ಬೆಂಗಳೂರು: ಜಾತಿ ಗಣತಿ ವರದಿ ಸಂಬಂಧ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಚರ್ಚೆ ಅಪೂರ್ಣವಾಗಿರುವ ಕಾರಣ ಮೇ ಮೊದಲ ವಾರದಲ್ಲಿ ಸಚಿವ ಸಂಪುಟ ಸಭೆ ಕರೆದು ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024 ರಲ್ಲಿ ಮಾಡಿರುವ ಶಿಫಾರಸ್ಸುಗಳ ಬಗ್ಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಪ್ರಬಲ ಸಮುದಾಯದ ಸಚಿವರುಗಳ ಅಪಸ್ವರಗಳ ಮಧ್ಯೆ ಚರ್ಚೆ ಅಪೂರ್ಣವಾಗಿದೆ. ಹೀಗಾಗಿ ಈ ಸಂಬಂಧ ಮೇ ಮೊದಲ ವಾರದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ. ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿ ಸಮೀಕ್ಷೆ ವರದಿ ಸಂಬಂಧ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಸಂಪುಟ ಸಚಿವರು ಸಮೀಕ್ಷೆ ಸಂಬಂಧ ಹೆಚ್ಚಿನ ಮಾಹಿತಿ ಕೋರಿದ್ದರಿಂದ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಜಾತಿ ಸಮೀಕ್ಷೆ ವರದಿ ಸಂಬಂಧ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ, ತಾಂತ್ರಿಕ ವಿವರಗಳು ಚರ್ಚೆಗೆ ಅವಶ್ಯ ಎಂದು ಅನಿಸಿದ್ದರಿಂದ ಹಿನ್ನೆಲೆ ಅವುಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚರ್ಚೆ ಅಪೂರ್ಣವಾಗಿದೆ. ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆಯಾಗಿದೆ. ಜನಸಂಖ್ಯೆ, ಹಿಂದುಳಿಯುವಿಕೆ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಅನುಸರಿಸಲಾದ ಮಾನದಂಡಗಳ ಎಲ್ಲಾ ವಿವರಗಳನ್ನು ಚರ್ಚೆ ಮಾಡಲಾಗಿದೆ ಎಂದರು.
ಮುಂದಿನ ಸಂಪುಟ ಸಭೆ ಮೇ ಮೊದಲ ವಾರದಲ್ಲಿ ನಡೆಯಲಿದ್ದು, ಅಂದು ಚರ್ಚೆ ಮಾಡಲು ತೀರ್ಮಾನಿಸಲಾಗಿದೆ. ಮಂತ್ರಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರಿಯ ಸಚಿವರುಗಳು ವರದಿ ಸಂಬಂಧ ಕೆಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ವಿವರ ಕೇಳಿದ್ದಾರೆ. ರಿಪೋರ್ಟ್ ಕೆಲ ದಿನಗಳ ಹಿಂದೆ ಕೈಗೆ ಸಿಕ್ಕಿದೆ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಚಾಮರಾಜನಗರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬೇರೆ ಅಜೆಂಡಾಗಳಿರುವುದರಿಂದ ಅಲ್ಲಿ ಈ ಸಂಬಂಧ ಚರ್ಚೆ ನಡೆಸಲಾಗುವುದಿಲ್ಲ. ಮೇ 2ಕ್ಕೆ ನಡೆಯಬಹುದಾದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ವಿಶೇಷ ಸಚಿವ ಸಂಪುಟ ಮುಂದೆ ಇದ್ದ ಅಜೆಂಡಾ ಏನು? ವಿವಿಧ ಪ್ರವರ್ಗಗಳಡಿ ಇದ್ದ ಜಾತಿಗಳನ್ನು ಸಾಮಾಜಿಕ, ಶೈಕ್ಷಣಿಕ, ಜೀವನೋಪಾಯ / ಔದ್ಯೋಗಿಕ ಮಾನದಂಡಗಳ ಆಧಾರದ ಮೇರೆಗೆ ಪಡೆದ ಅಂಕಗಳಿಗೆ ಅನುಗುಣವಾಗಿ ಆಂತರಿಕ ಬದಲಾವಣೆಯೊಂದಿಗೆ ಶೇ. 32ರ ಮೀಸಲಾತಿ ಪ್ರಮಾಣವನ್ನು ಪ್ರವರ್ಗವಾರು ವರ್ಗೀಕರಿಸುವ ಪ್ರಸ್ತಾಪದ ಅಂಗೀಕಾರಕ್ಕಾಗಿ ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆ ಮುಂದೆ ವಿಷಯ ತರಲಾಗಿತ್ತು.
