ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವಿ ರೇಣುಕಾ ಯಲ್ಲಮ್ಮದೇವಿಗೆ ಭಕ್ತರೊಬ್ಬರು ಬರೊಬ್ಬರಿ 4.5 ಲಕ್ಷ ರೂ. ಬೆಲೆ ಬಾಳುವ ಸೀರೆಯನ್ನು ಅರ್ಪಿಸಿದ್ದಾರೆ.
ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರರು 70 ವರ್ಷಗಳ ಹಿಂದೆ ಸಂಕಲ್ಪ ತೊಟ್ಟಿದ್ದರಂತೆ. ಆ ಪ್ರಕಾರ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೊಟ್ಟದ ಅಡವಿಲಿಂಗ ಮಹಾರಾಜರು 4.5 ಲಕ್ಷ ವೆಚ್ಚದಲ್ಲಿ ರೇಷ್ಮೆಯಿಂದ ತಯಾರಿಸಿದ ಚಿನ್ನದ ಝರಿಗಳನ್ನು ಹೊಂದಿರುವ ಸೀರೆಯನ್ನು ಯಲ್ಲಮ್ಮ ದೇವಿಗೆ ಗುರುವಾರ ರಾತ್ರಿ ಅರ್ಪಣೆ ಮಾಡಿದರು.
1955ರಲ್ಲಿ ಶಿವಯೋಗೀಶ್ವರರು ಯಲ್ಲಮ್ಮ ದೇವಿ ದರ್ಶನಕ್ಕೆ ಗುಡ್ಡಕ್ಕೆ ಬಂದಿದ್ದರು. ಆ ವೇಳೆ ದೇವಿಗೆ ಇಂಥ ಸೀರೆ ಕಾಣಿಕೆ ನೀಡುವುದಾಗಿ ಹರಕೆ ಹೊತ್ತಿದ್ದರು. 70 ವರ್ಷಗಳ ಬಳಿಕ ಬೆಲೆ ಬಾಳುವ ಸೀರೆಯನ್ನು ಅಡವಿಲಿಂಗ ಮಹಾರಾಜರು ದೇವಿಗೆ ನೀಡಿ ಶಿವಯೋಗೀಶ್ವರರ ಹರಕೆ ತೀರಿಸಿದರು.
ಎಲ್ಲರಿಗೂ ದೇವಿ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದರು. ಬಳಿಕ ದೇವಿಗೆ ಉಡಿ ತುಂಬಿ, ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ಮಡಿಭಜನೆ, ಧಾರ್ಮಿಕ ಸಭೆ ಸೇರಿ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳಿಂದ ಬಂದಿದ್ದ ಕಲಾವಿದರು ಭಜನೆ ಮಾಡಿ, ಭಕ್ತಿ ಮೆರೆದರು.
ಇದನ್ನೂ ಓದಿ: ದಾವಣಗೆರೆ: ಹಳೇಪೇಟೆ ವೀರಭದ್ರೇಶ್ವರ ಸ್ವಾಮಿ ಗುಗ್ಗಳ, ಅಗ್ನಿಕುಂಡ ಉತ್ಸವ