ಎಂ.ಡಿ. ಲಕ್ಷ್ಮೀನಾರಾಯಣ್, ವೆಂಕಟೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ಬಳ್ಳಾರಿ ಸಂಸದ ಇ. ತುಕಾರಾಂ, ಶಾಸಕರು ಸೇರಿದಂತೆ ಹಲವರ ನಿವಾಸದ ಮೇಲೆ ಇ.ಡಿ ದಾಳಿ