ETV Bharat / state

ಚಿತಾಗಾರದಲ್ಲಿ ಏಕಾಂಗಿ ಕೆಲಸ: ಸಾವಿರಾರು ಮೃತದೇಹಗಳಿಗೆ ಮುಕ್ತಿ ನೀಡಿದ ಗಟ್ಟಿಗಿತ್ತಿ ಸುಧಾರಾಣಿಯ ಸಾಹಸಗಾಥೆ

ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ವೈಕುಂಠ ಸ್ಮಶಾನದಲ್ಲಿ ಸುಧಾರಾಣಿ ಎಂಬ ಮಹಿಳೆ ಕಳೆದ 9-10 ವರ್ಷಗಳಿಂದ ಮೃತದೇಹಗಳಿಗೆ ಅಗ್ನಿ ಸ್ಪರ್ಶ ಮಾಡಿ ಮುಕ್ತಿ ನೀಡುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.

SUDHARANI ADVENTURE STORY
ಮೃತದೇಹಗಳಿಗೆ ಮುಕ್ತಿ ನೀಡುವ ಸುಧಾರಾಣಿ (ETV Bharat)
author img

By ETV Bharat Karnataka Team

Published : October 9, 2025 at 2:59 PM IST

6 Min Read
Choose ETV Bharat

ವಿಶೇಷ ವರದಿ: ನೂರುಲ್ಲಾ ಡಿ.

ದಾವಣಗೆರೆ: ಸ್ಮಶಾನ ಅಂದ್ರೆ ಸಾಕು ಭಯಪಡುವ ವ್ಯಕ್ತಿಗಳ ಮಧ್ಯೆ, 'ಸುಧಾರಾಣಿ' ಎಂಬ ದಿಟ್ಟ ಮಹಿಳೆ ನಗರದ ಪಿಬಿ ರಸ್ತೆಯಲ್ಲಿರುವ ವೈಕುಂಠ ಸ್ಮಶಾನದಲ್ಲಿ ಕಳೆದ 10 ವರ್ಷಗಳಿಂದ ಹಗಲು ರಾತ್ರಿ ಎನ್ನದೇ ಏಕಾಂಗಿಯಾಗಿ ಚಿತಾಗಾರದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

ಸ್ಮಶಾನ ಎನ್ನುವುದು ಯಾರಾದರೂ ಮೃತಪಟ್ಟರೆ ಮಾತ್ರ ಹೋಗುವ ಜಾಗವದು. ಆದರೆ, ಅಲ್ಲಿ ಓರ್ವ ಮಹಿಳೆ ಏಕಾಂಗಿಯಾಗಿ ಉಳಿದುಕೊಳ್ಳೋದು ಸಾಧ್ಯವೇ? ರಾತ್ರಿ ಆ ಹೆಣಗಳ ಮಧ್ಯೆ ಇರುವುದಾದರೂ ಹೇಗೆ? ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಇದಕ್ಕೆ ಸುಧಾರಾಣಿ ತದ್ವಿರುದ್ಧ.

ಸಾವಿರಾರು ಮೃತದೇಹಗಳಿಗೆ ಮುಕ್ತಿ ನೀಡಿದ ಗಟ್ಟಿಗಿತ್ತಿ ಸುಧಾರಾಣಿಯ ಸಾಹಸಗಾಥೆ (ETV Bharat)

