ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಂಭವಿಸಿದ ಸಾವು - ನೋವಿನ ನೇರ ಹೊಣೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಹೊರಬೇಕಿದೆ. ಅವರು ಅಧಿಕಾರಿಗಳ ಮೂತಿಗೆ ಒರೆಸದೇ, ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಕುರಿತು ಹೈಕೋರ್ಟ್ನ ಪ್ರಸಕ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಯಾರ ತಪ್ಪೆಂಬುದು ಹೊರ ಬರಲಿ. ಪ್ರಕರಣದ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ನೀವು ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ನಾವು ಸಿದ್ಧ ಎಂದು ಸರಕಾರ ತಿಳಿಸಲಿ ಎಂದು ಸವಾಲೆಸೆದರು.
ಸರ್ಕಾರದ ತಪ್ಪಿಲ್ಲ ಎಂದರೆ ಕಮಿಷನರ್ ಅಮಾನತು ಮಾಡಿದ್ದೇಕೆ?: ಬೆಂಗಳೂರು ಪೊಲೀಸ್ ಕಮಿಷನರ್ ಸರಕಾರದ ಅಂಗವೇ ಆಗಿದ್ದಾರೆ. ಸರಕಾರದ್ದೇನೂ ತಪ್ಪಿಲ್ಲವೆಂದಾದರೆ ಅವರನ್ನು ಅಮಾನತು ಮಾಡುವುದು ಸರಕಾರಕ್ಕೆ ಕಪ್ಪು ಚುಕ್ಕಿ ಎಂದು ಯಾಕೆ ಅನಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ಇವತ್ತು ಆರ್ಸಿಬಿಯವರು, ಮ್ಯಾನೇಜ್‍ಮೆಂಟ್ ತಂಡದವರನ್ನೂ ಬಂಧಿಸಿದ್ದಾರೆ. ಯಾಕೆ ನಿಮ್ಮನ್ನು ಬಂಧಿಸಬಾರದು? ನಟ ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಒಬ್ಬರು ಸತ್ತಾಗ ಅಲ್ಲು ಅರ್ಜುನ್‍ರನ್ನು ಮನೆಯಿಂದ ಎಳೆದುಕೊಂಡು ಬಂದಿದ್ದರು. ಅಲ್ಲಿಯೂ ಕಾಂಗ್ರೆಸ್ ಸರಕಾರ ಇತ್ತು. ಅವರಂತೆ ಇಲ್ಲಿ ಯಾಕೆ ಆಗುತ್ತಿಲ್ಲ ಎಂದು ಕೇಳಿದರು.
ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿಯವರು ಈಗ ಎಲ್ಲಿದ್ದಾರೆ? ಸುರ್ಜೇವಾಲಾ ಎಲ್ಲಿದ್ದೀರಪ್ಪ ನೀವು? ಎಂದು ಪ್ರಶ್ನಿಸಿದರು.
ಪೋಷಕರ ಜೀವನೋತ್ಸಾಹ ಕಸಿದ ಸಾವು: ಕರ್ನಾಟಕ ರಾಜ್ಯವು ಶೋಕಾಚರಣೆಯಲ್ಲಿದೆ. ಇರುವ ಒಬ್ಬೊಬ್ಬರೇ ಮಕ್ಕಳನ್ನು ತಂದೆ- ತಾಯಂದಿರು ಕಳಕೊಂಡಿದ್ದಾರೆ. ನನ್ನ ಕ್ಷೇತ್ರದ ಎಂ.ಟೆಕ್ ಓದುವ ಹುಡುಗನೊಬ್ಬ ಮೃತಪಟ್ಟಿದ್ದು, ಅವನ ಮನೆಗೆ ಹೋಗಬೇಕೆಂದಿದ್ದೆ. ಮೃತನ ತಂದೆ ಎಂಎಸ್‍ಎಂಇ ಕೈಗಾರಿಕೋದ್ಯಮಿ. ಅವರ ಕುಟುಂಬ ತೀವ್ರ ಖಿನ್ನತೆಗೆ ಸಿಲುಕಿದ್ದು, ಮಗನ ಮೃತದೇಹವನ್ನೇ ಮನೆಗೆ ತರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾರೂ ನೋಡಲು ಬರಬೇಡಿ ಎಂದು ಹೇಳಿದ್ದಾಗಿ ವಿವರಿಸಿದರು. ಒಬ್ಬನೇ ಮಗನನ್ನು ಕಳಕೊಂಡ ನಾವ್ಯಾಕೆ ಬದುಕಿರಬೇಕು ಎಂಬ ರೀತಿಯಲ್ಲಿ ತಂದೆ ತಾಯಿ ಮಾತನಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರಕ್ಕೆ ಗಾಯಾಳುಗಳ ಮಾಹಿತಿ ಇಲ್ಲ: ಕರ್ನಾಟಕದಲ್ಲಿ 11 ಜನರು ಸತ್ತಿದ್ದಾರೆ. 70ಕ್ಕೂ ಹೆಚ್ಚು ಜನರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಬಿಕಾಂ ಓದುವ ಹುಡುಗನ ಕಾಲು ಮುರಿದಿದೆ. ನಾವು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳಿಗೆ ಫೋನ್ ಮಾಡಿ ಒಳ್ಳೆಯ ಆಸ್ಪತ್ರೆಗೆ ಸೇರಿಸಲು ಒತ್ತಾಯಿಸಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯದರ್ಶಿಗಳಿಗೆ 70 ಜನರ ಮಾಹಿತಿ ಇಲ್ಲ; ಅವರೆಲ್ಲ ಎಲ್ಲಿದ್ದಾರೆ? ಅದೆಲ್ಲವನ್ನೂ ಸರಕಾರ ಮುಚ್ಚಿ ಹಾಕುತ್ತಿದೆ ಎಂದು ಆಕ್ಷೇಪಿಸಿದರು. ವೈದೇಹಿ ಆಸ್ಪತ್ರೆಯಲ್ಲಿ ಗಾಯಾಳುಗಳ ಕುಟುಂಬವೇ ಬಿಲ್ ಕಟ್ಟುತ್ತಿದೆ. ಸರಕಾರ ತಾವು ಕೊಡುವುದಾಗಿ ಹೇಳುತ್ತಿದೆ ಎಂದು ದೂರಿದರು. ಯಾವಾಗ ಕೊಡುತ್ತೀರಿ? ಎಂದು ಪ್ರಶ್ನೆ ಮಾಡಿದರು.
