ಬೆಂಗಳೂರು: ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರ ಅನುಸರಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅವರು ಬಯಸಿದಂತ ಸಮಾಜ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ನಿಮಿತ್ತ ವಿಧಾನಸೌಧದ ಪೂರ್ವ ದ್ವಾರದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು. ನಮ್ಮ ಸರ್ಕಾರ ಅತ್ಯಂತ ಗೌರವ, ನಮ್ರತೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸುತ್ತಿದೆ. ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದರು.
ಎಲ್ಲರೂ ಮನುಷ್ಯರಾಗಿ ಬದುಕಬೇಕೆಂದು ಬಯಸಿದವರು: ಅಂಬೇಡ್ಕರ್ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಿಸಲು ಶ್ರಮಿಸಿದವರು. ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್ ಅವರು ತಮ್ಮ ಸ್ವಾರ್ಥಕ್ಕಾಗಿ ಓದಿಕೊಳ್ಳದೆ ಶೋಷಿತರ, ಅಸ್ಪೃಶ್ಯತೆಯಿಂದ ನರಳುತ್ತಿರುವವ ಜನರಿಗೆ ವಿಮೋಚನೆ ನೀಡಲೆಂದೇ ಜ್ಞಾನಾರ್ಜನೆ ಮಾಡಿಕೊಂಡಿದ್ದರು. ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ಸಿಗಬೇಕು. ಹಾಗಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಅಸ್ಪೃಶ್ಯತೆ ನಾಶವಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು ಎಂದು ತಿಳಿಸಿದರು.
ಮನವಾದಿಗಳ ವಿರುದ್ಧ ಆಕ್ರೋಶ: ಮನುವಾದಿಗಳು ಇಂದು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ತಮ್ಮ ಸ್ವಂತ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಕೆಲವರು ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ತಮಗೆ ಸೇರಿದವರೆಂದು ಬಿಂಬಿಸಲು ಪ್ರಾರಂಭಿಸಿದ್ದಾರೆ. ಮಹಾತ್ಮಾ ಗಾಂಧಿಯವರನ್ನು ಕೊಂದವರು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ ಮನುವಾದಿಗಳೇ ಇಂದು ಅವರನ್ನು ತಮ್ಮ ಸ್ವಂತ ಎನ್ನಲು ಪ್ರಾರಂಭಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ ನಾಲ್ಕೈದು ದಿನಗಳಲ್ಲೇ 'ದಿ ಆರ್ಗನೈಜರ್' ಪತ್ರಿಕೆಯಲ್ಲಿ ವಿರೋಧ ಮಾಡಿ ಬರೆದಿದ್ದರು. ಈಗ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತ್ತು ಎಂದು ಮಾತನಾಡುತ್ತಾರೆ. ಅಂಬೇಡ್ಕರ್ ಅವರೇ ನನ್ನನ್ನು ಸೋಲಿಸಿದವರು ಸಾವರ್ಕರ್ ಮತ್ತು ಕಮ್ಯುನಿಸ್ಟ್ ನಾಯಕ ಎಸ್.ಎ ಡಾಂಗೆ ಎಂದು ಪತ್ರ ಬರೆದಿದ್ದರು ಎಂದರು.
ಬಿಜೆಪಿ ಸ್ವಾರ್ಥಕ್ಕಾಗಿ ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನು ತಮ್ಮದೇ ಸ್ವಂತ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರು 'ನಾನು ಹಿಂದೂ ಆಗಿ ಹುಟ್ಟಿದೆ ಆದರೆ ಹಿಂದೂವಾಗಿ ಸಾಯಲಾರೆ' ಎಂದು ಹೇಳಿದ್ದರು. ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಿಸಿ, ಅದು ಸಾಧ್ಯವಾಗುವುದಿಲ್ಲ ಎಂದು ಅರಿವಾದ ನಂತರ ಹಿಂದೂ ಧರ್ಮವನ್ನು ತ್ಯಜಿಸಿ, ಮಾನವೀಯತೆ ಮತ್ತು ಸಮಾನತೆ ಇದ್ದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ: ಬಿಜೆಪಿಯವರು ಜವಾಹರಲಾಲ್ ನೆಹರೂ ಅವರನ್ನು ವಿರೋಧಿಸುತ್ತಾರೆ. ಅಂಬೇಡ್ಕರ್ ಅವರನ್ನು ನೆಹರೂ ವಿರೋಧಿಸಲಿಲ್ಲ. ಹಾಗಿದ್ದರೆ, ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಲು ಆಯ್ಕೆ ಮಾಡುತ್ತಿರಲಿಲ್ಲ. ಹಿಂದೂ ಕೋಡ್ ಬಿಲ್ ತಂದಾಗ ನೆಹರೂ ಅದರ ಪರವಾಗಿಯೇ ಇದ್ದರು. ನಮ್ಮಲ್ಲಿರುವ ಕೆಲವು ಶಕ್ತಿಗಳು ನೆಹರೂ ಅವರು ಅದನ್ನು ಜಾರಿ ಮಾಡಲು ಬಿಡಲಿಲ್ಲ. ಆದರೆ ಹಿಂದೂ ಕೋಡ್ ಬಿಲ್ನಲ್ಲಿರುವ ಅಂಶಗಳನ್ನು ನೆಹರೂ ಅವರು ಅವರ ಅಧಿಕಾರದ ಅವಧಿಯಲ್ಲಿ ಜಾರಿ ಮಾಡುವ ಪ್ರಯತ್ನ ಮಾಡಿದ್ದರು ಎಂದರು.
ಜಾತಿ ಜನಗಣತಿ ವರದಿ ಬಗ್ಗೆ ಏ.17ರಂದು ತೀರ್ಮಾನ: ಏಪ್ರಿಲ್ 17 ರಂದು ಸಚಿವ ಸಂಪುಟದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯ ಬಗ್ಗೆ ಚರ್ಚಿಸಲೆಂದೇ ಕರೆಯಲಾಗಿದೆ. ಚರ್ಚೆ ಮಾಡಿದ ನಂತರ ಈ ಬಗ್ಗೆ ಮಾತನಾಡುವುದಾಗಿ ಸಿಎಂ ತಿಳಿಸಿದರು.
ಇದನ್ನೂ ಓದಿ: ಬೆಳಗಾವಿಯ ಈ ಗಲ್ಲಿಗೆ ಅಂಬೇಡ್ಕರ್ ಬಂದಿದ್ದರು: ಪ್ರೀತಿಯ ಭೋಜನ, ಸತ್ಕಾರ ಸ್ವೀಕರಿಸಿದ್ದರು
ಇದನ್ನೂ ಓದಿ: ವಿಕಾಸಸೌಧದ ಮುಂದಿನ ಖಾಲಿ ಜಾಗದಲ್ಲಿ 87 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಸ್ಪೂರ್ತಿ ಸೌಧ ನಿರ್ಮಾಣಕ್ಕೆ ಸಂಪುಟ ಅಸ್ತು