ಜೊತೆಗೆ ಆಯೋಗದ ಶಿಫಾರಸ್ಸಿನಂತೆ ಹಾಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪ್ರವರ್ಗವಾರು ಮೀಸಲಾತಿ ಪ್ರಮಾಣವನ್ನು ಶೇ. 32 ರಿಂದ ಶೇ.51 ಕ್ಕೆ ಹೆಚ್ಚಿಸಲು ಅಂಗೀಕಾರ ಹಾಗೂ ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವ ಶಿಫಾರಸಿನ ಕಂಡಿಕೆಯನ್ನು ವಿಶೇಷ ಸಚಿವ ಸಂಪುಟದ ಮುಂದೆ ತರಲಾಗಿತ್ತು.
ಪ್ರಬಲ ಸಮುದಾಯದ ಸಚಿವರ ಅಪಸ್ವರ: ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಿರೀಕ್ಷೆಯಂತೆ ಪ್ರಬಲ ಸಮುದಾಯ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಸಮೀಕ್ಷೆ ವರದಿಗೆ ತಮ್ಮ ಅಸಮಾಧಾನ, ಅಪಸ್ವರ ಎತ್ತಿದ್ದಾರೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮೀಕ್ಷೆ ಮಾನದಂಡ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ವಿಚಾರವಾಗಿಯೂ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗಿತ್ತು. ಹೀಗಾಗಿ ಬಹಳ ಜಾಗರೂಕತೆಯಿಂದ ನಡೆದುಕೊಳ್ಳಬೇಕು. ಅದೇ ರೀತಿ ಈ ಜಾತಿ ಸಮೀಕ್ಷೆಯಿಂದ ಪಕ್ಷಕ್ಕೆ ಸಮಸ್ಯೆ ಆಗಲಿದೆ ಎಂದರು. ಈ ವೇಳೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಪ್ರಸ್ತಾವನೆಗೆ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಜಾತಿ ಸಮೀಕ್ಷೆ ಹಾಗೂ ಮೀಸಲಾತಿ ಏರಿಕೆ ಶಿಫಾರಸು ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ. ಹೀಗೆ ರಾತ್ರೋರಾತ್ರಿ ಸಮೀಕ್ಷೆ ವರದಿ ಮಾಡಿ, 7% ಮೀಸಲಾತಿ ನೀಡಿದರೆ ಹೇಗೆ ಎಂದು ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಹಿಂದ ಸಚಿವರು ಆ ರೀತಿ ಯಾವುದೂ ಆಗಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ ಎಂದು ವರದಿಯಾಗಿದೆ.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸಮೀಕ್ಷೆ ವರದಿ ಬಗ್ಗೆ ಸಾಕಷ್ಟು ಗೊಂದಲಗಳು ಇವೆ. ಈ ಬಗ್ಗೆ ಕ್ಷೇತ್ರದ ಜನರು ಹಾಗೂ ಸಮುದಾಯದವರಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ವರದಿ ಶಿಫಾರಸುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕು. ಗೊಂದಲ ನಿವಾರಣೆಯಾಗಬೇಕು ಎಂದು ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸಿಎಂ ಸಿದ್ದರಾಮಯ್ಯ, ಜಾತಿ ಗಣತಿ ವರದಿಯನ್ನು ಈಗಲೇ ಜಾರಿ ಮಾಡುವುದಿಲ್ಲ. ಸಮೀಕ್ಷೆ ಅಂಶಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರೋಣ. ತರಾತುರಿಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಇತ್ತ ಅಹಿಂದ ಸಚಿವರುಗಳು ಸಮೀಕ್ಷೆ ವರದಿ ಬಗ್ಗೆ ಚರ್ಚೆ ನಡೆಸಿ, ಗೊಂದಲ ನಿವಾರಣೆಯಾಗಲಿ. ಈಗಲೇ ವರದಿ ಜಾರಿ ಮಾಡುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜಾತಿ ಗಣತಿ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳದ ನಿರ್ಣಯ: ಸಚಿವರು ಹೇಳಿದ್ದೇನು?