ಬೆಂಗಳೂರು: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ರಾಜ್ಯ ಸರ್ಕಾರ ಮರುನಾಮಕರಣ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಚ ನಿಖಿಲ್ ಕುಮಾರಸ್ವಾಮಿ, ಹೆಸರು ಬದಲಾವಣೆ ಮಾಡಿದ ಕೂಡಲೇ ಜಿಲ್ಲೆ ಅಭಿವೃದ್ಧಿ ಆಗುವುದಿಲ್ಲ. ರಾಜಕೀಯ ಲಾಭಯಕ್ಕೆ ಹೆಸರು ಬದಲಾವಣೆ ಮಾಡೋಕೆ ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರoಲ್ಲಿ ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಟೌನ್ ಶಿಪ್ ಮಾಡೋಕೆ ಹೊರಟಿದ್ದಾರೆ. ರೈತರು ಅದಕ್ಕೆ ವಿರೋಧ ಮಾಡಿದ್ದಾರೆ. ರೈತರ ಜೊತೆ ಸರ್ಕಾರ ಚರ್ಚೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಇ.ಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಐಟಿ-ಇಡಿ ಸ್ವತಂತ್ರ ಸಂಸ್ಥೆಗಳು. ಅವರಿಗೆ ಬರೋ ಮಾಹಿತಿ ಮೇಲೆ ದಾಳಿ ಮಾಡಿರುತ್ತಾರೆ. ತನಿಖೆಯಲ್ಲಿ ಎಲ್ಲಾ ವಿಷಯ ಗೊತ್ತಾಗಲಿದೆ ಎಂದರು.
ರಾಜಕಾರಣಿಗಾಗಿ ರಾಜಕಾಲುವೆ ಒತ್ತುವರಿ: ದೊಡ್ಡ ಮಟ್ಟದ ಕಮರ್ಷಿಯಲ್ ಪ್ರಾಪರ್ಟಿ ಪ್ರಭಾವಿ ರಾಜಕಾರಣಿಗಾಗಿ ರಾಜಕಾಲುವೆ ಒತ್ತುವರಿ ಆಗಿದೆ. ರಾಜಕೀಯ ನಾಯಕರು ರಾಜಕಾಲುವೆ ನುಂಗಿ ಹಾಕುವ ಕೆಲಸ ಮಾಡ್ತಿದ್ದಾರೆ. ಒಂದು ದಿನ ಟ್ಯಾಕ್ಸ್ ಕಟ್ಟೋದು ತಡ ಆದ್ರೆ ಜನರ ಕುತ್ತಿಗೆ ಮೇಲೆ ಕುಳಿತುಕೊಳ್ತೀರಾ. ಆದರೆ ಅದಕ್ಕೆ ಪೂರಕವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ನಿನ್ನೆ ಸಿಎಂ, ಡಿಸಿಎಂ ಪ್ರವಾಸ ಮಾಡಿದ್ರು. ಸಿಎಂ ಅವರು ರಾಜಕಾಲುವೆ ಒತ್ತುವರಿ ಆಗಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿ ಬಿಲ್ಡಿಂಗ್ ಕಟ್ಟಿದ್ದಾರೆ. ಅವರನ್ನು ತೆರವು ಮಾಡೋಕೆ ಅಗುತ್ತಾ ಸಿಎಂ ಅವರೇ.? ಬಲಿಷ್ಠರಿಂದ ಒತ್ತುವರಿ ಆಗಿದೆ. ತೆರವು ಮಾಡೋಕೆ ಸಾಧ್ಯನಾ? ಎಂದು ವಾಗ್ದಾಳಿ ನಡೆಸಿದರು.
ನಾವು ಹೋದ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು 4-5 ಬಾರಿ ಗೆದ್ದಿರೋರು. ಮಂತ್ರಿ ಆಗಿರುವವರೂ ಇದ್ದರು. ವಿಪರ್ಯಾಸ ಅಂದರೆ ಅವರ ಸ್ವಂತ ಕ್ಷೇತ್ರದಲ್ಲಿ ಅವ್ಯವಸ್ಥೆ. ನಾವು ಹೋದ ಕಡೆ ಜನ ಮಧ್ಯಮ ವರ್ಗದ ಜನರು ಕಷ್ಟಪಟ್ಟು ಜೀವನ ಮಾಡ್ತಿದ್ದಾರೆ. ರಾಜಕಾಲುವೆ, ಕೆರೆ ಕಟ್ಟೆಗಳು ಬಗ್ಗೆ ಚರ್ಚೆ ಆಗಬೇಕು. ರಾಜಕಾಲುವೆ ಒತ್ತುವರಿಯೇ ಜಾಸ್ತಿ ಆಗಿದೆ ಎಂದರು.
ಸಿಎಂ, ಡಿಸಿಎಂ ಕಾಟಾಚಾರದ ಭೇಟಿ: ಡಿಸಿಎಂ ಅವರು ಲಘುವಾಗಿ ಮಾತಾಡಿದ್ದಾರೆ. ಮಳೆ ಬಂದರೆ ಏನು ತೊಂದರೆ ಅಂತ ಕೇಳ್ತಾರೆ. ಡಿಸಿಎಂ ಅವರ ಏರಿಯ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಏರಿಯ. ಇಲ್ಲಿ ಬದುಕೋರು ಬಡವರು. ಹೊಸಪೇಟೆಯಲ್ಲಿ 2 ವರ್ಷ ಸಾಧನಾ ಸಮಾವೇಶ ಮಾಡ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ನಿನ್ನೆ ಸಿಎಂ, ಡಿಸಿಎಂ ಕಾಟಾಚಾರದ ಭೇಟಿ ಕೊಟ್ಟಿದ್ದರು ಎಂದು ಟೀಕಿಸಿದರು.
ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಿ.ಬಿ., ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು, ಜಿ.ಡಿ.ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಮನಗರ 'ಬೆಂಗಳೂರು ದಕ್ಷಿಣ ಜಿಲ್ಲೆ'ಯಾಗಿ ಮರು ನಾಮಕರಣ: ಸಂಪುಟ ಸಭೆ ತೀರ್ಮಾನ - RAMANAGARA RENAMED BENGALURU SOUTH