ನವದೆಹಲಿ/ಬೆಂಗಳೂರು: ರಾಷ್ಟ್ರಪತಿಗಳಿಂದ ಅನುಮೋದನೆಯಾಗದಿರುವ ಏಳು ಬಿಲ್ಗಳ ಬಗ್ಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಬಿಲ್ಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದು, ಅವುಗಳನ್ನು ತರಿಸಿ ಅನುಮೋದನೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದೇನೆ. ಒಟ್ಟು ಏಳು ಬಿಲ್ ಅಂಗೀಕಾರ ಆಗಿಲ್ಲ. ಯಾವ ಯಾವ ಬಿಲ್ ಅಂತಾ ವಿವರಣೆ ಕೊಟ್ಟಿದ್ದೇನೆ. ರಾಷ್ಟ್ರಪತಿ ಗಳು ಸಮರ್ಪಕ ಉತ್ತರ ಕೊಟ್ಟಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿ ಬಾಕಿ ಉಳಿದಿರುವ ವಿಧೇಯಕಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಯಾವ ಯಾವ ಬಿಲ್ಗಳು: ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ -2025, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ -2024, ನೋಟರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ -2025, ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ -2025, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ (ಕರ್ನಾಟಕ ತಿದ್ದುಪಡಿ) ವಿಧೇಯಕ -2015, ಅಪರಾಧ ಕಾನೂನು ತಿದ್ದುಪಡಿ (ಕರ್ನಾಟಕ ತಿದ್ದುಪಡಿ) ವಿಧೇಯಕ -2022 ಮತ್ತು ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿ ರುವ ಭೂಮಿ ಮೇಲಿನ ತೆರಿಗೆ ವಿಧೇಯಕ -2024 ಬಾಕಿ ಉಳಿದುಕೊಂಡಿದೆ.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 63 ಸಾವಿರ ಕೋಟಿ, ಅನ್ಯಾಯವಾಗಿದೆ. ರಾಜ್ಯಕ್ಕೆ ವಿಶೇಷ ಅನುದಾನ 5495 ಕೋಟಿ ಮೀಸಲಿಡಲಾಗಿತ್ತು. ಪೆರಿಫೆರಲ್ ರಿಂಗ್ ರೋಡ್ ಗೆ 3000 ಕೋಟಿ, ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ 3000ಕೋಟಿ ಸೇರಿದಂತೆ ಒಟ್ಟು 11495 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಒಟ್ಟಾರೆಯಾಗಿ 80000 ಕೋಟಿ ನಮಗೆ ಕಡಿಮೆಯಾಗಿದೆ. ಇದು ಬಹಳ ದೊಡ್ಡ ಮೊತ್ತವಾಗಿದೆ ಎಂಡ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆ ಶೇ 5 ರಷ್ಟಿದೆ. ಕರ್ನಾಟಕ 8.7% ಜಿಡಿಪಿಗೆ ಕೊಡುಗೆ ನೀಡುತ್ತಿದ್ದೇವೆ. 2011-12ರಲ್ಲಿ 7.6% ಇದ್ದದ್ದು, ಈಗ 8.7% ಕೊಡುಗೆ ನೀಡುತ್ತಿದೆ. ದೇಶಕ್ಕೆ ಜಿಎಸ್ ಟಿ ಕೊಡುಗೆ ನೀಡುವುದರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಜಿ.ಡಿ. ಪಿ ನಲ್ಲಿ ನಮ್ಮ ರಾಜ್ಯ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗಾಗಿ ಯಾವ ರಾಜ್ಯ ಹೆಚ್ಚು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಕೋರಲಾಗಿದೆ ಎಂದರು.