ಮೃತದೇಹಗಳಿಗೆ ಅಗ್ನಿ ಸ್ಪರ್ಶ ಮಾಡಿ ಮುಕ್ತಿ ನೀಡುವುದೆಂದರೆ ಶ್ರೇಷ್ಠ ಹಾಗೂ ಪುಣ್ಯದ ಕೆಲಸವೆಂದು ಇಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಸುಧಾರಾಣಿ, ಕಳೆದ 10 ವರ್ಷಗಳಿಂದ ಅನಾಥ ಶವ ಸೇರಿದಂತೆ ಸಾವಿರಾರು ಮೃತದೇಹಗಳಿಗೆ ಭೂಮಿಯಿಂದ ಬೀಳ್ಕೊಟ್ಟಿದ್ದಾರೆ. ಅನಾಥಶ್ರಮದಲ್ಲಿ ಮೃತಪಟ್ಟ ಅನಾಥ ಹಿರಿಯ ಜೀವಗಳಿಗೆ ಇವರೇ ಚಟ್ಟಕಟ್ಟಿ, ಸ್ನಾನ ಮಾಡಿಸಿ ಅಂತ್ಯಕ್ರಿಯೆ ಮಾಡಿರುವ ಉದಾಹರಣೆಗಳು ಸಾಕಷ್ಟು. ಹೀಗೆ ಶವ ಅಂದ್ರೆ ಭಯಪಡುವವರ ಮಧ್ಯೆ ಸುಧಾರಾಣಿ, ಬರೋಬ್ಬರಿ 4 ಸಾವಿರಕ್ಕೂ ಹೆಚ್ಚು ಮೃತದೇಹಗಳಿಗೆ ಅಗ್ನಿ ಸ್ವರ್ಶ ಮಾಡಿ ಮುಕ್ತಿ ನೀಡಿದ್ದಾರೆ.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

ಕೊರೊನಾ ವೇಳೆ ಅಧಿಕ: ಇನ್ನು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದಾಗ ಶವದ ಹತ್ತಿರ ಬಾರದ ಕಾಲದಲ್ಲಿ ಸುಧಾರಾಣಿ ಅವರು ಅದೆಷ್ಟೋ ಮೃತದೇಹಗಳಿಗೆ ತಾವೇ ಮುಂದೆ ನಿಂತು ಶವಸಂಸ್ಕಾರ ಮಾಡಿದ್ದು ಗಮನಾರ್ಹ. ಏಕಾಂಗಿಯಾಗಿ ಕಟ್ಟಿಗೆ ಜೋಡಿಸಿ, ಮಡಿಕೆ ಒಡೆದು ಚಿತೆಗಳಿಗೆ ಬೆಂಕಿ ಇಟ್ಟು ಮುಕ್ತಿ ನೀಡಿರುವ ಉದಾಹರಣೆಗಳಿವೆ. ಈ ಸ್ಮಶಾನದಲ್ಲಿ ಎಲ್ಲಾ ವರ್ಗದವರ ಮೃತದೇಹಗಳಿಗೆ ಮುಕ್ತಿ ನೀಡ್ತಿರುವುದು ವಿಶೇಷ.

Davanagere: The adventure story of Sudharani, who works in a cemetery
ಪಿಬಿ ರಸ್ತೆಯಲ್ಲಿರುವ ವೈಕುಂಠ ಸ್ಮಶಾನ (ETV Bharat)

ಸಾವಿರಾರು ಮೃತದೇಹಗಳಿಗೆ ಮುಕ್ತಿ: ಸುಧಾರಾಣಿ ಮೂಲತಃ ಮಾಯಕೊಂಡ ಹೋಬಳಿಯ ದೊಡ್ಡ ಮಾಗಡಿ ಗ್ರಾಮದವರು. ವಿಜಯಪುರ ಮೂಲದ ಸಿದ್ದರಾಮೇಶ್ವರ ಸ್ವಾಮೀಜಿ ಎಂಬುವರನ್ನು ವಿವಾಹವಾದ ಸುಧಾರಾಣಿ, ನಗರದ ಪಿಬಿ ರಸ್ತೆಯಲ್ಲಿರುವ ವೈಕುಂಠ ಟ್ರಸ್ಟ್​ನಲ್ಲಿ ಮ್ಯಾನೇಜರ್ ಆಗಿ ತಮ್ಮ ಕಾಯಕ ವೃತ್ತಿ ಆರಂಭಿಸಿದರು. ಅಂದಿನಿಂದ ಪ್ರಾರಂಭಗೊಂಡ ವೃತ್ತಿ ಈವರೆಗೂ ನಡೆಸಿಕೊಂಡು ಬರುತ್ತಿದ್ದಾರೆ.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

