ಮಂಡ್ಯ: ಉತ್ತರ ಭಾರತದ ಗಂಗಾರತಿ ರೀತಿಯಲ್ಲಿಯೇ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಮಾತೆಗೆ ಆರತಿ ಮಾಡುವ ಸಂಬಂಧ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಆಣೆಕಟ್ಟೆಯಲ್ಲಿ ಸಿದ್ಧತೆ ಮಾಡುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳ ವೀಕ್ಷಣೆ ಮಾಡಿದರು. ಅಣೆಕಟ್ಟೆಯ ಸುತ್ತ ಸ್ಥಳೀಯ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಹಲವು ಇಲಾಖೆಗಳ ಜತೆಗೂಡಿ ಸಮಿತಿ ರಚನೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ವತಿಯಿಂದ 98 ಕೋಟಿ ಹಣವನ್ನು ಕಾವೇರಿ ಆರತಿ ಮಾಡುವ ಸಲುವಾಗಿ ಈ ಬಾರಿಯ ಬಜೆಟ್ನಲ್ಲಿ ಮೀಸಲಿಡಲಾಗಿದೆ. ಈ ಭಾಗದ ಪವಿತ್ರ ನದಿಯಾಗಿ ಜೀವನಾಡಿ ಆಗಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಸಲುವಾಗಿ ಅನೇಕ ಸಲಹೆಯನ್ನು ಪಡೆಯಲಾಗಿದೆ. ವಿದ್ಯುತ್, ಪಿಡಬ್ಲ್ಯೂಡಿ ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಸಮಿತಿಯನ್ನು ರಚಿಸಲಾಗಿದೆ. ಇನ್ನೆರಡು ದಿನದಲ್ಲಿ ನೀಲನಕ್ಷೆ ರಚಿಸಿ ವಿದ್ಯುತ್ ಅಲಂಕಾರ ಸೇರಿದಂತೆ 98 ಕೋಟಿ ಅಲ್ಲದೇ ಇದರ ಜೊತೆಗೆ ಹಲವು ಇಲಾಖೆಯಿಂದಲೂ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇಲ್ಲಿನ ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ- ಡಿಕೆಶಿ ಭರವಸೆ: ಸಮರ್ಪಕ ರಸ್ತೆ ನಿರ್ಮಿಸಿ ಧಾರ್ಮಿಕವಾಗಿ ಕುಟುಂಬ ಸಮೇತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಕೆಆರ್‌ಎಸ್ ವ್ಯಾಪ್ತಿಗೆ ಬರುವ ನಾಲ್ಕು ಪಂಚಾಯತಿಯವರು ರಸ್ತೆ, ಉದ್ಯಾನವನ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಬಿಟ್ಟುಕೊಡುವ ವ್ಯವಸ್ಥೆಯನ್ನು ಮಾಡಿಕೊಡಬೇಕು. ಇಲ್ಲಿನ ಸ್ಥಳೀಯ ಯುವ ಜನರಿಗೆ ಹೆಚ್ಚು ಉದ್ಯೋಗವಕಾಶವನ್ನು ನೀಡಲಾಗುವುದು. ಕಾವೇರಿ ಆರತಿಯನ್ನು ಒಂದೇ ಬಾರಿಗೆ 10 ಸಾವಿರ ಜನರು ನೋಡುವ ವ್ಯವಸ್ಥೆಯನ್ನು ಮಾಡಲಾಗುವುದು. ವಾರದಲ್ಲಿ ಎಷ್ಟು ದಿನ ಕಾವೇರಿ ಆರತಿ ಮಾಡಬೇಕು ಎಂಬುದರ ಬಗ್ಗೆ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲೂ ಮತ್ತೊಂದು ಸಭೆ ಮಾಡಿ ತೀರ್ಮಾನ ಮಾಡಲಾಗುವುದು ಡಿಸಿಎಂ ತಿಳಿಸಿದರು.
ಇವರೆಲ್ಲ ಉಪಸ್ಥಿತರಿದ್ದರು: ಈ ಸಂದರ್ಭದಲ್ಲಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾ ಧಿಕಾರಿ ನಂದಿನಿ ಸೇರಿದಂತೆ ಇನ್ನಿತರರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: KRS ಡ್ಯಾಂ ಬಳಿಯೂ ಕಾವೇರಿ ಆರತಿ ಮಾಡುವ ಗುರಿಯಿದೆ: ಡಿ.ಕೆ. ಶಿವಕುಮಾರ್ - DK SHIVAKUMAR VISITS BHAGAMANDALA