ಬೆಂಗಳೂರು: ಪ್ರೀತಿಗೆ ಅಡ್ಡಿಪಡಿಸಿದ ಕಾರಣಕ್ಕೆ ತಾಯಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಜಯಲಕ್ಷ್ಮಿ (47) ಕೊಲೆ ಮಾಡಿದ ಆರೋಪದ ಮೇಲೆ ಹೊಂಗಸಂದ್ರದ ನಿವಾಸಿ, ಮೃತಳ ಮಗಳು ಪವಿತ್ರಾ (27) ಹಾಗೂ ಆಕೆಯ ಪ್ರಿಯಕರ ಲನೀಶ್ (20) ಎಂಬುವರನ್ನು ಬಂಧಿಸಲಾಗಿದೆ.
ಜಯಲಕ್ಷ್ಮಿ ಅವರು ಹೊಂಗಸಂದ್ರದಲ್ಲಿ ನೆಲೆಸಿದ್ದರು, ಜೀವನಕ್ಕಾಗಿ ದಿನಸಿ ಅಂಗಡಿ ನಡೆಸುತ್ತಿದ್ದರು. ಅವರ ತಮ್ಮ ಸುರೇಶ್ ಅವರಿಗೆ ಎರಡು ವರ್ಷಗಳ ಹಿಂದೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಸುರೇಶ್ ಅಂಗಡಿಗೆ ದಿನಸಿ ತಂದುಕೊಡುವ ಮೂಲಕ ಅತ್ತೆಗೆ ನೆರವಾಗುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಲನೀಶ್ ಎಂಬಾತನನ್ನು ಪವಿತ್ರಾ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೇ ವಿಷಯಕ್ಕೆ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ತಾಯಿ ಸಹ ವಿರೋಧ ವ್ಯಕ್ತಪಡಿಸಿ ಪುತ್ರಿಗೆ ಬುದ್ಧಿಮಾತು ಹೇಳಿದ್ದರು. ಇದರಿಂದ ಪವಿತ್ರಾ ಕುಪಿತಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರೀತಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರಿಯಕರನ ಜೊತೆಗೂಡಿ ತಾಯಿಯ ಕೊಲೆಗೆ ಸಂಚು ರೂಪಿಸಿದ್ದರು. ಹೊಂಗಸಂದ್ರದ ಮನೆಗೆ ಲನೀಶ್ನನ್ನು ಶುಕ್ರವಾರ ಮಧ್ಯಾಹ್ನ ಕರೆಸಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇಬ್ಬರನ್ನೂ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನದ ಮೇಲೆ ಆರಂಭದಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು. ನಂತರ ಪೋಸ್ಟ್ ಮಾರ್ಟಮ್ ಮೂಲಕ ಕೊಲೆ ಆಗಿರೋದು ಸ್ಪಷ್ಟಪಟ್ಟಿದೆ. ಈ ಕುರಿತು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ನಮ್ಮ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆಂದು ಮಗಳು ಮೊದಲು ದೂರಿನಲ್ಲಿ ತಿಳಿಸಿದ್ದರು. ಇದರಿಂದ ಅನುಮಾನ ವ್ಯಕ್ತವಾಗಿತ್ತು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 906 ಸಂಗಾತಿ, ಪ್ರೇಮಿಗಳ ಹತ್ಯೆ: ಇಲ್ಲಿದೆ ಬೆಚ್ಚಿಬೀಳಿಸುವ ಅಂಕಿ - ಅಂಶಗಳು! - MURDERS IN KARNATAKA