ಮೈಸೂರು: ಮದ್ಯ ಸೇವನೆಗೆ ವೃದ್ಧಾಪ್ಯ ವೇತನದ ಹಣ ನೀಡದ ಮಲತಾಯಿಯನ್ನು ಕೊಂದ ಪುತ್ರನಿಗೆ ಮೈಸೂರಿನ 6ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಿರಿಯಾಪಟ್ಟಣ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದ ನಿವಾಸಿ ಸೂಸೈಮೇರಿ ಅವರನ್ನು ಕೊಂದ ಮಲಮಗ ಮಾರ್ಟಿನ್ ದೇವನ್ ಶಿಕ್ಷೆಗೆ ಗುರಿಯಾದವ.
ಪೇಂಟರ್ ಕೆಲಸ ಮಾಡಿಕೊಂಡಿದ್ದ ಮಾರ್ಟಿನ್ ದೇವನ್ ಕುಡಿತದ ಚಟಕ್ಕೆ ದಾಸನಾಗಿದ್ದ. ನಿತ್ಯ ಹಣ ನೀಡುವಂತೆ ತಾಯಿಯನ್ನು ಒತ್ತಾಯಿಸುತ್ತಿದ್ದ. 2022ರ ಜೂನ್ 28ರಂದು ಸಂಜೆ ವೃದ್ಧಾಪ್ಯ ವೇತನದ ಹಣ ಕುಡಿಯಲು ನೀಡಲಿಲ್ಲ ಎಂದು ಕೋಪಗೊಂಡು ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೈಲುಕುಪ್ಪೆ ಠಾಣೆ ಪೊಲೀಸರು, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ.ಜಿ. ಸೋಮಶೇಖರ್ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ. ಕಾಮಾಕ್ಷಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ಪೊಲೀಸರ ಕಿರುಕುಳದಿಂದ ಕಾಪಾಡಿ ಎಂದು ಕೋರಿದ್ದ ಎಂಜಿನಿಯರ್ ವಿರುದ್ಧವೇ ವಕೀಲರಿಂದ ಆರೋಪ - High Court
ಪ್ರತ್ಯೇಕ ಪ್ರಕರಣ, ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ: ಮಚ್ಚಿನಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗೆ ಮೈಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸರಗೂರು ತಾಲೂಕಿನ ಅಂತರ ಸಂತೆ ಗ್ರಾಮದ ರವಿ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಅದೇ ಗ್ರಾಮದ ಸುನೀಲ್ ಎಂಬಾತನನ್ನು ಕಳೆದ 2020ರ ಫೆಬ್ರವರಿ 8ರಂದು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ.
ಸುನೀಲ್ ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇಲೆ ರವಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹೆಚ್.ಡಿ. ಕೋಟೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಧೀಶರಾದ ಟಿ.ಗೋವಿಂದಯ್ಯ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆಯೊಂದಿಗೆ 30 ಸಾವಿರ ರೂ. ದಂಡ ವಿಧಿಸಿದ್ದಾರೆ. ಜೊತೆಗೆ ಮೃತನ ತಾಯಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ. ಶಿವಶಂಕರ ಮೂರ್ತಿ ವಾದ ಮಂಡಿಸಿದ್ದರು.
ಇದನ್ನೂ ಓದಿ: ನ್ಯಾಯಾಲಯಗಳ ಆದೇಶ ಪಾಲನೆಗಾಗಿ ಪ್ರತಿ ಇಲಾಖೆಗೂ ಪ್ರತ್ಯೇಕ ಕೋಶ ರಚಿಸಿ: ಹೈಕೋರ್ಟ್ - High Court