ತಲಾವಾರು ಆದಾಯವನ್ನು ಪರಿಗಣಿಸುವ ಮಾನದಂಡವನ್ನು ಶೇ.45 ರಿಂದ ಶೇ. 20 ಕ್ಕೆ ಇಳಿಸಬೇಕೆಂದು ಕೋರಲಾಗಿದೆ. ಕೇರಳ, ಆಂಧ್ರ, ತಮಿಳುನಾಡು ರಾಜ್ಯಗಳಿಗೆ ನೀಡಿದಂತೆ ಆದಾಯ ಕೊರತೆ ಅನುದಾನವನ್ನು ಕರ್ನಾಟಕಕ್ಕೂ ನೀಡಬೇಕು. ಇಲ್ಲವೇ ಯಾವುದೇ ರಾಜ್ಯಗಳಿಗೆ ನೀಡಬಾರದು. ರಾಜಸ್ವ ಹೆಚ್ಚಳದಲ್ಲಿ ಖರ್ಚಿಗಿಂತ ಆದಾಯ ಹೆಚ್ಚಿದ್ದು, ವಿತ್ತೀಯ ಕೊರತೆಯಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ. ರಾಜಸ್ವ ಹೆಚ್ಚಳದಲ್ಲಿದ್ದ ಕರ್ನಾಟಕ ಕಳೆದ ವರ್ಷದಿಂದ ವಿತ್ತೀಯ ಕೊರತೆ ಎದುರಿಸುತ್ತಿದ್ದು, ಮುಂದಿನ ವರ್ಷಕ್ಕೆ ಈ ಪರಿಸ್ಥಿತಿ ಸುಧಾರಿಸಲಿದೆ. ನಿರಂತರವಾಗಿ ವಿತ್ತೀಯ ಕೊರತೆಯಲ್ಲಿರುವ ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನವನ್ಹು ನೀಡಲಾಗುತ್ತದೆ. ಹಣಕಾಸಿನ ಕಾರ್ಯಕ್ಷಮತೆ ತೋರದಿರುವ ರಾಜ್ಯಗಳಿಗೆ ವಿತ್ತೀಯ ಕೊರತೆ ಅನುದಾನವನ್ನು ನೀಡುತ್ತಿರುವ ಕೇಂದ್ರದ ಕ್ರಮ ಸರಿಯಾದುದಲ್ಲ ಎಂದು ತಿಳಿಸಿದರು.
ವಿಶೇಷ ಅನುದಾನಕ್ಕೆ ಮನವಿ: ಬೆಂಗಳೂರು ಜಾಗತಿಕ ನಗರವಾಗಿದ್ದು, ನಗರದ ಬಂಡವಾಳ ಕಾರ್ಯಗಳಿಗೆ 1.15 ಲಕ್ಷ ಕೋಟಿ ಬೇಕಾಗಿದ್ದು, ಇದಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ. ಮಲೆನಾಡು ಮತ್ತು ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಪ್ರವಾಹದಿಂದಾಗುವ ಅನಾಹುತಗಳನ್ನು ನಿಭಾಯಿಸಲು ವಿಶೇಷ ಅನುದಾನ, ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
- ಇವುಗಳನ್ನು ಓದಿ: ಕೇಂದ್ರ ವಿತ್ತ ಸಚಿವೆ - ಸಿಎಂ ಭೇಟಿ; ಬೆಳವಣಿಗೆಗೆ ಪೂರಕವಾಗಿರುವ ವಿಧಾನ ಅನುಸರಿಸಲು 16ನೇ ಹಣಕಾಸು ಆಯೋಗಕ್ಕೆ ಸೂಚಿಸುವಂತೆ ಸಿಎಂ ಮನವಿ
- ಮದ್ಯದಂಗಡಿ ನವೀಕರಣ ಶುಲ್ಕ ಶೇ.50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರದ ಆದೇಶ: ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿ
- ಮಾವು ಬೆಳೆಗಾರರಿಗೆ ಗುಡ್ನ್ಯೂಸ್: ಹೆಚ್ಡಿಕೆ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು; MIS ಅಡಿ ಮಾವು ಖರೀದಿ