"ಮೊದಲು ಈ ಕೆಲಸವನ್ನು ಮಾಡಲು ನನಗೆ ಭಯವಾಗುತ್ತಿತ್ತು. ಎರಡ್ಮೂರು ಮೃತದೇಹಗಳಿಗೆ ಮುಕ್ತಿ ನೀಡಿ ರೂಢಿ ಮಾಡಿಕೊಂಡಿಕೊಂಡೆ. ಬಳಿಕ ಭಯ ದೂರವಾಯಿತು. ಅವತ್ತಿನಿಂದ ಈವರೆಗೆ ಸಾವಿರಾರು ಮೃತದೇಹಗಳಿಗೆ ಮುಕ್ತಿ ನೀಡಿರುವೆ. ಕೊರೊನಾ ವೇಳೆ ತಿಂಗಳಿಗೆ 100-120 ಮೃತದೇಹಗಳಿಗೆ ಮುಕ್ತಿ ನೀಡಿರುವೆ. ಈತನಕ ಒಟ್ಟು 3-4 ಸಾವಿರ ಮೃತದೇಹಗಳಿಗೆ ಅಗ್ನಿ ಸ್ವರ್ಶ ಮಾಡಿರುವೆ. ಪ್ರತಿ ತಿಂಗಳು ಸುಮಾರು 30-35 ಮೃತದೇಹಗಳಿಗೆ ಮುಕ್ತಿ ನೀಡಲಾಗುತ್ತದೆ. ಒಂದೊಂದು ದಿನ 3-4 ಮೃತದೇಹಗಳಿದ್ದರೆ, ಇನ್ನೊಂದು ದಿನ ಇರುವುದಿಲ್ಲ" ಎನ್ನುತ್ತಾರೆ ಸುಧಾರಾಣಿ.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

ಅನಾಥಶ್ರಮದ ಮೃತದೇಹಗಳಿಗೆ ಇವರೇ ವಾರಸ್ದಾರ: ಜಿಲ್ಲೆಯ ನಾಲ್ಕೈದು ಅನಾಥಶ್ರಮಗಳಲ್ಲಿ ಯಾರಾದರೂ ಮೃತಪಟ್ಟರೆ ಆ ಅನಾಥ ಶವಗಳಿಗೆ ಮುಕ್ತಿ ನೀಡುವುದು ಇದೇ ಸುಧಾರಾಣಿ. ಇದಲ್ಲದೆ ನಮ್ಮ ಕೈಯಲ್ಲಿ ಈ ಶವಸಂಸ್ಕಾರ ಮಾಡಲು ಆಗಲ್ಲ ಎಂಬುವರಿದ್ದರೆ ಅದಕ್ಕೂ ಇವರೇ ವಾರಸ್ದಾರರು. ಮೃತದೇಹವನ್ನು ವಾನಹದ ಮೂಲಕ ಹೊತ್ತು ತರುವ ಸುಧಾರಾಣಿ, ಅದಕ್ಕೆ ಸ್ನಾನ ಮಾಡಿಸಿ ವಿಧಿವಿಧಾನಗಳ ಬಳಿಕ ಶವಸಂಸ್ಕಾರ ಮಾಡುತ್ತಾರೆ. ಇದಲ್ಲದೆ ಅಸ್ಥಿಯನ್ನು ಹತ್ತಿರದ ತುಂಗಭದ್ರಾ ನದಿಯಲ್ಲಿ ಹರಿಬಿಟ್ಟು ಕಾರ್ಯ ಕೂಡ ಪೂರ್ಣಗೊಳಿಸುತ್ತಾರೆ.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

