ಬೆಂಗಳೂರು: ಜನಮಾನಸದಿಂದ ಮರೆಯಾಗಿದ್ದ ಕೋವಿಡ್ ಮಾಹಾಮಾರಿ ಮತ್ತೆ ಮುನ್ನೆಲೆಗೆ ಬರತೊಡಗಿದೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿದ್ದು, 35 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ರಾಜಧಾನಿ ಬೆಂಗಳೂರು ಒಂದರಲ್ಲಿಯೇ 32 ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ 20 ದಿನಗಳಲ್ಲಿ ಕೋವಿಡ್ ಸಂಖ್ಯೆ ಏರತೊಡಗಿದ್ದು ಹಲವರಲ್ಲಿ ಗಂಭೀರ ಸ್ವರೂಪವಲ್ಲದ ಸಣ್ಣ ಪ್ರಮಾಣದ ಲಕ್ಷಣಗಳಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಮಿತಿ ಶುಕ್ರವಾರ ಸಭೆ ನಡೆಸಿ ಆರೋಗ್ಯ ಇಲಾಖೆಯಿಂದ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದೆ.
ಕಳೆದ ಒಂದು ವಾರದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರಲ್ಲಿ ಕೊಂಚ ಏರಿಕೆಯಾಗಿದೆ. ಮುಂಜಾಗ್ರತ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 24, 2025
ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದವರನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಿಸಲು… pic.twitter.com/Se55YWhW1c
ಕೋವಿಡ್ ಬಗ್ಗೆ ಆತಂಕ ಪಡುವ ಅವಶ್ಯಕತೆಯಿಲ್ಲ. ಆದರೆ ಮುನ್ನೆಚ್ಚರಿಕೆ ಅಗತ್ಯವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಉಸಿರಾಟದ ಸಮಸ್ಯೆ ಇದ್ದವರು ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸುವಂತೆ ಸಲಹೆ ನೀಡಿದೆ. ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮವೆನ್ನುವ ಸಲಹೆ ನೀಡಿದೆ. ಸ್ಯಾನಿಟೈಸರ್ ಬಳಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆಯೂ ಮನವಿ ಮಾಡಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕಳೆದ ಒಂದು ವಾರದಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಆದರೆ ಕೊರೊನಾ ಬಗ್ಗೆ ಯಾರೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
SARI ಪ್ರಕರಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ: ಆರೋಗ್ಯ ಇಲಾಖೆಯು ಉಸಿರಾಟದ ತೊಂದರೆ ಇರುವವರು ಮತ್ತು SARI ಪ್ರಕರಣಗಳಲ್ಲಿ ಕೋವಿಡ್ ಟೆಸ್ಟ್ ನ್ನು ಕಡ್ಡಾಯವಾಗಿ ಮಾಡಿಸುವಂತೆ ಮಾರ್ಗಸೂಚಿ ಹೊರಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳಿಗಾಗುವಷ್ಟು ಕೋವಿಡ್ ಟೆಸ್ಟ್ ಕಿಟ್ ಗಳನ್ನ ತೆಗೆದಿರಿಸಲು ಸೂಚನೆ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋವಿಡ್ ತಾಂತ್ರಿಕ ಸಮಿತಿಯು ರಾಜ್ಯದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳ ಕುರಿತಂತೆ ಚರ್ಚೆ ನಡೆಸಿದೆ. ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರದ ಜೊತೆ ಕೂಡ ಸಂಪರ್ಕದಲ್ಲಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕೋವಿಡ್ ಪಾಸಿಟಿವ್ ಇರುವ ರೋಗಿಗಳಲ್ಲಿ ಮೈಲ್ಡ್ ಸಿಮ್ ಟಂಸ್ ಮಾತ್ರ ಇದೆ. ಗಂಭೀರ ಸ್ವರೂಪದ ಸಮಸ್ಯೆಗಳು ಕಂಡುಬಂದಿಲ್ಲವೆಂದು ಸಚಿವರು ಮಾಹಿತಿ ನೀಡಿದ್ದಾರೆ.
ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರು ದಾಖಲಾಗಿರುವ ಆಸ್ಪತ್ರೆಗಳಲ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಲಾಗಿದೆ. ಬಾಣಂತಿಯರು ಜನ ಹೆಚ್ಚಿರುವ ಕಡೆ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ಕೋವಿಡ್ ಬಂದಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಮುಂಜಾಗ್ರತೆ ವಹಿಸಿದರೆ ಸಾಕು. ತಕ್ಷಣಕ್ಕೆ ಮಾಸ್ಕ್ ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಬಾಣಂತಿಯರು, ಗರ್ಭಿಣಿಯರು ಧರಿಸಬೇಕು ಎಂದು ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸುವುದು ಉತ್ತಮ. ಸಾರ್ವಜನಿಕರು ಪ್ರಯಾಣ ಮಾಡಲು ಯಾವುದೇ ಅಡ್ಡಿಯಿಲ್ಲ. ಎಲ್ಲರೂ ಸಹಜ ಜೀವನ ನಡೆಸಬಹುದು. ಮಾಧ್ಯಮಗಳು ಆತಂಕ ಸೃಷ್ಟಿಸುವುದು ಬೇಡ ಎಂದು ಸಚಿವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಓದಿ: ಬೆಳಗಾವಿಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ: ಗರ್ಭಿಣಿಯಲ್ಲಿ ಸೋಂಕು ದೃಢ