ಚಿಕ್ಕೋಡಿ (ಬೆಳಗಾವಿ) : ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಬಾಣಂತಿ ಹೊಟ್ಟೆಯ ಕೆಳಭಾಗದಲ್ಲಿ ಬಟ್ಟೆ ಉಂಡೆಗಳನ್ನು ಬಿಟ್ಟು ಹೊಲಿಗೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಟ್ಟೆ ಹಾಗೂ ಹತ್ತಿ ಉಂಡೆಯನ್ನು ಹೊಟ್ಟೆಯಲ್ಲಿ ಬಿಟ್ಟು ಸ್ಟಿಚ್ ಹಾಕಿದ್ದಾರೆ ಎಂದು ಬಾಣಂತಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಶೃತಿ ರಾಜು ಬಡಿಗೇರ ಹೆರಿಗೆಗೆಂದು ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಫೆ.7ರಂದು ದಾಖಲಾಗಿದ್ದರು. ನಾರ್ಮಲ್ ಹೆರಿಗೆ ಬಳಿಕ ರಕ್ತಸ್ರಾವ ತಡೆಗಟ್ಟಲು ಚಿಕಿತ್ಸೆ ನೀಡಿದ್ದ ಸಂದರ್ಭದಲ್ಲಿ ಬಳಸಿದ್ದ ಹತ್ತಿ ಉಂಡೆಯನ್ನು ಎರಡು ದಿನದ ಬಳಿಕ ಅದನ್ನು ತೆಗೆಯುವುದನ್ನು ಮರೆತ ಸಿಬ್ಬಂದಿ, ಹಾಗೆಯೇ ಮನೆಗೆ ಕಳಿಸಿಕೊಟ್ಟಿದ್ದಾರೆ ಎಂದು ಬಾಣಂತಿ ಶೃತಿ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯಿಂದ ಬಂದ ಕೆಲ ದಿನಗಳ ಬಳಿಕ ನನ್ನ ಹೊಟ್ಟೆಯಲ್ಲಿ ತೀವ್ರ ನೋವು ಕಾಡತೊಡಗಿತು. ಹುಕ್ಕೇರಿಯ ತಾಲೂಕು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ ಬಳಿಕ ಹೊಟ್ಟೆಯೊಳಗಿದ್ದ ಬಟ್ಟೆ ಹಾಗೂ ಹತ್ತಿ ಉಂಡೆಯನ್ನು ತೆಗೆಯಲಾಯಿತು ಎಂದು ಬಾಣಂತಿ ಶೃತಿ ಪ್ರತಿಕ್ರಿಯೆ ನೀಡಿದ್ದಾರೆ.
ವೈದ್ಯಾಧಿಕಾರಿಯಿಂದ ಸ್ಪಷ್ಟನೆ; ಈ ಬಗ್ಗೆ ಚಿಕ್ಕೋಡಿ ವೈದ್ಯಾಧಿಕಾರಿ ಸುಕುಮಾರ್ ಭಾಗಿ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ಆಗಿರುವುದು ನಿಜ. ಫೆ. 7ರಂದು ಆ ಮಹಿಳೆಗೆ ನಮ್ಮ ಆಸ್ಪತ್ರೆಯಲ್ಲಿ ನಾರ್ಮಲ್ ಹೆರಿಗೆಯಾಗಿದೆ. ಹೆರಿಗೆ ಹಾಗೂ ವೈದ್ಯಕೀಯ ಚಿಕಿತ್ಸೆ ನಂತರ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆಂದು ಮಹಿಳೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಈಗಾಗಲೇ ಹುಕ್ಕೇರಿ THO ಅವರ ಜೊತೆ ಸಮಾಲೋಚನೆ ಮಾಡಲಾಗಿದೆ. ನಮ್ಮ ವೈದ್ಯರಿಗೂ ಕೂಡ ಏನಾಗಿದೆ ಎಂಬುದರ ಕುರಿತು ವರದಿ ಕೊಡುವಂತೆ ಕೇಳಿದ್ದೇನೆ. ನಮ್ಮ ಹಿರಿಯ ಅಧಿಕಾರಿಗಳು ಸಹ ನನ್ನನ್ನು ಸಂಪರ್ಕಿಸಿದ್ದಾರೆ. ಇಲ್ಲಿ ವೈದ್ಯರಿಂದ ಲೋಪದೋಷ ಕಂಡು ಬಂದರೆ ನಾನು ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸುತ್ತೇನೆ. ಮುಂದೆ ಈ ರೀತಿ ಆಗದಂತೆಯೂ ಎಚ್ಚರಿಕೆಯನ್ನು ವಹಿಸಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಸಿಜೇರಿಯನ್ ಹೆರಿಗೆಯಾಗಿದ್ದ ಮತ್ತೋರ್ವ ಬಾಣಂತಿ ಸಾವು - MATERNAL DEATH