"ಅಂತ್ಯಸಂಸ್ಕಾರ ವೇಳೆ ಸಂಬಂಧಿಕರೇ ಕಟ್ಟಿಗೆ ಕೊಡಲು ಮುಂದೆ ಬರಲ್ಲ, ದೂರ ನಿಲ್ಲುತ್ತಾರೆ. ಅತಂಹ ದುಸ್ಥಿತಿ ಈಗ ಇದೆ. ಮೃತದೇಹಗಳಿಗೆ ಮಕ್ಕಳು ಇಲ್ಲವೇ ತಂದೆ ಅಗ್ನಿ ಸ್ಪರ್ಶ ಮಾಡಿ ಮುಕ್ತಿ ನೀಡಬೇಕು. ಆದರೆ, ಅದನ್ನು ಎಷ್ಟೋ ಬಾರಿ ನಾನೇ ಮಾಡಿರುವೆ. ಯಾರೂ ಮುಂದೆ ಬರುವುದಿಲ್ಲ. ಅನಾಥಶ್ರಮದ ಎಷ್ಟೋ ಶವಗಳಿಗೆ ನಾನೇ ಮುಕ್ತಿ ನೀಡಿದ್ದೇನೆ. ದಾವಣಗೆರೆಯ ನಾಲ್ಕೈದು ಅನಾಥಶ್ರಮಗಳಿಂದ ‌ಬರುವ ಮೃತದೇಹಗಳಿಗೆ ನಾನೇ ಮುಕ್ತಿ ನೀಡಿದ್ದೇನೆ. ಹೆಣ್ಣು ಮಕ್ಕಳು ಮುಂದೆ ಬರಬೇಕು. ಎಲ್ಲ ಕೆಲಸದಲ್ಲೂ ಮುನ್ನುಗ್ಗಬೇಕು. ಸತ್ತಾಗ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಕ್ಕೆ ಆಗಲ್ಲ. ಇದ್ದಾಗ ಚೆನ್ನಾಗಿ ನೋಡಿಕೊಳ್ಳಬೇಕು" ಎನ್ನುತ್ತಾರೆ ಸುಧಾರಾಣಿ.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

ಬಂದಿದ್ದು ಮ್ಯಾನೇಜರ್ ಕೆಲಸಕ್ಕೆ, ಆದ್ರೆ ಮಾಡುತ್ತಿರುವುದು ಬೇರೆ ಕಾಯಕ: ತಮ್ಮ ಕಾಯಕದ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸುಧಾರಾಣಿ, "ವಿವಾಹವಾದ ಬಳಿಕ ಕೆಲಸ ಹುಡುಕಿಕೊಂಡು ವಿಜಯಪುರದಿಂದ ದಾವಣಗೆರೆಗೆ ಬಂದೆವು. ಈ ವೈಕುಂಠ ಟ್ರಸ್ಟ್​ಗೆ ಬಂದಾಗ ಅದೆಗೋ ಮ್ಯಾನೇಜರ್ ಆಗಿ ಸೇರಿದೆ. ಆದರೆ, ಮೃತದೇಹಗಳಿಗೆ ಮುಕ್ತಿ ನೀಡುವ ಕಾಯಕದಲ್ಲಿ ನಿರತನಾದೆ. ಪತಿ ಕೂಡ ತನ್ನೊಂದಿಗೆ ಮ್ಯಾನೇಜರ್ ಕೆಲಸ ಮಾಡುತ್ತಿದ್ದಾರೆ. ಇಡೀ ಸ್ಮಶಾನವನ್ನು ಪೋಷಿಸಿಕೊಂಡು ಹೋಗಲಾಗುತ್ತಿದೆ. ಆರಂಭದಲ್ಲಿ ಇಲ್ಲಿ ಮೃತದೇಹಗಳಿಗೆ ಮುಕ್ತಿ ನೀಡುವವರ ದಬ್ಬಾಳಿಕೆ ಹೆಚ್ಚಾಗಿತ್ತು. ಮುಕ್ತಿ ನೀಡುವ ವೇಳೆ ಮದ್ಯಪಾನ ಮಾಡುತ್ತಿದ್ದರು. ಅವರನ್ನು ಕೆಲಸದಿಂದ ಬಿಡಿಸಿದ ಬಳಿಕ ನಾನೇ ಆ ಕಾಯಕ ಮುಂದುವರೆಸಿಕೊಂಡು ಹೋಗುತ್ತಿರುವೆ. ಆರಂಭದಲ್ಲಿ ಕೆಲಸದಲ್ಲಿ ಭಯ ಅನ್ನಿಸುತ್ತಿತ್ತು. ಈಗ ಭಯ ಇಲ್ಲದಂತೆ ಆಗಿದೆ" ಎಂದರು.

