ದಾವಣಗೆರೆ: ಆಯಾ ಹೋಬಳಿ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ದಾಟಿದ್ದರು ಕೂಡ ಈ ಹಿಂದಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಇವೆ. ಅವುಗಳನ್ನು ಮೇಲ್ದರ್ಜೆಗೆ ಏರಿಸುವ ಗೋಜಿಗೆ ಹೋಗಿಲ್ಲ. ಅಲ್ಲದೇ, ಸಿಬ್ಬಂದಿ ವೈದ್ಯರಿಲ್ಲದೆ ಚಿಕಿತ್ಸೆ ಮರೀಚಿಕೆಯಾಗಿದೆ. ಜಿಲ್ಲೆಯ ಬಸವಪಟ್ಟಣ, ಮಾಯಕೊಂಡ, ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಕ್ರಮ ತ್ವರಿತಗತಿಯಲ್ಲಿ ಆಗಬೇಕಿದೆ ಎಂದು ಮೂರು ಹೋಬಳಿ ವ್ಯಾಪ್ತಿಯ ಜನರು ಒತ್ತಾಯಿಸಿದ್ದಾರೆ.
ಮಾಯಕೊಂಡ, ಬಸವಪಟ್ಟಣ ದೊಡ್ಡ ಹೋಬಳಿಗಳಾಗಿ ಮಾರ್ಪಟ್ಟಿವೆ. ಈ ಎರಡು ಹೋಬಳಿಗಳ ವ್ಯಾಪ್ತಿಯಲ್ಲಿ ಜನಸಂಖ್ಯೆ 10 ಸಾವಿರ ದಾಟಿದೆ. ಈ ದೊಡ್ಡ ಹೋಬಳಿ ಕೇಂದ್ರ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಬರುವ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ. ನಿತ್ಯ ಆರೋಗ್ಯ ಸೇವೆಗೆ ಎಂದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿ ನೂರಾರು ಜನ ಭೇಟಿ ನೀಡುತ್ತಾರೆ. ಆದರೆ, ಅಗತ್ಯ ಸೌಲಭ್ಯಗಳಿಲ್ಲದೇ ಜನ ಪರದಾಡುವಂತಾಗಿದೆ. ಅಲ್ಲದೆ ಬಿಳಿಚೋಡು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಬೇಕಿದೆ. ಮಾಯಕೊಂಡ, ಬಿಳಿಚೋಡು, ಬಸವಪಟ್ಟಣ ಈ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಜಿಲ್ಲಾ ಆರೋಗ್ಯಧಿಕಾರಿ ಡಾ. ಎಸ್ ಷಣ್ಮುಖಪ್ಪ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಕ್ರಮ ತ್ವರಿತಗತಿಯಲ್ಲಿ ಆಗಬೇಕಿದೆ ಅಂತ ಮೂರು ಹೋಬಳಿ ವ್ಯಾಪ್ತಿಯ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಎಲ್ಲ ಕೇಂದ್ರಗಳಲ್ಲೂ ಒಬ್ಬರೆ ವೈದ್ಯರು: ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಒಬ್ಬೊಬ್ಬರೇ ವೈದ್ಯರು ಇರುವುದರಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಮಾಯಕೊಂಡ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಟ್ಟರು ಕೂಡ ಇಲ್ಲಿ ಇಂದಿಗೂ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇದೆ. ಇಲ್ಲಿ ಒಬ್ಬರೇ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಇರುವ ಒಬ್ಬ ಡಾಕ್ಟರ್ ಅಹ ಅರೆಕಾಲಿಕ ವೈದ್ಯರಾಗಿದ್ದಾರೆ . ಹಗಲು ವೇಳೆಯಲ್ಲಿ ಮಾತ್ರ ಇವರ ಸೇವೆ ದೊರೆಯುತ್ತದೆ . ಸಂಜೆಯಿಂದ ಬೆಳಗಿನವರೆಗೂ ಶುಶ್ರೂಷಕ ಅಧಿಕಾರಿಗಳೇ ಇಲ್ಲಿ ಆರೋಗ್ಯ ಸೇವೆ ಒದಗಿಸುತ್ತಾರೆ ಎಂದು ಹೋಬಳಿಯ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ರು ಆಗದ ಕೆಲಸ: "ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾಯಕೊಂಡ, ಬಿಳಿಚೋಡು, ಬಸವಪಟ್ಟಣ ಜೊತೆಗೆ ಹೊಸದಾಗಿ ಅಣಬೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 80 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 11 ನಗರ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆ, 4 ಸಮುದಾಯ ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ಜಿಲ್ಲೆಯಲ್ಲಿ ಒಟ್ಟು 101 ಆಸ್ಪತ್ರೆಗಳಿವೆ" ಎಂದು ಡಿಹೆಚ್ಓ ಡಾ.ಎಸ್ ಷಣ್ಮುಖಪ್ಪ ತಿಳಿಸಿದರು.