ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ರಾಜ್ಯದ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಭಕ್ತರಿಗೆ ಬೆಳಗಿನ ಉಪಹಾರ ನೀಡುವ ಬಗ್ಗೆ ನೂತನ ವ್ಯವಸ್ಥಾಪನ ಸಮಿತಿ ಯೋಜನೆ ರೂಪಿಸಿದೆ.
ಈ ಬಗ್ಗೆ ನೂತನ ಆಡಳಿತ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಬೆಳಗಿನ ಸಮಯದಲ್ಲಿ ಉಪಹಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಉಪಹಾರಗಳ ಪಟ್ಟಿ ಮತ್ತು ಉಪಹಾರ ನೀಡುವ ಸಮಯದ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರವನ್ನು ವ್ಯವಸ್ಥಾಪನ ಸಮಿತಿ ಕೈಗೊಳ್ಳಲಿದೆ. ಆ ಬಳಿಕ ಈ ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಕುಕ್ಕೆ ಕ್ಷೇತ್ರದಲ್ಲಿ ಈಗಾಗಲೇ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಪ್ರಸಾದ ವಿತರಿಸಲಾಗುತ್ತಿದೆ. ದಿನಂಪ್ರತಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಬೆಳಗಿನ ಉಪಹಾರ ಯೋಜನೆಯಿಂದ ಕುಕ್ಕೆಗೆ ರಾತ್ರಿಯೇ ಆಗಮಿಸಿ ಪೂಜೆಯಲ್ಲಿ ಭಾಗವಹಿಸುವ ಭಕ್ತರಿಗೆ ಇನ್ನಷ್ಟು ಪ್ರಯೋಜನವಾಗಲಿದೆ.
ಆಶ್ಲೇಷ ಸೇವೆಗೆ ಹೊಸ ಕಟ್ಟಡ: ಕ್ಷೇತ್ರದಲ್ಲಿ ಆಶ್ಲೇಷ ಸೇವೆ ನಡೆಸಲು ಹೊಸ ಕಟ್ಟಡ ನಿರ್ಮಿಸಲು ಈ ಹಿಂದೆ ದಾನಿಯೊಬ್ಬರು ಮುಂದೆ ಬಂದಿದ್ದರು. ಆದರೆ ಕಟ್ಟಡ ಕಾಮಗಾರಿ ಆರಂಭಗೊಂಡಿರಲಿಲ್ಲ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆಶ್ಲೇಷ ಸೇವೆ ಮತ್ತು ಇತರ ಪೂಜೆಗಳ ಬಗ್ಗೆ ಮತ್ತು ಹೊಸ ಕಟ್ಟಡ ಕಾಮಗಾರಿಗೆ ಆದಷ್ಟು ಬೇಗ ಚಾಲನೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸುಳ್ಯದ ದಾನಿಯೋರ್ವರ ಮೂಲಕ ದೇಗುಲಕ್ಕೆ ಬೆಳ್ಳಿರಥ ಸಮರ್ಪಣೆ ಬಗ್ಗೆಯೂ ಈ ಹಿಂದೆ ನಡೆದ ಚರ್ಚೆಯ ಬಗ್ಗೆ ಪ್ರಸ್ತಾಪವಾಯಿತು.
ಅದೇ ರೀತಿ, ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಸೀಟುಗಳ ಅವಶ್ಯಕತೆ ಇದ್ದು, ಹೆಚ್ಚುವರಿ ವಿಭಾಗ ತೆರೆಯಬೇಕು ಎಂಬ ಬಗ್ಗೆಯೂ ಪ್ರಸ್ತಾಪವಾಗಿದೆ. ಈ ಬಗ್ಗೆ ಬೆಂಗಳೂರಿಗೆ ನಿಯೋಗ ತೆರಳಿ ಇಲಾಖೆಯಲ್ಲಿ ಅನುಮತಿಗಾಗಿ ಮನವಿ ಸಲ್ಲಿಸಿ ಈ ವರ್ಷದಿಂದಲೇ ಹೆಚ್ಚುವರಿ ವಿಭಾಗ ಆರಂಭಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಸುಬ್ರಹ್ಮಣ್ಯ: ಸರ್ಪಸಂಸ್ಕಾರ ಸೇವೆಯಲ್ಲಿ ಭಾಗಿಯಾದ ಬಾಲಿವುಡ್ ನಟಿ ಕತ್ರಿನಾ ಕೈಫ್; ವಿಡಿಯೋ - KATRINA KAIF