ತುಮಕೂರು: "ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ಇಡಬೇಕೆಂಬ ಪ್ರಸ್ತಾವನೆ ಬಂದಿತ್ತು. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದು, ಅವರು ಶೀಘ್ರದಲ್ಲೇ ಅನುಮತಿ ನೀಡಿ ಆದೇಶವನ್ನು ಹೊರಡಿಸಲಿದ್ದಾರೆ" ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಲಿದ್ದು. ಅದು ಶಾಶ್ವತವಾಗಿ ಇರಲಿದೆ. ಅದು ನಾವು ಅವರಿಗೆ ಕೊಟ್ಟ ಗೌರವ. ರೈಲ್ವೆ ಸಚಿವ ವಿ. ಸೋಮಣ್ಣ ಅವರು ಕೂಡ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಒಂದನ್ನು ಕಳುಹಿಸಿದ್ದಾರೆ. ಅವರು ಕೂಡ ಕೇಂದ್ರ ಸರ್ಕಾರದಲ್ಲಿ ಅದನ್ನು ಮಂಜೂರು ಮಾಡಿಸುವ ಕ್ರಮ ಕೈಗೊಳ್ಳಬೇಕು" ಎಂದರು.
"ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿ ಆಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರಿಗೆ ಗೌರವ ಸಮರ್ಪಣೆ ಮಾಡಲೆಂದು ಇಂದು ಬಂದಿದ್ದೇನೆ. ಅದೇ ಪ್ರಕಾರ ನಮ್ಮ ಕಿರಿಯ ಸ್ವಾಮೀಜಿ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಗೂ ಕೂಡ ನನ್ನ ನಮನಗಳನ್ನು ಸಲ್ಲಿಸಿದ್ದೇನೆ".
"ನಮಗೆ ನಮ್ಮ ಕುಟುಂಬಕ್ಕೂ ಮಠಕ್ಕೆ ಇರುವಂತಹ ಅವಿನಾಭಾವ ಸಂಬಂಧ, ವಿಶೇಷವಾಗಿ ಮಠದ ಹಿರಿಯರಿಗೂ ನಮ್ಮ ತಂದೆಗೆ ಇದ್ದ ಸಂಬಂಧ ಅದು ಯಾವತ್ತೂ ಕೂಡ ನಡೆದುಕೊಂಡು ಹೋಗುತ್ತದೆ. ನಾನಾಗಲಿ, ನನ್ನ ಸಹೋದರನಾಗಲಿ ಈ ಸಂಬಂಧವನ್ನು ಹಾಗೇ ನಡೆಸಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಹೋಗುತ್ತೇವೆ".
"ಇದೇ ಸಂದರ್ಭದಲ್ಲಿ ತುಮಕೂರಿನಲ್ಲಿ ಇರುವ ರೈಲ್ವೆ ಸ್ಟೇಷನ್ಗೆ ಸ್ವಾಮೀಜಿ ಅವರ ಹೆಸರಿಡಲು ಸರ್ಕಾರಕ್ಕೆ ಪ್ರಸ್ತಾವನೆ ಬಂದಿತ್ತು. ಆ ಪ್ರಸ್ತಾವನೆಯನ್ನು ನಾನು ಸಿಎಂ ಜತೆ ಮಾತನಾಡಿ, ಅವರ ಒಪ್ಪಿಗೆಯನ್ನು ಪಡೆಯಲಾಗುತ್ತದೆ. ಸಿಎಂ ಆದೇಶವನ್ನು ಹೊರಡಿಸಲಿದ್ದಾರೆ. ಮುಂದಿನ ದಿನದಲ್ಲಿ ತುಮಕೂರು ರೈಲ್ವೆ ಸ್ಟೇಷನ್ ಪರಮಪೂಜ್ಯ ಶಿವಕುಮಾರ ಸ್ವಾಮಿ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ" ಎಂದು ಗೃಹ ಸಚಿವರು ಹೇಳಿದರು.
5 ತಿಂಗಳು ತಡೆ ಬಗ್ಗೆ: " ಹೆಸರಿಡಲು ತಡವೇನು ಆಗಲಿಲ್ಲ. ಸರ್ಕಾರದಲ್ಲಿ ಪ್ರೊಸಿಜರ್ ಅಂತ ಇರುತ್ತದೆ. ಯಾವುದೇ ಒಂದು ರಸ್ತೆ, ಕಟ್ಟಡಗಳಿಗೆ ಹೆಸರಿಡಲು ಪ್ರಸ್ತಾವನೆ ಬಂದಾಗ ಅದನ್ನು ಪರಿಶೀಲಿಸಿ ಸಾಧಕ ಬಾಧಕಗಳನ್ನು ನೋಡಿ ಸರ್ಕಾರ ಅನುಮತಿಯನ್ನು ಕೊಡುತ್ತದೆ. ಹೀಗಾಗಿ ಸ್ವಲ್ಪ ತಡವಾಗಿರಬಹುದು" ಎಂದು ಅವರು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 118ನೇ ಜಯಂತಿ: ಶ್ರೀಗಳ ಗದ್ದುಗೆ ದರ್ಶನ ಪಡೆದ ಕೇಂದ್ರ ಸಚಿವ ರಾಜನಾಥ್ ಸಿಂಗ್
ಇದನ್ನೂ ಓದಿ: ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ರಾಜ್ಯ ಸರ್ಕಾರ ಹಿಂದೇಟು: ವಿ.ಸೋಮಣ್ಣ