ಬೆಂಗಳೂರು: ಬೆಂಗಳೂರಿನಲ್ಲಿ ಆಂಧ್ರ ಪ್ರದೇಶದ ಮಾದರಿಯನ್ನೂ ಮೀರಿದ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂದು ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಪೀಠವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
33 ಡಿಸಿಆರ್ಇ ಠಾಣೆ ಕಾರ್ಯಾರಂಭ: ಇಂದಿನಿಂದ 32 ಜಿಲ್ಲೆಗಳಲ್ಲಿ ಒಟ್ಟು 33 ಡಿಸಿಆರ್ಇ ಪೊಲೀಸ್ ಠಾಣೆಗಳು ಕಾರ್ಯಾರಂಭಿಸಲಿವೆ. ಎಸ್ಸಿ, ಎಸ್ಟಿ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಚಾರಣೆಗಾಗಿ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗುತ್ತಿದೆ. ಇಂದು ಸಾಂಕೇತಿಕವಾಗಿ ಒಂದು ಕೇಂದ್ರ ಡಿಸಿಆರ್ಇ ಠಾಣೆಯನ್ನು ಉದ್ಘಾಟಿಸಿದ್ದೇನೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಎರಡು ಠಾಣೆಗಳು ಇರಲಿವೆ. ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಮೇಲೆ ದಾಖಲಾಗುವ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆ ಇದೆ. ಹೀಗಾಗಿ, ಇಂಥ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE) ಈ ಠಾಣೆಗಳನ್ನು ಆರಂಭಿಸುತ್ತಿದೆ ಎಂದರು.
8,300 ಕೋಟಿ ರೂ ದುರ್ಬಳಕೆ ಮಾಡಿದ್ದು ಬಿಜೆಪಿ: ಬಜೆಟ್ ಗಾತ್ರ ಹೆಚ್ಚಾದಂತೆ ಎಸ್ಸಿಪಿ/ಟಿಎಸ್ಪಿ ಹಣ ಹೆಚ್ಚಾಗಬೇಕು. ಆದರೆ, ಬಿಜೆಪಿ ಸರ್ಕಾರ ಕಡಿಮೆ ಮಾಡಿತು. ಆದರೆ, ನಾವು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಯೋಜನಾಗಾತ್ರಕ್ಕೆ ತಕ್ಕಂತೆ ಹೆಚ್ಚಿಸಿದ್ದೀವಿ. ಈ ಬಾರಿ 42,018 ಕೋಟಿ ರೂಪಾಯಿಯನ್ನು ನಾವು ತೆಗೆದಿಟ್ಟಿದ್ದೇವೆ. 8,300 ಕೋಟಿ ಎಸ್ಸಿಎಸ್ಪಿ/ಟಿಎಸ್ಪಿ ಹಣ ದುರುಪಯೋಗ ಪಡಿಸಿಕೊಂಡಿದ್ದು ಬಿಜೆಪಿ. ಇವರು ನಾಚಿಕೆ ಇಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಂಬೇಡ್ಕರ್ ಅವರ ಆಶಯಗಳ ಜಾರಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ನಮ್ಮ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ವಿದ್ಯಾವಂತರೇ ಹೆಚ್ಚು ಜಾತಿವಾದಿಗಳಾಗುತ್ತಿರುವುದು ಸರಿಯಲ್ಲ. ಶಿಕ್ಷಣದ ಉದ್ದೇಶ ಜಾತಿವಾದಿಗಳಾಗುವುದಲ್ಲ. ಬಾಬಾ ಸಾಹೇಬ್ ಅವರು ಇಡೀ ದೇಶದ ಶಿಕ್ಷಣ ವಂಚಿತ ನೂರಾರು ಜಾತಿ ಸಮುದಾಯಗಳಿಗೆ ಶಿಕ್ಷಣ ಸಿಗಲು ಕಾರಣಕರ್ತರಾದರು ಎಂದು ಹೇಳಿದರು.
ಮುಸಲ್ಮಾನರನ್ನು ಓಲೈಸುತ್ತಿದೆ ಎಂಬುದು ಅಪಪ್ರಚಾರ: ಮುಸಲ್ಮಾನರು ಶಿಕ್ಷಣದಿಂದ ವಂಚಿತರಾಗಬಾರದು, ಅವಕಾಶಗಳಿಂದ ವಂಚಿತರಾಗಬಾರದು. ಹೀಗಾಗಿ, ಸಂವಿಧಾನ ಹೇಳಿದಂತೆ ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಅವಕಾಶ ಕಲ್ಪಿಸುತ್ತಿದ್ದೇವೆ. ಇಷ್ಟಕ್ಕೇ ಕಾಂಗ್ರೆಸ್ ಬರೀ ಮುಸಲ್ಮಾನರನ್ನು ಓಲೈಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಹುತ್ವದ ದೇಶ ನಿರ್ಮಾಣಕ್ಕೆ, ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರು ಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ ಎಂದು ತಿಳಿಸಿದರು.