ಹಾವೇರಿ : ಜಿಲ್ಲೆಯ ವಿವಿಧೆಡೆ ಕಳೆದೆರಡು ದಿನಗಳಿಂದ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ. ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ಮಳೆರಾಯನ ಆಗಮನ ಸಂತಸ ತಂದಿದೆ. ಆದರೆ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗಾಳಿಗೆ ರೈತರ ಬೆಳೆ ನಾಶವಾಗಿದೆ.
ತಾಲೂಕಿನ ದೇವಗಿರಿ, ಸಂಗೂರು, ಹಾನಗಲ್ ತಾಲೂಕಿನ ಶೇಷಗಿರಿ, ಶ್ಯಾಡಗುಪ್ಪಿ ಸೇರಿದಂತೆ ವಿವಿದೆಡೆ ಮಳೆಯಾಗಿದೆ. ಇದರಿಂದಾಗಿ ರೈತರ ಪೈರುಗಳು ನೆಲಕಚ್ಚಿವೆ. ದೇವಗಿರಿ ಸುತ್ತಮುತ್ತ ಭಾರಿ ಮಳೆಗಾಳಿ ಬಂದಿದ್ದು, ಸುಮಾರು 200 ಎಕರೆಗೂ ಅಧಿಕ ವಿಸ್ತೀರ್ಣದ ಮೆಕ್ಕೆಜೋಳದ ಬೆಳೆ ನಾಶವಾಗಿದೆ.
ಎಕರೆಗೆ 35 ರಿಂದ 40 ಸಾವಿರ ಖರ್ಚು ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂಗಾರು ಬಿತ್ತನೆ ಮಾಡಿದ್ದ ರೈತರು
ಎಕರೆಗೆ ಒಂದು ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದರು. ಆದರೆ, ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ರೈತರ ಕನಸು ನುಚ್ಚು ನೂರಾಗಿದೆ. ಹೀಗಾಗಿ, ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು ಒತ್ತಾಯಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಕೆಲವೆಡೆ ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದಾಗಿ ಬಾಳೆ ಬೆಳೆ ನೆಲಕಚ್ಚಿದೆ. ಹೀಗಾಗಿ, ರೈತರು ಕಣ್ಣೀರು ಹಾಕುತ್ತಿದ್ದಾರೆ. ಗೊನೆ ಭಾರ ಮತ್ತು ಗಾಳಿಯ ರಭಸಕ್ಕೆ ಬಾಳೆಗಿಡಗಳು ಗೊನೆ ಸಮೇತ ಧರೆಗೆ ಉರುಳಿವೆ. ಸಾಲ ಸೂಲ ಮಾಡಿ ಎಕರೆಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬಾಳೆ ನೆಲಕಚ್ಚಿದ್ದು ರೈತರನ್ನು ಚಿಂತೆಗೀಡು ಮಾಡಿದೆ.
ಬಾಳೆ ಬೆಳೆ ಮಣ್ಣುಪಾಲು : ಎಕರೆಗೆ ಎರಡರಿಂದ ಮೂರು ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಬೆಳೆಗೆ ಮಾಡಿದ ಖರ್ಚು ಬರದಂತಾಯಿತಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಅರೆ ಮಲೆನಾಡು ಭಾಗದ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ, ಅರಿಶಿಣಗುಪ್ಪಿ, ಶೇಷಗಿರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಾಳೆ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನು ಒಂದು ತಿಂಗಳು ಬಿಟ್ಟಿದ್ದರೆ ಬಾಳೆ ಕಟಾವು ಆಗುತ್ತಿತ್ತು. ಆದರೆ, ವರುಣನ ಆರ್ಭಟಕ್ಕೆ ಬಾಳೆ ಬೆಳೆ ಮಣ್ಣುಪಾಲಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಎರಡು ಲಕ್ಷ ರೂಪಾಯಿ ಬೆಳೆ ನೀರಿನಲ್ಲಿ ಹೋಮ : ಆಲದಕಟ್ಟಿ ಗ್ರಾಮದಲ್ಲಿ ಸುಮಾರು 40 ಕ್ವಿಂಟಾಲ್ ಹಸಿಮೆಣಸಿನಕಾಯಿ ಬೆಳೆನಾಶವಾಗಿದೆ. ಪ್ರಸ್ತುತ ಕ್ವಿಂಟಾಲ್ ಹಸಿ ಮೆಣಸಿನಕಾಯಿಗೆ ಐದು ಸಾವಿರ ರೂಪಾಯಿ ದರವಿದೆ. ಕನಿಷ್ಠ ಎರಡು ಲಕ್ಷ ರೂಪಾಯಿ ಬೆಳೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬಿಸಿಲಿನ ನಡುವೆ ವರುಣಾಗಮನ: ರಾಜ್ಯದ ಹಲವೆಡೆ ನಾಲ್ಕೈದು ದಿನ ಗುಡುಗು ಸಹಿತ ಮಳೆ - KARNATAKA WEATHER FORECAST