ಬೆಂಗಳೂರು: ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ತುರ್ತು ಸಭೆ ನಡೆಸಿದ್ದಾರೆ.
ತಮ್ಮ ನೆಚ್ಚಿನ ಆಟಗಾರರನ್ನು ಸನಿಹದಿಂದ ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂಗೆ ಜನಸಾಗರವೇ ಹರಿದು ಬಂದಿತ್ತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ಧಾರೆ. ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 19 ರಲ್ಲಿ 7 ಜನ ಸಾವು: ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 19 ಗಾಯಾಳುಗಳ ಪೈಕಿ 7 ಜನ ಮೃತಪಟ್ಟರೆ, ವೈದೇಹಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 8 ಜನ ಗಾಯಾಳುಗಳ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬೌರಿಂಗ್ ಹಾಗೂ ವೈದೇಹಿ ಆಸ್ಪತ್ರೆಗೆ ಭೇಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಸೂಕ್ತ ಭದ್ರತೆ ಒದಗಿಸಲು ಆಡಳಿತಕ್ಕೆ ಸಿಎಂ ಸೂಚನೆ: ಬಳಿಕ ಕಾವೇರಿ ನಿವಾಸದಲ್ಲಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಸಿಎಂ, ವಿದ್ಯಾರ್ಥಿಗಳು, ಯುವಕರು, ಯುವತಿಯರು ಮನೆಗೆ ಸೇಫಾಗಿ ತೆರಳಲು ವ್ಯವಸ್ಥೆ ಮಾಡಲು ಸೂಚಿಸಿದರು. ವಿಧಾನಸೌಧ, ಸ್ಟೇಡಿಯಂನ ಸುತ್ತ ಸಂಚಾರ ತೆರವುಗೊಳಿಸಿ ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಹಾಗೂ ಅಗತ್ಯ ಭದ್ರತೆ ಕಲ್ಪಿಸಲು ಸೂಚಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಪ್ರಾಣ ಕಳೆದುಕೊಂಡು, ಮತ್ತೆ ಕೆಲವರು ಗಂಭೀರ ಗಾಯಗೊಂಡ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ.
— Siddaramaiah (@siddaramaiah) June 4, 2025
ಈ ದುರಂತದ ನೋವು ಗೆಲುವಿನ ಸಂಭ್ರಮವನ್ನೂ ಅಳಿಸಿಹಾಕಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡು ಆಸ್ಪತ್ರೆಯಲ್ಲಿ…
ಎಕ್ಸ್ ಖಾತೆಯಲ್ಲಿ ಸಿಎಂ ಸಂತಾಪ: ''ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಪ್ರಾಣ ಕಳೆದುಕೊಂಡು, ಮತ್ತೆ ಕೆಲವರು ಗಂಭೀರ ಗಾಯಗೊಂಡ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಈ ದುರಂತದ ನೋವು ಗೆಲುವಿನ ಸಂಭ್ರಮವನ್ನೂ ಅಳಿಸಿಹಾಕಿದೆ'' ಎಂದು ಸಿಎಂ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.
''ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಇಂತಹದ್ದೊಂದು ನೂಕುನುಗ್ಗಲು ನಡೆದು ಜನಸಂದಣಿಯನ್ನು ನಿಯಂತ್ರಣ ಮಾಡಲಾಗದೆ ಅಹಿತಕರ ಘಟನೆ ನಡೆಯಬಹುದೆಂಬ ನಿರೀಕ್ಷೆಯಿಂದಲೇ ತಂಡದ ವಿಜಯಯಾತ್ರೆಗೆ ಅವಕಾಶ ನೀಡದೆ ಮುಂಜಾಗ್ರತೆ ವಹಿಸಲಾಗಿತ್ತು. ಹೀಗಿದ್ದರೂ ಕ್ರೀಡಾಂಗಣದ ಬಳಿ ಜನ ಕಿಕ್ಕಿರಿದು ಸಾಗರದಂತೆ ಸೇರಿದ್ದ ಕಾರಣ ನೂಕುನುಗ್ಗಲು ನಡೆದು ಕಾಲ್ತುಳಿತದಿಂದ ಈ ಅವಘಡ ಸಂಭವಿಸಿದೆ. ಪ್ರೀತಿ - ಅಭಿಮಾನ ಈ ಎಲ್ಲಕ್ಕಿಂತ ಜೀವ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಂಡು, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ'' ಎಂದು ಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆ ಬಗ್ಗೆ ಡಿಕೆಶಿ ಪ್ರತಿಕ್ರಿಯೆ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಕುರಿತು ನಿಖರ ಮಾಹಿತಿ ಇಲ್ಲ. ಎಲ್ಲ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಎಂದರು.
ರಾಜ್ಯದ ಜನರ ಕ್ಷಮೆ ಯಾಚಿಸುತ್ತೇನೆ ಎಂದ ಡಿಸಿಎಂ: ಮೊದಲಿಗೆ ವಿಜಯಯಾತ್ರೆ ನಡೆಸಲು ಉದ್ದೇಶಿಸಿದ್ದೆವು. ಆದರೆ, ಭದ್ರತೆ ಹಿನ್ನೆಲೆ ಅದನ್ನು ರದ್ದು ಮಾಡಿದೆವು. ಪೊಲೀಸರು ಮರೆವಣಿಗೆ ಮಾಡುವುದು ಅಪಾಯಕಾರಿ ಎಂದ ಕಾರಣ ಅದನ್ನು ಕೈಬಿಟ್ಟೆವು ಎಂದು ತಿಳಿಸಿದರು. ಮಳೆ ಬಂದ ಕಾರಣ ಜನಸಂದಣಿಯನ್ನು ನಿಯಂತ್ರಣ ಮಾಡಲು ಅಸಾಧ್ಯವಾಯಿತು. ಯುವಕರ ಮೇಲೆ ಲಾಠಿ ಪ್ರಹಾರ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕಾಗಿ ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆ ಎಂದರು.