ದಾವಣಗೆರೆ: ಮದ್ಯ ಸೇವಿಸಲು ಹಣ ಕೊಡದ ಅನಾರೋಗ್ಯಪೀಡಿತ ತಾಯಿಯನ್ನೇ ಮಗ ಕೊಲೆ ಮಾಡಿರುವ ದಾರುಣ ಘಟನೆ ದಾವಣಗೆರೆ ತಾಲೂಕಿನ ಐಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರತ್ನಬಾಯಿ ಮಗನಿಂದಲೇ ಕೊಲೆಯಾದ ತಾಯಿ. ರಾಘವೇಂದ್ರ ನಾಯ್ಕ್ ಕೊಲೆ ಮಾಡಿದ ಪುತ್ರ.
"ಆರೋಪಿ ಪುತ್ರ ರಾಘವೇಂದ್ರ ನಾಯ್ಕ್ ವಿಪರೀತವಾಗಿ ಕುಡಿತದ ಚಟಕ್ಕೆ ಜೋತು ಬಿದ್ದಿದ್ದಕ್ಕೆ, ಅಲ್ಲದೆ ಮದ್ಯ ಸೇವಿಸಲು ಅವರಿವರ ಬಳಿ ಹಣ ಕೇಳ್ಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದರು. ಬಳಿಕ ತಾಯಿಯ ಬಳಿಯೇ ಮದ್ಯ ಸೇವಿಸಲು ಹಣ ಕೇಳಿದ್ದಕ್ಕೆ ತಾಯಿ ರತ್ನಬಾಯಿ ಹಣ ನೀಡಲು ನಿರಾಕರಿಸಿದ್ದರು. ಹಣ ಕೊಡದ ತಾಯಿ ಜೊತೆ ಆರೋಪಿ ಮಗ ರಾಘವೇಂದ್ರ ನಾಯ್ಕ್ ಗಲಾಟೆ ಮಾಡಿ ಕಟ್ಟಿಗೆಯಿಂದ ಬಲವಾಗಿ ತಲೆಗೆ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವ ಆಗಿ ರತ್ನಬಾಯಿ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮಾಹಿತಿ ತಿಳಿದ ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದೇವೆ" ಎಂದು ಪಿಐ ಕಿರಣ್ ಕುಮಾರ್ ಮಾಹಿತಿ ನೀಡಿದರು.
ಎಸ್ಪಿ ಹೇಳಿದ್ದೇನು?: ಎಸ್ಪಿ ಉಮಾಪ್ರಶಾಂತ್ ಅವರು ದೂರವಾಣಿಯಲ್ಲಿ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿ, "ಮದ್ಯ ಸೇವಿಸಲು ಹಣ ಕೊಡದೇ, ಅವರಿವರ ಬಳಿ ಮದ್ಯಪಾನ ಮಾಡಲು ಹಣ ಕೇಳ್ಬೇಡ ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗ ರಾಘವೇಂದ್ರ ನಾಯ್ಕ್ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯನಗರ: ಹಳೆ ದ್ವೇಷದ ಹಿನ್ನೆಲೆ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