Davanagere: The adventure story of Sudharani, who works in a cemetery
ಪತಿ ಹಾಗೂ ಮುಕ್ತಿ ವಾಹನದ ಚಾಲಕ ಚೇತನ್ ಅವರೊಂದಿಗೆ ಸುಧಾರಾಣಿ (ETV Bharat)

3-4 ಸಾವಿರ ಮೃತದೇಹಗಳಿಗೆ ಮುಕ್ತಿ: "ಕಳೆದ 9-10 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿರುವೆ. ಈ ಸೇವೆ ಓರ್ವ ಹೆಣ್ಣುಮಗಳಿಗೆ ಸಿಕ್ಕಿರುವುದು ಪುಣ್ಯ. ಇಲ್ಲಿ ಈತನಕ ಒಟ್ಟು 3-4 ಸಾವಿರ ಮೃತದೇಹಗಳಿಗೆ ಮುಕ್ತಿ ನೀಡಿರುವೆ. ಮುಕ್ತಿ ವಾಹನದ ಮುಖೇನ ಬರುವ ಮೃತದೇಹಗಳಿಗೆ ಆದ್ಯತೆ ನೀಡಲಾಗುತ್ತದೆ. ವಾಹನದ ಚಾಲಕ ಚೇತನ್ ಎಂಬುವರು ಮೃತದೇಹಗಳನ್ನು ತರುವ ಕೆಲಸ ಮಾಡುತ್ತಾರೆ. ಮೃತದೇಹಕ್ಕೆ ಬೆಂಕಿ ಇಡುವ ಕೆಲಸವಲ್ಲದೇ ಗಂಟೆಗಟ್ಟಲೆ ಅಲ್ಲಿಯೇ ಇದ್ದು, ಬೂದಿ ಆಗುವ ತನಕ ಕಾಯುತ್ತೇನೆ. ಬಳಿಕ ಆ ಬೂದಿಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುತ್ತೇನೆ. ಈ ಸೇವೆ ಯಾರಿಗೂ ಸಿಗಲ್ಲ. ಅಂತಹ ಸೇವೆ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ. ಅದರಲ್ಲೂ ಈ ಕಾಯಕ ಹುಡುಕಿಕೊಂಡು ಬಂದಿರುವುದು ನನ್ನ ಅದೃಷ್ಟ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಕೆಲಸ ಸಿಗಲ್ಲ. ಎಷ್ಟೋ ಜನ ಸ್ಮಶಾನ ಅಂದ್ರೆ ಸಾಕು ಭಯಪಡುತ್ತಾರೆ. ಆರಂಭದಲ್ಲಿ ನನಗೂ ಇತ್ತು. ಆದರೆ, ಈಗ ಇಲ್ಲ. ಜೀವಂತ ಇರುವ ಮನುಷ್ಯರಿಂದ ‌ಭಯ ಪಡ್ಬೇಕಷ್ಟೆ" ಎನ್ನುತ್ತಾರೆ ಗಟ್ಟಿಗಿತ್ತಿ ಸುಧಾರಾಣಿ.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

