ಬೆಂಗಳೂರು: ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತಂತೆ ಪ್ರಕಟವಾಗಿದ್ದ ಯೂಟ್ಯೂಬ್ ವಿಡಿಯೋವನ್ನು ತೆಗೆಯುವಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಎ.ಎಸ್.ಸುಕೇಶ್ ಮತ್ತು ಶೀನಪ್ಪ ಎಂಬವರು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಎಂ.ಡಿ.ಸಮೀರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕ್ಷೇತ್ರದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬಸ್ಥರ ವಿರುದ್ಧವಾಗಿ ಯಾವುದೇ ತರಹದ ಆಧಾರರಹಿತ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಸಮೀರ್ ಮಾಡಿರುವ ವಿಡಿಯೋಗೆ ಅರ್ಜಿದಾರರ ವಿರುದ್ಧವಾಗಿರುವವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಂವಿಧಾನದ 19(1)(ಎ) ವಿಧಿಯಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಭ್ಯವಿದ್ದರೂ ಸಂವಿಧಾನದ 19(2)ನೇ ವಿಧಿ ಅಡಿ ಪರಿಪೂರ್ಣವಲ್ಲ. ಸಕಾರಣಗಳಿದ್ದಾಗ ಅದರ ಮೇಲೆ ನಿರ್ಬಂಧ ವಿಧಿಸಬಹುದಾಗಿದ್ದು, ಮಾನಹಾನಿಯಂತಹ ಸಂದರ್ಭದಲ್ಲಿ ನಿರ್ಬಂಧಿಸಬಹುದಾಗಿದೆ. ಸಮೀರ್ ವಿಡಿಯೋದಲ್ಲಿನ ವಿಷಯವು ಸುಳ್ಳಾಗಿದ್ದು, ಅದು ಮಾನಹಾನಿಯಾಗಿದೆ ಎಂದು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಒಂದೇ ಗಾಯಕ್ಕೆ ವ್ಯತಿರಿಕ್ತ ವರದಿ ; ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆಗೆ ಹೈಕೋರ್ಟ್ ಆದೇಶ
ವಿಡಿಯೋ ಹಿನ್ನೆಲೆಯಲ್ಲಿ ಬಳ್ಳಾರಿ ಪೊಲೀಸರು ಯುಟ್ಯೂಬರ್ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದರು. ಬಳಿಕ ಪೊಲೀಸ್ ನೋಟಿಸ್ ಮತ್ತು ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿತ್ತು.
ಈ ನಡುವೆ, ಬೆಳ್ತಂಗಡಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಹೆಸರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಬದಿಗಿರಿಸಿ, ಪ್ರತಿಭಟನೆಗೆ ಹೈಕೋರ್ಟ್ ಅನುಮತಿಸಿತ್ತು.
ಇದನ್ನೂ ಓದಿ: ಬೆಳ್ತಂಗಡಿ ವಿದ್ಯಾರ್ಥಿನಿ ಸಾವಿನ ಕುರಿತು ಸಭೆ ನಡೆಸಲು ಅಡ್ಡಿಯಿಲ್ಲ: ಹೈಕೋರ್ಟ್