ಪದವಿ ಓದುವ ಒಂದು ಹೆಣ್ಮಗುವಿನ ಗರ್ಭಕೋಶಕ್ಕೆ ತೊಂದರೆಯಾಗಿದೆ. ಒಂದೇ ದಿನದಲ್ಲಿ ತಾಯಿ ಖಿನ್ನತೆಗೆ ಒಳಗಾಗಿ ಅಳುತ್ತ ಕೂತಿದ್ದಾರೆ. ಒಂದು ಪೊಲೀಸ್ ಇಲ್ಲ; ಸರಕಾರದವರು ಹೋಗಿ ನೋಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲಿ ಹೋದರೆ ರೋಗಿ ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಇದು ಸರಕಾರದ ವ್ಯವಸ್ಥೆ ಎಂದು ಟೀಕಿಸಿದರು.
ಮುಖ್ಯಮಂತ್ರಿಯವರು ಮೊದಲು ತನಿಖೆಗೆ ಜಿಲ್ಲಾಧಿಕಾರಿ (ಡಿ.ಸಿ.) ಜಗದೀಶ್ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದರು. ಒಬ್ಬ ಡಿಸಿಯಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿ ತನಿಖೆ ಮಾಡಲು ಸಾಧ್ಯವೇ? ತನಿಖೆ ಮಾಡಲು ಅವರಿಗೆ ಧೈರ್ಯ ಇದೆಯೇ ಎಂದು ಕೇಳಿದರು. ಉಡುಪಿ ಡಿ.ಸಿ. ಆಗಿದ್ದ ಜಗದೀಶ್ ಅವರೊಬ್ಬ ಪಾಪದ ವ್ಯಕ್ತಿ ಎಂದರು.
ಏಕೆ ಅವರೊಬ್ಬರೇ ಸಿಗುತ್ತಾರಾ?: ನಾವು ಆಕ್ಷೇಪಿಸಿದ ಬಳಿಕ ನ್ಯಾ. ಮೈಕೆಲ್ ಡಿಕುನ್ಹಾ ಅವರ ಸಮಿತಿ ರಚಿಸಲಾಗಿದೆ. ಅವರು ಈಗಾಗಲೇ ಕೋವಿಡ್ ಹಗರಣಗಳ ಕುರಿತ ತನಿಖೆ ಮಾಡುತ್ತಿದ್ದಾರೆ. ಅದೇ ವರದಿಯನ್ನೂ ಅವರು ಕೊಟ್ಟಿಲ್ಲ; ಅವರಿಗೆ ಎರಡನೇ ಜವಾಬ್ದಾರಿ ಯಾಕೆ? ನಿವೃತ್ತ ನ್ಯಾಯಾಧೀಶರ ಕುರಿತು ನಮ್ಮದೇನೂ ವಿರೋಧ ಇಲ್ಲ. ಆದರೆ, ಅವರೊಬ್ಬರೇ ನಿಮಗೆ ಸಿಗುತ್ತಾರಾ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಉದ್ದೇಶ ಏನು? ಎಂದು ಕೇಳಿದರಲ್ಲದೆ, ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆಂದೇ ಜಗದೀಶ್ ಮತ್ತು ನ್ಯಾ. ಮೈಕೆಲ್ ಡಿಕುನ್ಹಾ ಅವರಿಗೆ ತನಿಖೆ ವಹಿಸಿದ್ದಾರೆ ಎಂದು ಆರೋಪಿದರು.
ತಪ್ಪಿಸಿಕೊಳ್ಳುವ ಯತ್ನ: ಸಿದ್ದರಾಮಯ್ಯನವರು ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್.ಸಿ.ಬಿ. ತಂಡಕ್ಕೆ ಅಭಿನಂದನೆ ಇರುವ ಕುರಿತು, ಹಬ್ಬದ ವಾತಾವರಣದ ಬಗ್ಗೆ ಹಾಗೂ ಎಲ್ಲರೂ ಬರುವಂತೆ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದರು ಎಂದು ವಿವರಿಸಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯು 3ರಂದು ಒಂದು ಪತ್ರ ಬರೆದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ತಿಳಿಸಿದ್ದರು. ಡಿಪಿಆರ್ ಕಾರ್ಯದರ್ಶಿಗೆ ಈ ಪತ್ರ ಬರೆದಿದ್ದರು ಎಂದು ಗಮನ ಸೆಳೆದರು. ನಿಮ್ಮ ಡಿಪಿಆರ್ ಕಾರ್ಯದರ್ಶಿ, ನಿಮ್ಮ ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳೇ ಇದು ನೀವು ನಡೆದುಕೊಂಡ ರೀತಿ ಎಂದು ಟೀಕಿಸಿದರು.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣ: ಆರ್ಸಿಬಿ, ಡಿಎನ್ಎಯ ಬಂಧಿತ ನಾಲ್ವರಿಗೆ ಜೂ.19ರವರೆಗೆ ನ್ಯಾಯಾಂಗ ಬಂಧನ