ಒಂದು ಮೃತದೇಹ ಸುಡಲು ಹರಸಾಹಸಪಡಬೇಕು: "ಒಂದು ಮೃತದೇಹ ಸುಡಲು ಭಾರಿ ಹರಸಾಹಸಪಡಬೇಕು. ಬೆಂಕಿಯ ಮುಂದೆ ಗಂಟೆಗಟ್ಟಲೇ ನಿಲ್ಲಬೇಕು. ಮೃತದೇಹ ಸುಟ್ಟು ಬೂದಿ ಆಗುವಂತೆ ನೋಡಿಕೊಳ್ಳಬೇಕು. ಮೃತದೇಹ ಸುಡಲು ಮೊದಲು ಕಟ್ಟಿಗೆ ಹಾಸಿಕೊಳ್ಳಬೇಕು. ಕಟ್ಟಿಗೆಗಳ ಮೇಲೆ ಮೃತದೇಹ ಇಟ್ಟು ಬಳಿಕ ಅದರ ಮೇಲೆ ಮತ್ತಷ್ಟು ಕಟ್ಟಿಗೆ ಹಾಕಲಾಗುತ್ತದೆ. ನಂತರ ಡಿಸೇಲ್ ಇರಿಸುತ್ತೇವೆ. ಬೆಂಕಿ ಇಟ್ಟ ಒಂದು ಗಂಟೆ ಬಳಿಕ ಗಳದ (ಕಟ್ಟಿಗೆ) ಸಹಾಯದಿಂದ ಮೃತದೇಹವನ್ನು ತಿರುವಿ ಹಾಕಲಾಗುತ್ತದೆ. ಮೂರು ಗಂಟೆ ಬಳಿಕ ಮೃತದೇಹ ಸುಟ್ಟಿರುತ್ತದೆ. ಆ ಬೂದಿಯನ್ನು ಕುಟುಂಬಸ್ಥರಿಗೆ ತುಂಬಿಕೊಡುತ್ತೇವೆ. ಇದು ಒಂದು ಮೃತದೇಹ ಸುಡಲು ಮಾಡಬೇಕಾದ ಕೆಲಸ. ನಾನೊಬ್ಬಳೇ ಮೃತದೇಹಗಳನ್ನು ಸುಡುತ್ತೇನೆ. ಕೊರೊನಾ ವೇಳೆ ಭಾರಿ ಹರಸಾಹಸಪಡಬೇಕಿತ್ತು" ಎಂದು ಸುಧಾರಾಣಿ ಹೇಳಿಕೊಂಡಿದ್ದಾರೆ.

Davanagere: The adventure story of Sudharani, who works in a cemetery
ಸ್ಮಶಾನದ ಕೆಲಸದಲ್ಲಿ ಸುಧಾರಾಣಿ (ETV Bharat)

ಸುಧಾರಾಣಿ ಗಟ್ಟಿಗಿತ್ತಿ: ಪತ್ನಿಯ ಕಾಯಕದ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಪತಿ ಸಿದ್ದರಾಮೇಶ್ವರ ಸ್ವಾಮೀಜಿ, "ಮನುಷ್ಯರಾಗಿ ಹುಟ್ಟಿ ಬಂದ್ಮೇಲೆ ಸಮಾಜಕ್ಕೆ ಏನಾದರೂ ಸೇವೆ ಮಾಡ್ಬೇಕು. ಕಳೆದ 9-10 ವರ್ಷದಿಂದ ನನ್ನ ಮಡದಿ ಸುಧಾರಾಣಿ ಈ ಕಾಯಕ ಮಾಡ್ತಿದ್ದಾಳೆ. ಆರಂಭದಲ್ಲಿ ಬಹಳ ಹೆದರುತ್ತಿದ್ದಳು. ಕೊರೊನಾ ವೇಳೆ ನನ್ನ ಪತ್ನಿಯೇ ಶವಸಂಸ್ಕಾರ ಮಾಡಿ ಅಗ್ನಿ ಸ್ವರ್ಶದಿಂದ ಮುಕ್ತಿ ನೀಡಿದ್ದಾಳೆ. ಅಲ್ಲಿಂದ ಈವರೆಗೆ ಸುಮಾರು 3-4 ಸಾವಿರ ಮೃತದೇಹಗಳಿಗೆ ಮುಕ್ತಿ ನೀಡಿರಬಹುದು. ಈ ಕಾಯಕದಲ್ಲಿ ನಮಗೆ ಸಂತೋಷ, ನೆಮ್ಮದಿ ಮತ್ತು ಆನಂದ ಸಿಗುತ್ತದೆ. ಸತ್ತವರಿಗೆ ಮುಕ್ತಿ ಕಾಣಿಸುವುದೇ ಒಂದು ಸೇವೆ. ನಮಗೆ ಭಗವಂತ ಈ ಸೇವೆಯನ್ನು ಕರುಣಿಸಿದ್ದಾನೆ" ಎಂದು ಹೇಳಿದರು.‌

