ಹುಬ್ಬಳ್ಳಿ: ಧಾರವಾಡದ ಐಐಟಿಗೆ ಕೇಂದ್ರ ಸರ್ಕಾರ ₹2000 ಕೋಟಿ ಹೆಚ್ಚುವರಿ ಹಣ ನೀಡುತ್ತಿದೆ. ದೇಶದ ಎಲ್ಲಾ ಐಐಟಿಗಳಂತೆ ಇದೂ ಉನ್ನತ ಅಭಿವೃದ್ಧಿ ಕಾಣುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಭಾನುವಾರ, ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ 'ಭಾರತದ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ' (Indian Education and the True Role of Teacher) ರಾಷ್ಟ್ರ ಮಟ್ಟದ ಸಂವಾದದ ಸಮಾರೋಪ ಸಮಾರಂಭ ಉದ್ದೇಶಿಸಿ ಕೇಂದ್ರ ಸಚಿವ ಜೋಶಿ ಮಾತನಾಡಿದರು.
ಶಿಕ್ಷಣದಲ್ಲಿ ಇಂದು ಭಾರತ ಮುನ್ನಡೆ ಸಾಧಿಸಿದ್ದು, 23 ಐಐಟಿಗಳನ್ನು ಹೊಂದಿದೆ. ದೇಶದ ಎಲ್ಲಾ ಐಐಟಿಗಳಂತೆ ಧಾರವಾಡ ಐಐಟಿಯನ್ನು ಸಹ ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.
ಇಂದಿನ ವಿದ್ಯಾರ್ಥಿ-ಯುವ ಸಮುದಾಯಕ್ಕೆ 21ನೇ ಶತಮಾನದ ಅಗತ್ಯಗಳಿಗೆ ಪೂರಕವಾದಂತಹ ಶಿಕ್ಷಣ ಒದಗಿಸುವ ಗುರಿ ಹೊಂದಿದೆ ಎಂದ ಸಚಿವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಒಂದು ಐತಿಹಾಸಿಕ ಶಿಕ್ಷಣ ಸುಧಾರಣಾ ಯೋಜನೆಯಾಗಿದೆ ಎಂದು ಬಣ್ಣಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿದೆ. ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಸಮಗ್ರ ಮತ್ತು ಬಹು ಶಿಸ್ತೀಯ ಶಿಕ್ಷಣವನ್ನು ಒದಗಿಸುತ್ತಿದೆ. ಯುವ ಸಮುದಾಯವನ್ನು ಔದ್ಯೋಗಿಕವಾಗಿ ಮುನ್ನಡೆಯತ್ತ ಕೊಂಡೊಯ್ಯುತ್ತಿದೆ ಎಂದು ತಿಳಿಸಿದರು.
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ʼಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರʼ ಎಂಬ ಕಳಂಕ ತೊಡೆದು ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ ಎಂದು ಪ್ರತಿಪಾದಿಸಿದರು.
ʼಅಚ್ಚೇ ದಿನ್ ಕಹಾ ಹೈʼ ಎನ್ನುವವರಿಗೆ ಭಾರತ ಸೂಕ್ತ ಉತ್ತರವನ್ನು ಕೃತಿಯಲ್ಲಿ ಕೊಟ್ಟಿದೆ. ಅವರು ಕಣ್ತೆರೆದು ನೋಡಬೇಕಷ್ಟೇ ಎಂದು ಮಾರ್ಮಿಕವಾಗಿ ಹೇಳಿದ ಸಚಿವರು, ಈಗಿನ ಶಿಕ್ಷಣ ಕ್ಷೇತ್ರದಲ್ಲಿ ನಾವೀನ್ಯತೆಗಳ ಅಳವಡಿಕೆ ಕಾಣುತ್ತಿದೆ. 21ನೇ ಶತಮಾನದ ಶಿಕ್ಷಣದಲ್ಲಿ ಭವಿಷ್ಯಕ್ಕೆ ಪೂರಕವಾದಂತಹ ಬದಲಾವಣೆಗಳು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: IIT ಮದ್ರಾಸ್ಗೆ ಪ್ರವೇಶ ಪಡೆದ ಮೊದಲ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿ: ಕಷ್ಟದ ನಡುವೆ ಅರಳಿದ ಪ್ರತಿಭೆ