ಮಂಗಳೂರು: ಕರಾವಳಿಯಿಂದ ವಿದೇಶಕ್ಕೆ ತೆರಳಿ ಬದುಕು ಕಟ್ಟಿಕೊಳ್ಳುವ ಅದೆಷ್ಟೋ ಯುವಕರು ಇದ್ದಾರೆ. ಅವರ ಮಧ್ಯೆ ಕೆಲ ಯುವಕರು ಕುಟುಂಬ ಮಾತ್ರವಲ್ಲ ತಮ್ಮ ಸುತ್ತಮುತ್ತಲಿನ ಇತರ ಬಡ ಕುಟುಂಬಗಳಿಗೂ ನೆರವಾಗುತ್ತಿರುತ್ತಾರೆ. ಇಂತಹದ್ದೇ ಯುವಕರ ತಂಡವೊಂದು ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಾ, ಅಲ್ಲಿಯೇ ಜೆರುಸಲೇಂ ಸ್ಟಾರ್ ಕ್ರಿಕೆಟರ್ಸ್ ಎಂಬ ಕ್ರಿಕೆಟ್ ತಂಡ ಕಟ್ಟಿ ಮಂಗಳೂರಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಿದೆ.
ಇಸ್ರೇಲ್‌ನಲ್ಲಿರುವ ಕರಾವಳಿ ಮೂಲದ ಯುವಕರೇ ಸೇರಿ ಕಟ್ಟಿಕೊಂಡ ತಂಡ ಜೆರುಸಲೇಂ ಸ್ಟಾರ್ ಕ್ರಿಕೆಟರ್ಸ್. ಈ ತಂಡ ಕ್ರಿಕೆಟ್ ಆಡುವುದು ಮಾತ್ರವಲ್ಲ, ಈ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದೀಗ ಈ ತಂಡ ಮಂಗಳೂರಿನ ಬಳ್ಳಾಲ್‌ಭಾಗ್ ಬಳಿಯ ವಿವೇಕನಗರದ ಕೊರಗ ಕುಟುಂಬಕ್ಕೆ ಸುಂದರವಾದ ಮನೆ ನಿರ್ಮಿಸಿಕೊಟ್ಟಿದೆ.
ಸುಂದರಿ - ಸುಗಂಧಿ ಸಹೋದರಿಯರು ಹಾಗೂ ಇವರ ಕುಟುಂಬ ದುಃಸ್ಥಿತಿಯಲ್ಲಿದ್ದ ಮನೆಯಲ್ಲಿ ವಾಸವಿದ್ದರು. ಮಳೆ ಬಂದರೆ ಸಾಕು ಮಾಡು ಸೋರುತ್ತಿತ್ತು. ಮನೆ ಸಂಪೂರ್ಣ ತೊಯ್ದು ತೊಪ್ಪೆಯಾಗುತ್ತಿತ್ತು. ಮಾಜಿ ಕಾರ್ಪೊರೇಟರ್ ಪ್ರಕಾಶ್ ಬಿ. ಸಾಲ್ಯಾನ್ ಮತ್ತು ಅವರ ಸಹೋದರ ಪ್ರದೀಪ್ ಸಾಲ್ಯಾನ್ ಈ ಕುಟುಂಬದ ಬಗ್ಗೆ ಜೆರುಸಲೇಂ ಸ್ಟಾರ್ ಕ್ರಿಕೆಟರ್ಸ್ ತಂಡಕ್ಕೆ ಮಾಹಿತಿ ನೀಡಿತ್ತು. ಈ ಕುಟುಂಬದ ಸಂಕಷ್ಟಕ್ಕೆ ಮರುಗಿದ ಅವರು ಮನೆ ಕಟ್ಟಿಕೊಡುವುದಕ್ಕೆ ಮುಂದಾದರು.

ಹಂಚಿನ ಹರಕಲು ಮುರುಕಲು ಮನೆಯನ್ನು ಸಂಪೂರ್ಣ ಕೆಡವಿ 12 ಲಕ್ಷ ರೂ. ವೆಚ್ಚದಲ್ಲಿ ಟಾಯ್ಲೆಟ್-ಬಾತ್‌ರೂಂ ಸಹಿತ ಒಂದು ಬಿಎಚ್‌ಕೆಯ ಸುಂದರವಾದ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸ್ಥಳೀಯರ ಕರಸೇವೆಯಲ್ಲಿ ಆರು ತಿಂಗಳಲ್ಲಿ ಸುಂದರವಾದ ಮನೆ ತಲೆಯೆತ್ತಿ ನಿಂತಿದೆ. ಗೃಹಪ್ರವೇಶವೂ ನಡೆದು ಮನೆಮಂದಿ ಮನೆಯಲ್ಲಿ ಸಂತೋಷದಿಂದ ವಾಸ್ತವ್ಯ ಹೂಡಿದ್ದಾರೆ. ಒಟ್ಟಿನಲ್ಲಿ ಊರು ಬಿಟ್ಟು ಪರ ಊರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದರೂ ಈ ಯುವಕರ ತಾಯ್ನೆಲದ ಬಡಜನತೆಯ ಬಗೆಗಿನ ಕಾಳಜಿ ನಿಜಕ್ಕೂ ಶ್ಲಾಘನೀಯ.

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ, "ಈ ಮನೆ ಕಟ್ಟಲು ಸಹಕಾರ ನೀಡಿದ ಪ್ರೇಮ್ ಬಳ್ಳಾಲ್ ಭಾಗ್ ಅವರು ಜೆರುಸಲೇಂ ಕ್ರಿಕೆಟ್ ಟೀಮ್ ತಂಡದ ರಾಜು ಪೂಜಾರಿ ಅವರ ನೇತೃತ್ವದಲ್ಲಿ ಈ ಮನೆ ನಿರ್ಮಾಣವಾಗಿದೆ. ಕರಾವಳಿಯಿಂದ ಇಸ್ರೇಲ್ಗೆ ದುಡಿಮೆಗೆ ತೆರಳಿದ ಯುವಕರು ತಮ್ಮ ದುಡಿಮೆಯ ಹಣದಲ್ಲಿ ಈ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸುಂದರಿ ಅವರ ಮನೆ ದುಸ್ಥಿತಿಯಲ್ಲಿತ್ತು. ಇದನ್ನು ನೋಡಿ ಅವರು 12 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿ ಕೊಟ್ಟಿದ್ದಾರೆ ಎಂದರು.

ಮನೆಯೊಡತಿ ಸುಂದರಿ ಮಾತನಾಡಿ, "ನಮ್ಮ ಮನೆ ಬಹಳ ದುಸ್ಥಿತಿಯಲ್ಲಿತ್ತು. ಮಳೆ ಬಂದಾಗ ಸೋರುತ್ತಿತ್ತು. ಇದೀಗ ಹೊಸ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಈಗ ಮನೆ ತುಂಬಾ ಚೆನ್ನಾಗಿದೆ" ಎಂದು ಸಂತ ಹಂಚಿಕೊಂಡರು.
ಇದನ್ನೂ ಓದಿ: ದಾವಣಗೆರೆ: ಕಾನ್ಸ್ಟೇಬಲ್ ಆಗಿದ್ದ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಾಯಿಗೆ ಪೊಲೀಸರ ಸಹಾಯಹಸ್ತ