Davanagere: The adventure story of Sudharani, who works in a cemetery
ಪಿಬಿ ರಸ್ತೆಯಲ್ಲಿರುವ ವೈಕುಂಠ ಸ್ಮಶಾನ (ETV Bharat)

ಕೊರೊನಾ ವೇಳೆ ನೂರಾರು ದೇಹಗಳಿಗೆ ಮುಕ್ತಿ: "ಕೊರೊನಾ ಸೋಂಕು ತಗುಲಿದ ಮೃತದೇಹಗಳನ್ನು ಕಳಿಸುತ್ತಿದ್ದರು. ದಿನಬೆಳಗಾದರೆ ಆಂಬ್ಯುಲೆನ್ಸ್​ಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಶವ ಸಂಸ್ಕಾರಕ್ಕೆ ನಾವ್ಯಾರು ಬರಲ್ಲ, ನೀವೇ ಎಲ್ಲಾ ಮಾಡಿ ಮುಗಿಸುವಂತೆ ಮೃತರ ಕುಟುಂಬಸ್ಥರು ನಮಗೆ ಕರೆ ಮಾಡುತ್ತಿದ್ದರು. ಆಗ ನಾವೇ ಹಗಲು-ರಾತ್ರಿ ಶವಸಂಸ್ಕಾರ ಮಾಡಿ ಮೃತದೇಹಗಳಿಗೆ ಮುಕ್ತಿ ನೀಡುತ್ತಿದ್ದೆವು. ಕಮಿಟಿಯವರ ಸಹಕಾರ ಕೂಡ ಅಪಾರ. ಈ ಕಾಯಕ ಮಾಡಲು ಖುಷಿ ಇದೆ. ಸ್ಮಶಾನದಲ್ಲಿ ದೆವ್ವ, ಭೂತ, ಪಿಶಾಚಿ ಇರುತ್ತವೆ ಎನ್ನುತ್ತಾರೆ. ಇವುಗಳ್ಯಾದೂ ಇಲ್ಲ. ಅದು ಕಟ್ಟುಕಥೆ. ರಾತ್ರಿ 12 ಗಂಟೆಯ ತನಕ ಸುಧಾರಾಣಿ ಮೃತದೇಹ ಸುಟ್ಟಿದ್ದಾಳೆ. ಆಕೆ ಧೈರ್ಯವಂತ ಹೆಣ್ಣುಮಗಳು. ಒಬ್ಬರೇ ಸ್ಮಶಾನದಲ್ಲಿ ದೇಹಗಳನ್ನು ಸುಡುತ್ತಾಳೆ ಎಂದು ಸಿದ್ದರಾಮೇಶ್ವರ ಸ್ವಾಮೀಜಿ ಪತ್ನಿಯ ಧೈರ್ಯವನ್ನು ಕೊಂಡಾಡಿದರು.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

