ಬೆಂಗಳೂರು/ಕೊಪ್ಪಳ: "ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ಎಸ್. ತಂಗಡಗಿ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಅವರು ಮಾತನಾಡಿದರು.

"ಪ್ರಸ್ತುತ ಜಲಾಶಯದಲ್ಲಿ ನೀರಿನ ಸಾಮರ್ಥ್ಯ 18 ಟಿಎಂಸಿ, ಇದರಲ್ಲಿ ಡೆಡ್ ಸ್ಟೋರೇಜ್ 2 ಟಿಎಂಸಿ, ಅವಿಯಾಗುವಿಕೆ 1.2 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 11 ಟಿಎಂಸಿ, ಆಂಧ್ರಪ್ರದೇಶದ ಪಾಲು 4 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಒಳಗೊಂಡಂತೆ ನೀರಾವರಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ" ಎಂದು ತಿಳಿಸಿದರು.
"ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಏ.1ರಿಂದ ಏ.10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು. ಎಡದಂಡೆ ವಿಜಯನಗರ ಕಾಲುವೆಗೆ ಏ.11ರಿಂದ ಮೇ 10ರವರೆಗೆ 150 ಕ್ಯೂಸೆಕ್ನಂತೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಯಾವುದು ಮೊದಲೋ, ಅದು ಅನ್ವಯಿಸುತ್ತದೆ" ಎಂದು ಹೇಳಿದರು.

"ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಲಭ್ಯವಾಗುವ ನೀರಿನಲ್ಲಿ ಏ.1ರಿಂದ ಏ.10ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ಬೆಳೆಗಳ ಸಂರಕ್ಷಣೆಗಾಗಿ 450 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು. ಇನ್ನು ರಾಯ ಬಸವಣ್ಣ ಕಾಲುವೆಗೆ ಏ.1ರಿಂದ ಮೇ 31ರವರೆಗೆ ಲಭ್ಯವಾಗುವ ನೀರಿನಲ್ಲಿ 200 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು" ಎಂದು ವಿವರಿಸಿದರು.

"ಕುಡಿಯುವ ನೀರು ಮತ್ತು ನಿಂತ ಬೆಳೆಗಳಿಗೆ ಆದ್ಯತೆ ಕೊಟ್ಟು ನೀರು ಒದಗಿಸಲು ತೀರ್ಮಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿಷೇಧಾಜ್ಞೆ ಮೂಲಕ ನೀರು ಹರಿಸಲಾಗುವುದು" ಎಂದು ತಿಳಿಸಿದರು.
ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು ಕಲಂ 144ನ್ನು ಅಳವಡಿಸಿ ಸೂಕ್ತ ಪೊಲೀಸ್ ಬಂದೋಬಸ್ತನ್ನು ಪಡೆದು ಕುಡಿಯುವ ನೀರಿನ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಸಚಿವರು ಸೂಚನೆ ನೀಡಿದರು.
ಇದನ್ನೂ ಓದಿ: ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ ಭೇಟಿ: ಡಿಸಿಎಂ ಡಿ.ಕೆ.ಶಿವಕುಮಾರ್