ಬೆಂಗಳೂರು: "ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ, ದಲಿತ ವಿರೋಧಿ ಕೂಡ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ “ಭೀಮ ಹೆಜ್ಜೆ 100ರ ಸಂಭ್ರಮ” ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು 100 ವರ್ಷಗಳಾದ ಹಿನ್ನೆಲೆಯಲ್ಲಿ, ಅಂಬೇಡ್ಕರರ ಜನ್ಮದಿನವೂ ಬರುತ್ತಿರುವ ಸಂದರ್ಭದಲ್ಲಿ 100 ವರ್ಷದ ನೆನಪನ್ನು ಭೀಮ ಹೆಜ್ಜೆ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಯಾವ ಕಾರಣಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರೋ ಅದನ್ನು ಜನರಿಗೆ ನೆನಪಿಸಲಾಗುವುದು. ಕಾಂಗ್ರೆಸ್ ಪಕ್ಷವು ಅವರಿಗೆ ಅನ್ಯಾಯ ಮಾಡಿದ್ದರು. ಅವರು ಸಂವಿಧಾನ ರಚನಾ ಸಭೆಯಲ್ಲಿ ಇರಬಾರದು ಎಂಬ ಕಾರಣಕ್ಕೆ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಸಂಗತಿಯನ್ನು, ಎರಡೆರಡು ಬಾರಿ ಅವರನ್ನು ಸೋಲಿಸಿದ್ದು, ಮಧ್ಯಂತರ ಸರ್ಕಾರ ಬಾರದಂತೆ ತಡೆದುದನ್ನು ತಿಳಿಸುತ್ತೇವೆ" ಎಂದರು.
ದಲಿತರ ಮೀಸಲಾತಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ವಿರೋಧಿಸಿದ್ದನ್ನು ಜನರ ಮುಂದೆ ತೆರೆದಿಡುತ್ತೇವೆ. ಈಗಲೂ ಖರ್ಗೆಯವರಿಗೆ ಅವಮಾನ ಮಾಡಿದ್ದನ್ನೂ ತಿಳಿಸುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬಂದು 100 ವರ್ಷವಾಗುತ್ತಿದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿಗೆ ಮಹಾತ್ಮ ಗಾಂಧಿಯವರು ಬಂದ ಕಾರ್ಯಕ್ರಮ ಅವರು ಮಾಡಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭೇಟಿಯ 100 ವರ್ಷ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ಕಾರ್ಯಕ್ರಮ ಮಾಡಿದ್ದರೆ ನಾವು ಮಾಡುತ್ತಿರಲಿಲ್ಲ. ಇದು ನಮ್ಮ ಬದ್ಧತೆ ಎಂದು ತಿಳಿಸಿದರು.
ದಲಿತರನ್ನು ತುಳಿದವರೇ ಕಾಂಗ್ರೆಸ್ ನವರು: ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್‌ನವರು ಹಲವಾರು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ. ದಲಿತರ ಬಗ್ಗೆ ಮಾತನಾಡುವಾಗಲೇ ಅವರು ತುಳಿತಕ್ಕೆ ಒಳಗಾದವರು ಎಂದು ಹೇಳುತ್ತೇವೆ. ಆದರೆ, ಈ ರೀತಿ ತುಳಿದವರು ಯಾರು ಎಂದು ಪ್ರಶ್ನೆ ಮಾಡಿದರೆ, ಕಾಂಗ್ರೆಸ್‌ನವರೇ ಎಂಬ ಉತ್ತರ ಸಿಗುತ್ತದೆ. ಇಷ್ಟು ವರ್ಷಶೋಷಿತರನ್ನು ಕಾಂಗ್ರೆಸ್‌ನವರೇ ತುಳಿದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್‌ನ ಕಳ್ಳರು ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್‌ರ ಹೆಸರನ್ನು ಕಾಂಗ್ರೆಸ್‌ನವರು ದುರುಪಯೋಗ ಮಾಡಿಕೊಂಡರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎಂದು ಹೇಳುತ್ತಾರೆ. ಆದರೆ ದಲಿತರಿಗೆ ಮೋಸ ಮಾಡುತ್ತಾರೆ ಎಂದು ದೂರಿದರು.
ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್‌ನಿಂದಾದ ಭೂ ಕಬಳಿಕೆ ಬಗ್ಗೆ ನಾನು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ, ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ನಿಂತುಕೊಳ್ಳುತ್ತದೇ ಎಂಬುದರಲ್ಲೇ ಅವರ ದಲಿತರ ಕಾಳಜಿ ಅರ್ಥವಾಗುತ್ತದೆ. ಸಂವಿಧಾನ ಉಳಿಯಬೇಕು, ಕಾಂಗ್ರೆಸ್‌ನ ಪೊಳ್ಳು ಭರವಸೆಗಳು ಹೋಗಬೇಕು ಎಂದರು.
ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ವರದಿ ರೂಪಿಸಲಾಗಿದೆ: ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಸಮೀಕ್ಷೆ ಮಾಡಿದ್ದವರು ಎಲ್ಲರ ಮನೆಗೆ ಹೋಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ. ಇದರಲ್ಲಿ ರಾಜಕೀಯ ಇರುವುದರಿಂದ ಇದನ್ನು ಯಾರೂ ಒಪ್ಪಲ್ಲ. ನಾನು ಕೂಡ ಜಾತಿ ಗಣತಿ ಆಗಬೇಕು ಎನ್ನುತ್ತೇನೆ. ಆದರೆ ಯಾರಿಗೋ ಅನುಕೂಲ ಮಾಡಿಕೊಡಲು ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ. ಕಾಂಗ್ರೆಸ್‌ಗೆ ಇದೇ ಬೇಕಾಗಿದೆ ಎಂದರು.
ಇದನ್ನೂ ಓದಿ: ಹಾವೇರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಇದನ್ನೂ ಓದಿ: ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಏ.17ರಂದು ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಡಿಸಿಎಂ ಡಿಕೆಶಿ