ಚೇತನ್ ಪ್ರತಿಕ್ರಿಯೆ: ಸುಧಾರಾಣಿ ಅವರ ಕೆಲಸದಲ್ಲಿ ಕೈಜೋಡಿಸುತ್ತಿರುವ ಮುಕ್ತಿ ವಾಹನದ ಚಾಲಕ ಚೇತನ್ ಮಾತನಾಡಿ, "ನಾನು ಚಾಲಕನಾಗಿದ್ದು, ಮೃತದೇಹಗಳನ್ನು ತರುವ ಕೆಲಸ ಮಾಡುತ್ತೇನೆ. ಮೃತದೇಹಗಳನ್ನು ತಂದು ಸುಧಾರಾಣಿ ಅಮ್ಮನವರು ಹೇಳಿದಂತೆ ಸಹಾಯ ಮಾಡುವೆ. ಅಮ್ಮನವರಿದ್ದರೆ ನನಗೆ ಧೈರ್ಯ. ಕೆಲಸಕ್ಕೆ ಸೇರಿ ಒಂದು ವರ್ಷ ಆಯಿತು. ಬಹಳ ಖುಷಿ ಅನ್ನಿಸುತ್ತದೆ. ಯಾವುದೇ ಹೆದರಿಕೆ ಆಗಲ್ಲ, ರೂಢಿ ಆಗಿದೆ. ಒಳ್ಳೆ ಸಂಬಳ ಇದೆ. ಮೃತದೇಹಗಳು ಬಂದಾಗ ಅಮ್ಮನವರ ಹಿಂದೆಯೇ ನಾನು ಇರಬೇಕು. ಕಟ್ಟಿಗೆ ಕೊಡುವುದು, ಹೂವಿನ ಹಾರ ತೆಗೆಯುವುದನ್ನು ಮಾಡುತ್ತೇನೆ. ಕೆಲ ಮಹಿಳೆಯರು ಈ ಕೆಲಸಕ್ಕೆ ಭಯಪಡುತ್ತಾರೆ. ಅದರೆ, ಅಮ್ಮನವರಿಗೆ ಧೈರ್ಯ ಹೆಚ್ಚು. ನಾನು ಮೃತದೇಹಗಳನ್ನು ತಂದು ಹಾಕಿದರೆ ಅವರೇ ಎಲ್ಲಾ ರೀತಿಯ ಕೆಲಸ ಮಾಡಿಕೊಳ್ಳುತ್ತಾರೆ" ಎಂದು ಸುಧಾರಾಣಿ ಅವರ ಗಟ್ಟಿತನವನ್ನು ವಿವರಿಸಿದರು.

Davanagere: The adventure story of Sudharani, who works in a cemetery
ಮೃತದೇಹಗಳಿಗೆ ಮುಕ್ತಿ ನೀಡುವ ಕೆಲಸದಲ್ಲಿ ಸುಧಾರಾಣಿ (ETV Bharat)

ವೈಕುಂಠ ಟ್ರಸ್ಟ್ ಆರಂಭವಾಗಿ 25 ವರ್ಷ: "ಬಡವರಿಗೆ ಉಪಯೋಗವಾಗಲೆಂದು 2000ನೇ ಇಸ್ವಿಯಲ್ಲಿ ಈ ವೈಕುಂಠ ಟ್ರಸ್ಟ್​ನ ಸ್ಮಶಾನವನ್ನು ಆರಂಭಿಸಲಾಯಿತು. ಈಗ ಇದಕ್ಕೆ 25 ವರ್ಷ. ಮೋತಿ ರಾಮರಾವ್, ನಲ್ಲೂರು ಶಾಂತರಾಮ್ ಅವರು ಆರಂಭಿಸಿದರು. ನಲ್ಲೂರು ರಾಘವೇಂದ್ರ ಅವರ ತಾಯಿ ಈ ವೈಕುಂಠ ಟ್ರಸ್ಟ್​ಗೆ 3 ಎಕರೆ ಜಮೀನು ನೀಡಿ ಈ ಸೇವೆ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟರು. ಎಲ್ಲ ಸಮುದಾಯದವರು ಇಲ್ಲಿಗೆ ಬರುತ್ತಾರೆ. ಬಡವರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದಲೇ ಇದನ್ನು ಮಾಡಲಾಗಿದೆ" ಎಂದು ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: 30 ವರ್ಷಗಳಿಂದ ಸ್ಮಶಾನದಲ್ಲೇ ವಾಸ: 5,000ಕ್ಕೂ ಹೆಚ್ಚು ಶವಗಳಿಗೆ ಗುಂಡಿ ಅಗೆದು ಮುಕ್ತಿ ನೀಡಿದ ನೀಲಮ್ಮ