ಊಟಕ್ಕೆ ಸೇರುವುದೇ ಅಪರಾಧ ಎನ್ನುವ ರೀತಿ ಆಡುತ್ತೀರಲ್ಲ: ಸಿಎಂ ಗರಂ
ಡಿನ್ನರ್ ಸಭೆಯ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿ ಮಾಧ್ಯಮಕ್ಕೆ ಉತ್ತರಿಸಿದ್ದು, ಊಟಕ್ಕೆ ನಾವು ಸೇರಲೇಬಾರದಾ? ಎಂದು ಪ್ರಶ್ನಿಸಿದ್ದಾರೆ.

Published : October 13, 2025 at 1:45 PM IST
ಬೆಂಗಳೂರು: "ಊಟಕ್ಕೆ ಸೇರುವುದು ಅಪರಾಧ ಎನ್ನುವ ರೀತಿ ಆಡುತ್ತೀರಲ್ಲ" ಎಂದು ಸಿಎಂ ಸಿದ್ದರಾಮಯ್ಯ ಅವರು ಸಿಟ್ಟನ್ನು ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, "ಊಟಕ್ಕೆ ನಾವು ಸೇರಲೇ ಬಾರದಾ?. ನನಗೆ ಅರ್ಥ ಆಗುತ್ತಿಲ್ಲ. ಬಿಜೆಪಿಯ ಮಾತು ಕೇಳಿ ಪ್ರಶ್ನೆ ಕೇಳಿದರೆ ಹೇಗೆ?. ಆಗಾಗ ಊಟಕ್ಕೆ ಸೇರುತ್ತಿರುತ್ತೇವೆ. ತಪ್ಪೇನು ಅದರಲ್ಲಿ. ಮತ್ತೆ ಏಕೆ ಅದನ್ನು ಕೇಳುತ್ತೀರ" ಎಂದು ಸಿಟ್ಟಿನಲ್ಲೇ ಮರು ಪ್ರಶ್ನಿಸಿದರು. ಇದೇ ವೇಳೆ ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ನಿಷೇಧಿಸುವ ಸಂಬಂಧ ಪ್ರತಿಕ್ರಿಯೆ ನೀಡದೆ ತೆರಳಿದರು.
"ಬಹಳ ದಿನ ಆಗಿತ್ತು ಊಟಕ್ಕೆ ಸೇರಿ. ಹಾಗಾಗಿ ಒಂದು ಊಟ ಆಯೋಜನೆ ಮಾಡಿದ್ದೇವೆ. ಕ್ಯಾಬಿನೆಟ್ ರೀ ಶಫಲ್ ವಿಚಾರ ಅದ್ಯಾವುದು ಇಲ್ಲ. ಅದಕ್ಕೂ ಈ ಭೋಜನಕೂಟಕ್ಕೂ ಸಂಬಂಧ ಇಲ್ಲ" ಎಂದು ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಎಂ ದಿಢೀರ್ ಸಚಿವರುಗಳಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ಹಲವು ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ.
ನವೆಂಬರ್ ಕ್ರಾಂತಿಯ ಸದ್ದು ಕೇಳಿ ಬರುತ್ತಿರುವ ಮಧ್ಯೆ ಕಾಂಗ್ರೆಸ್ನಲ್ಲಿ ಡಿನ್ನರ್ ಸಭೆ, ಪ್ರತ್ಯೇಕ ಸಭೆಗಳು ಮತ್ತೆ ಗರಿಗೆದರಿದಂತೆ ಕಾಣುತ್ತಿದೆ. ಬಿಹಾರ ಚುನಾವಣೆ ಬಳಿಕ ಬದಲಾವಣೆ, ಸಂಪುಟ ಪುನಾರಚನೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಎರಡೂವರೆ ವರ್ಷ ಮುಗಿಸಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಆಗಲಿದೆ ಎಂಬ ಕೂಗು ಸದ್ದು ಮಾಡುತ್ತಿದೆ.
ಬಿಹಾರ ಚುನಾವಣೆ ನಂತರ ಸಂಪುಟ ಪುನಾರಚನೆ ಆಗಲಿದ್ದು, ಸಂಪುಟದ ಅರ್ಧದಷ್ಟು ಸಚಿವರು ಬದಲಾಗೋ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಸಭೆ ನಡೆಸಿರುವುದು ಮತ್ತೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ರಾಜ್ಯ ರಾಜಕೀಯದಲ್ಲಿ ಬದಲಾವಣೆ-ಮುಖ್ಯಸಚೇತಕ: ಶನಿವಾರ (ಅ.11) ಈ ಬಗ್ಗೆ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ಅವರು ಹಾವೇರಿಯಲ್ಲಿ ಹೇಳಿಕೆ ನೀಡಿದ್ದರು. " ಬಿಹಾರ ಚುನಾವಣೆಯಾದ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಸರ್ಕಾರ ಎರಡೂವರೆ ವರ್ಷ ಅಧಿಕಾರ ಪೂರೈಸಲಿದ್ದು, ಕೆಲ ಬದಲಾವಣೆಯಾಗಲಿದೆ. ರಾಜ್ಯ ಸಚಿವ ಸಂಪುಟದಲ್ಲಿರುವ ಕೆಲ ಸಚಿವರಿಗೆ ಪಕ್ಷ ಸಂಘಟನೆ ಅವಕಾಶ ನೀಡುವ ಮತ್ತು ಹೊಸಬರಿಗೆ ಸಚಿವ ಸ್ಥಾನ ಅವಕಾಶ ಕೊಡುವ ಚಿಂತನೆ ನಡೆದಿದೆ" ಎಂದು ಅವರು ಮಾಹಿತಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಡಿಸೆಂಬರ್ನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ: ಯತೀಂದ್ರ ಸಿದ್ದರಾಮಯ್ಯ

